2020ರಲ್ಲಿ ಸ್ಥಾಪಿತವಾದ ಪಿಎಂ-ಕೇರ್ಸ್ ಫಂಡ್ನಲ್ಲಿ ಒಂದು ವರ್ಷದಲ್ಲಿ ಸಂಗ್ರಹವಾದ ಹಣವೆಷ್ಟು? ಖರ್ಚಾಗಿದ್ದೆಷ್ಟು?-ಇಲ್ಲಿದೆ ವಿವರ
ಮೊದಲ ವರ್ಷದಲ್ಲಿ ಸಂಗ್ರಹವಾದ ಹಣದಲ್ಲಿ 3,976 ಕೋಟಿ ರೂ. ಖರ್ಚಾಗಿದ್ದು, ಇನ್ನೂ 7,014 ಕೋಟಿ ರೂಪಾಯಿ ಬಳಕೆಯಾಗದೆ ಹಾಗೇ ಉಳಿದಿದೆ ಎಂದು ವೆಬ್ಸೈಟ್ನಲ್ಲಿ ಉಲ್ಲೇಖಿಸಲಾಗಿದೆ.
ಕೊವಿಡ್ 19 ಸಾಂಕ್ರಾಮಿಕ ಪ್ರಾರಂಭವಾದ ಬಳಿಕ 2020ರ ಮಾರ್ಚ್ 27ರಂದು ಪಿಎಂ ಕೇರ್ಸ್ ಫಂಡ್ (PM-CARES Fund-Prime Minister’s Citizen Assistance and Relief in Emergency Situations Fund) ಶುರುವಾಗಿದೆ. ಸದ್ಯ ಇರುವ ಕೊವಿಡ್ 19 ಪರಿಸ್ಥಿತಿ ಮತ್ತು ಭವಿಷ್ಯದಲ್ಲಿ ಎದುರಾಗಬಹುದಾದ ಇಂಥ ಸಾಂಕ್ರಾಮಿಕಗಳ ವಿರುದ್ಧ ಹೋರಾಡುವುದು, ನಿಯಂತ್ರಣ ಮತ್ತು ಪರಿಹಾರಕ್ಕೆ ಅನುಕೂಲವಾಗುವ ಸಲುವಾಗಿ ನಿಧಿ ಸಂಗ್ರಹ ಮಾಡಲು ಈ ಪ್ರಧಾನಮಂತ್ರಿ ನಾಗರಿಕ ನೆರವು ಮತ್ತು ತುರ್ತು ಸಂದರ್ಭದಲ್ಲಿ ಪರಿಹಾರ ನಿಧಿ ಅಥವಾ ಪಿಎಂ ಕೇರ್ಸ್ ಫಂಡ್ನ್ನು ಸ್ಥಾಪಿಸಿದ್ದು ಪ್ರಧಾನಮಂತ್ರಿಗಳು ಇದರ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ. ಹೀಗೆ 2020ರಲ್ಲಿ ಸ್ಥಾಪಿತವಾದ ಪಿಎಂ ಕೇರ್ಸ್ ಫಂಡ್ನಲ್ಲಿ 2021ರ ಮಾರ್ಚ್ವರೆಗೆ ಅಂದರೆ ಒಂದು ವರ್ಷದಲ್ಲಿ 10,999 ಕೋಟಿ ರೂಪಾಯಿ ಸಂಗ್ರಹವಾಗಿದೆ ಮತ್ತು ಅದರಲ್ಲಿ 3,976 ಕೋಟಿ ರೂಪಾಯಿ ಅಥವಾ ಒಟ್ಟು ಹಣದ ಶೇ.36.17ರಷ್ಟು ಖರ್ಚಾಗಿದೆ ಎಂದು ಫಂಡ್ನ ವೆಬ್ಸೈಟ್ನಲ್ಲಿ ಉಲ್ಲೇಖಿಸಲಾಗಿದೆ.
ಪಿಎಂ ಕೇರ್ಸ್ ಫಂಡ್ನಲ್ಲಿರುವ ಹಣ ಯಾವುದೇ ನೈಸರ್ಗಿಕ ವಿಪತ್ತಿನ ಪರಿಹಾರಕ್ಕೆ ನೀಡಲಾಗುವುದಿಲ್ಲ. ಅದಕ್ಕಾಗಿಯೇ ಬೇರೆ ನಿಧಿಗಳು ಈಗಾಗಲೇ ಇವೆ. ಪಿಎಂ ಕೇರ್ಸ್ಗೆ ನೀಡುವ ದೇಣಿಗೆಗೆ ಆದಾಯ ತೆರಿಗೆ ಕಾಯ್ದೆಯಡಿ ವಿನಾಯಿತಿ ಇರುತ್ತದೆ. ಮೊದಲ ವರ್ಷದಲ್ಲಿ ಸಂಗ್ರಹವಾದ ಹಣದಲ್ಲಿ 3,976 ಕೋಟಿ ರೂ. ಖರ್ಚಾಗಿದ್ದು, ಇನ್ನೂ 7,014 ಕೋಟಿ ರೂಪಾಯಿ ಬಳಕೆಯಾಗದೆ ಹಾಗೇ ಉಳಿದಿದೆ ಎಂದು ವೆಬ್ಸೈಟ್ನಲ್ಲಿ ಉಲ್ಲೇಖಿಸಲಾಗಿದೆ. ಹೀಗೆ ಖರ್ಚಾದ ಹಣದಲ್ಲಿ ಗರಿಷ್ಠ ಖರ್ಚಾಗಿದ್ದು, ಕೊವಿಡ್ 19 ಲಸಿಕೆ ಡೋಸ್ಗಳ ಖರೀದಿಗೆ ಎಂದು ಹೇಳಲಾಗಿದೆ. ಅಂದರೆ 1,392 ಕೋಟಿ ರೂಪಾಯಿ (ಶೇ.35) ವೆಚ್ಚದಲ್ಲಿ 66 ಮಿಲಿಯನ್ ಡೋಸ್ಗಳನ್ನು ಖರೀದಿ ಮಾಡಲಾಗಿದೆ. ಅದಾದ ಬಳಿಕ ಒಟ್ಟು 1,311 ಕೋಟಿ ರೂಪಾಯಿ (ಶೇ.33) ಯನ್ನು 50 ಸಾವಿರ ಮೇಡ್ ಇನ್ ಇಂಡಿಯಾ (ಸ್ವದೇಶಿ) ವೆಂಟಿಲೇಟರ್ ಖರೀದಿಗೆ ಮತ್ತು 1000 ಕೋಟಿ ರೂಪಾಯಿಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ, ವಲಸಿಗರ ಕಲ್ಯಾಣಕ್ಕಾಗಿ ಕೊಡಲಾಗಿದೆ ಎಂದು ವಿವರಿಸಲಾಗಿದೆ.
