ಇಂದು ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಪರ ಪ್ರಚಾರ ನಡೆಸಲಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿಯವರು ವಾರಾಣಸಿಗೆ ಭೇಟಿ ಕೊಡುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಯಾವಾಗ ಎಂಬ ಬಗ್ಗೆ ಮಾಹಿತಿ ಇಲ್ಲ. ಇನ್ನು ಉತ್ತರ ಪ್ರದೇಶದ ಈ ಸಲದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಈಗಾಗಲೇ ಹೇಳಿಬಿಟ್ಟಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ(Mamata Banerjee) ಇಂದು ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಪಕ್ಷದ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ನಿನ್ನೆ (ಫೆ.7)ಯೇ ಅವರು ಲಖನೌಗೆ ಆಗಮಿಸಿದ್ದಾರೆ. ಮಮತಾ ಬ್ಯಾನರ್ಜಿ ಇಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಜತೆ ಸೇರಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯನ್ನೂ ನಡೆಸುವರು. ನಂತರ ಮಮತಾ ಬ್ಯಾನರ್ಜಿ ವರ್ಚ್ಯುವಲ್ ರ್ಯಾಲಿ ನಡೆಸುವರು. ಉತ್ತರಪ್ರದೇಶಕ್ಕೆ ಹೊರಡುವ ಮುನ್ನ ಕೋಲ್ಕತ್ತದಲ್ಲಿ ಮಾತನಾಡಿದ್ದ ಅವರು, ಮುಂಬರುವ ಚುನಾವಣೆಗಳಲ್ಲಿ ಎಲ್ಲ ರಾಜ್ಯಗಳಲ್ಲೂ ಬಿಜೆಪಿಯನ್ನು ಸೋಲಿಸಬೇಕು. ಪ್ರಚಾರಕ್ಕೆ ಬರುವಂತೆ ಅಖಿಲೇಶ್ ಯಾದವ್ ನನ್ನನ್ನು ಕೇಳಿದ್ದಾರೆ. ಹಾಗಾಗಿ ಹೋಗುತ್ತಿದ್ದೇನೆ ಎಂದಿದ್ದರು.
ಮಮತಾ ಬ್ಯಾನರ್ಜಿಯವರು ವಾರಾಣಸಿಗೆ ಭೇಟಿ ಕೊಡುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ. ಆದರೆ ಯಾವಾಗ ಎಂಬ ಬಗ್ಗೆ ಮಾಹಿತಿ ಇಲ್ಲ. ಇನ್ನು ಉತ್ತರ ಪ್ರದೇಶದ ಈ ಸಲದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಈಗಾಗಲೇ ಹೇಳಿಬಿಟ್ಟಿದ್ದಾರೆ. ಆದರೆ 2024ರ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಖಂಡಿತವಾಗಿ ಸ್ಪರ್ಧಿಸುತ್ತದೆ. ಬಿಜೆಪಿಯನ್ನು ಸೋಲಿಸಲು ಎಲ್ಲ ಪ್ರಾದೇಶಿಕ ಪಕ್ಷಗಳೂ ಒಂದಾಗಬೇಕು ಎಂದು ಹೇಳಿದ್ದಾರೆ.
ಸೋಮವಾರ ಉತ್ತರ ಪ್ರದೇಶಕ್ಕೆ ಆಗಮಿಸಿದ ಮಮತಾ ಬ್ಯಾನರ್ಜಿಯವರನ್ನು ಲಖನೌದ ಅಮೌಸಿ ಏರ್ಪೋರ್ಟ್ನಲ್ಲಿ ಅಖಿಲೇಶ್ ಯಾದವ್ ಸ್ವಾಗತಿಸಿದರು. ಬಳಿಕ ಟ್ವೀಟ್ ಮಾಡಿ ಮಾಹಿತಿ ನೀಡಿದ್ದ ಅಖಿಲೇಶ್ ಯಾದವ್, ನಾವು ಒಟ್ಟಾಗಿ ಪಶ್ಚಿಮ ಬಂಗಾಳದಲ್ಲಿ ಒಟ್ಟಾಗಿ ಸೋಲಿಸಿದ್ದೇವೆ, ಇದೀಗ ಉತ್ತರ ಪ್ರದೇಶದಲ್ಲೂ ಒಟ್ಟಾಗಿ ಸೋಲಿಸುತ್ತೇವೆ. ದೀದಿಗೆ ಈ ಭರವಸೆ ನೀಡುತ್ತಿದ್ದೇನೆ. ನಾವು ಜಯಶಾಲಿಗಳಾಗಿ ಹೊರಹೊಮ್ಮುತ್ತೇವೆ. ಪಶ್ಚಿಮ ಬಂಗಾಳಕ್ಕೆ ದೀದಿಗೆ ಆತ್ಮೀಯ ಸ್ವಾಗತ ಎಂದು ಹೇಳಿದ್ದಾರೆ.
ಅಖಿಲೇಶ್ ಯಾದವ್ ಮತ್ತು ಮಮತಾ ಬ್ಯಾನರ್ಜಿ ಇಬ್ಬರೂ ರಾಜಕೀಯ ಮತ್ತು ವೈಯಕ್ತಿಕವಾಗಿ ಉತ್ತಮ ಸಂಬಂಧ ಹೊಂದಿದ್ದಾರೆ. 2017ರ ವಿಧಾನಸಭೆ ಚುನಾವಣೆ ಹೊತ್ತಲ್ಲೂ ಮಮತಾ ಬ್ಯಾನರ್ಜಿ ಉತ್ತರ ಪ್ರದೇಶಕ್ಕೆ ಬಂದು ಎಸ್ಪಿ ಪರ ಪ್ರಚಾರ ನಡೆಸಿದ್ದರು. ಹಾಗೇ, ಅಖಿಲೇಶ್ ಯಾದವ್ ಕೂಡ 2011 ಮತ್ತು 2016ರ ಪಶ್ಚಿಮ ಬಂಗಾಳ ಚುನಾವಣೆಯ ಹಿನ್ನೆಲೆಯಲ್ಲಿ ಅಲ್ಲಿಗೆ ಹೋಗಿ ದೀದಿ ಪರ ಪ್ರಚಾರ ನಡೆಸಿದ್ದರು. 2021ರಲ್ಲಿ ತಾವು ಹೋಗದೆ ಇದ್ದರೂ ಸಮಾಜವಾದಿ ಪಕ್ಷದ ರಾಷ್ಟ್ರೀಯ ಉಪ-ಅಧ್ಯಕ್ಷ ಕಿರಣ್ಮಯ್ ನಂದಾ ಮತ್ತು ರಾಜ್ಯ ಸಭಾ ಸದಸ್ಯೆ ಜಯ ಬಚ್ಚನ್ರನ್ನು ಕಳಿಸಿದ್ದರು.
ಇದನ್ನೂ ಓದಿ: ಎಲ್ಇಡಿ ಸ್ಟಂಪ್ಸ್ಗಳನ್ನು ಮೊದಲ ಬಾರಿಗೆ ಬಳಸಿದ ದೇಶ ಯಾವುದು ಗೊತ್ತಾ? ಇವುಗಳ ಬೆಲೆ ಭಾರತದಲ್ಲಿ ಎಷ್ಟಿದೆ?
Published On - 7:58 am, Tue, 8 February 22