ಬಿಹಾರದಲ್ಲಿ ಜೆಡಿ-ಯು ಮತ್ತು ಬಿಜೆಪಿ ಮೈತ್ರಿಯಾಗಿ ಸರ್ಕಾರ ರಚನೆ ಮಾಡಿದ್ದು, ಇದೀಗ ಈ ಎರಡು ಪಕ್ಷಗಳ ನಡುವಿನ ಜಟಾಪಟಿ ಹೆಚ್ಚುತ್ತಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್( Bihar Chief Minister Nitish Kumar) ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಸಂಸದ ಛೆಡಿ ಪಾಸ್ವಾನ್, ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಗಾಗಿ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಜತೆಗೂ ಕೈ ಜೋಡಿಸಬಹುದು ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ, ಬಿಜೆಪಿ ವರಿಷ್ಠರು ಮುಖ್ಯಮಂತ್ರಿ ಹುದ್ದೆಯನ್ನು ನಿತೀಶ್ ಕುಮಾರ್ಗೆ ಕೊಟ್ಟು ಬಹುದೊಡ್ಡ ಪ್ರಮಾದ ಎಸಗಿದ್ದಾರೆ. ಬಿಹಾರದಲ್ಲಿ ಬಿಜೆಪಿ ಸಂಸದರು, ಶಾಸಕರು, ಎಂಎಲ್ಸಿಗಳು, ಕಾರ್ಯಕರ್ತರಿಗೆ ಬೆಲೆಯೇ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ.
ನಿತೀಶ್ ಕುಮಾರ್ ಮತ್ತು ಅವರ ಪಕ್ಷದವರು ಬಿಜೆಪಿಗರಿಗೆ ಬ್ಲ್ಯಾಕ್ಮೇಲ್ ಮಾಡಲು, ಲಾಭ ಪಡೆಯಲು ವಿವಾದಾತ್ಮಕ ವಿಚಾರಗಳನ್ನು ಪ್ರಸ್ತಾಪ ಮಾಡುತ್ತಿದ್ದಾರೆ. ಇನ್ನಾದರೂ ಬಿಜೆಪಿ ವರಿಷ್ಠರು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಜಾತಿ ಆಧಾರಿತ ಜನಗಣತಿ ನಡೆಸಬೇಕು ಎಂಬ ನಿತೀಶ್ ಕುಮಾರ್ ಬೇಡಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ ಬಳಿಕವೂ ಕೂಡ ಅವರ ಪಕ್ಷದವರು ಮತ್ತೆಮತ್ತೆ ಅದನ್ನೇ ಹೇಳುತ್ತಿದ್ದಾರೆ ಎಂದು ಪಾಸ್ವಾನ್ ಆರೋಪಿಸಿದ್ದಾರೆ.
2020ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಬೇಕು ಎಂದು ನಾವು ಹೇಳಿದ್ದೆವು. ಆದರೆ ನಮ್ಮ ಪಕ್ಷದ ವರಿಷ್ಠರು ಅದನ್ನು ತಿರಸ್ಕರಿಸಿದರು. ಇನ್ನು ಮುಂದೆ ಒಮ್ಮೆ ಮೈತ್ರಿ ಮಾಡಿಕೊಂಡೇ ಸ್ಪರ್ಧಿಸಿದರೂ, ಮುಖ್ಯಮಂತ್ರಿ ಹುದ್ದೆ ಎರಡೂ ಪಕ್ಷಗಳವರಿಗೆ ಎರಡೂವರೆ ವರ್ಷದ ಅವಧಿಗೆ ಸಿಗಲಿ ಎಂಬ ವಿನಂತಿಯನ್ನು ಮುಂದಿಡುತ್ತೇವೆ. ಅದರಂತೆ ಜೆಡಿಯು ಎರಡೂವರೆ ವರ್ಷ ಮುಖ್ಯಮಂತ್ರಿ ಹುದ್ದೆ ನಿಭಾಯಿಸಿದೆ. ಹೀಗಾಗಿ ಮುಂದಿನ ಅವಧಿಗೆ ಬಿಜೆಪಿಯಿಂದ ಯಾರನ್ನಾದರೂ ನೇಮಕ ಮಾಡಬೇಕು ಎಂದು ಛೆಡಿ ಪಾಸ್ವಾನ್ ಆಗ್ರಹಿಸಿದರು.
Published On - 8:51 am, Tue, 8 February 22