ಇನ್ನು ಪಿಎಂ ಕೇರ್ಸ್ ಫಂಡ್ನ 201 ಕೋಟಿ ರೂಪಾಯಿಯನ್ನು ದೇಶಾದ್ಯಂತ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಒಟ್ಟು 162 ಪ್ರೆಶರ್ ಸ್ವಿಂಗ್ ಅಡ್ಸಾರ್ಪ್ಶನ್ (PSA) ವೈದ್ಯಕೀಯ ಆಮ್ಲಜನಕ ಜನರೇಶನ್ ಘಟಕಗಳನ್ನು ಅಳವಡಿಸಲು ವಿನಿಯೋಗಿಸಲಾಗಿದೆ. 9 ರಾಜ್ಯಗಳಲ್ಲಿ 16 ಆರ್ಟಿಪಿಸಿಆರ್ ತಪಾಸಣಾ ಲ್ಯಾಬ್ ಪ್ರಾರಂಭಿಸಲು ಹಾಗೂ ಮುಜಾಫರ್ಪುರ ಮತ್ತು ಪಾಟ್ನಾದ ಕೊವಿಡ್ 19 ಆಸ್ಪತ್ರೆಗಳಲ್ಲಿ 500 ಹಾಸಿಗೆಗಳನ್ನು ನಿರ್ಮಿಸಲು 50 ಕೋಟಿ ರೂಪಾಯಿ ನೀಡಲಾಗಿದೆ. ಎರಡು ಸ್ವಾಯಸ್ಥ ಸಂಸ್ಥೆ ಪ್ರಯೋಗಾಲಯಗಳನ್ನು, ಕೊವಿಡ್ 19 ವ್ಯಾಕ್ಸಿನ್ ಬ್ಯಾಚ್ಗಳ ತಪಾಸಣೆಗಾಗಿ ಸೆಂಟ್ರಲ್ ಡ್ರಗ್ ಲ್ಯಾಬೋರೇಟರಿಗಳನ್ನಾಗಿ ನವೀಕರಿಸಲು ಪಿಎಂ ಕೇರ್ಸ್ ಫಂಡ್ನಿಂದ 20 ಕೋಟಿ ರೂ.ಕೊಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಅಂದಹಾಗೆ, ಪಿಎಂ ಕೇರ್ಸ್ ಫಂಡ್ ಪ್ರಾರಂಭ ಮಾಡುವಾಗ ಆರಂಭಿಕವಾಗಿ ಅದರಲ್ಲಿ 3077 ಕೋಟಿ ರೂಪಾಯಿ ಇತ್ತು. 2021ರ ಮಾರ್ಚ್ ಹೊತ್ತಿಗೆ 7679 ಕೋಟಿ ರೂ.ದೇಣಿಗೆ ಪಡೆದಿದೆ. ಅಸಲು ಮೊತ್ತದ ಮೇಲೆ 235 ಕೋಟಿ ರೂ.ಬಡ್ಡಿ ಹೊಂದಿದೆ. ಈ ಹಿಂದೆ ಸೆಪ್ಟೆಂಬರ್ನಲ್ಲಿ ಪಿಎಂ ಕೇರ್ಸ್ ಬಗ್ಗೆ ಮಾಹಿತಿ ಕೇಳಿದಾಗ, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಕಾರ್ಯಾಲಯಗಳು ಅದನ್ನು ನಾವು ಕೊಡಲು ಸಾಧ್ಯವಿಲ್ಲ ಎಂದಿದ್ದವು. ಪಿಎಂ ಕೇರ್ಸ್ ಫಂಡ್ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ಯಾಕೆಂದರೆ ಇದು ಸಾರ್ವಜನಿಕ ಪ್ರಾಧಿಕಾರವಲ್ಲ. ಹಾಗೇ, ಇದನ್ನು ಕೇಂದ್ರ ಸರ್ಕಾರದ ಅಂಗಸಂಸ್ಥೆಯೆಂದು ಪರಿಗಣಿಸುವಂತಿಲ್ಲ ಎಂದಿದ್ದವು.
ಇದನ್ನೂ ಓದಿ: ನದಿ ಜೋಡಣೆಗೆ ಬಸವರಾಜ ಬೊಮ್ಮಾಯಿ ವಿರೋಧ! ದೆಹಲಿಯಲ್ಲಿ ಸಿಎಂ ಹೇಳಿದ್ದೇನು?
Published On - 9:06 am, Tue, 8 February 22