AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಿಲ್ ಕುಂಬ್ಳೆ, ಯುವರಾಜ್ ಛಲ ನೆನಪಿಸಿದ ರಿಷಭ್: ಗಾಯಗಳ ನಡುವೆಯೇ ಬೌಲರ್​ಗಳಿಗೆ ಪಂಚ್ ನೀಡಬಲ್ಲ ಪಂತ್

ಕ್ರಿಕೆಟ್ ಆಗಿರಲಿ ಅಥವಾ ಇತರ ಯಾವುದೇ ಕ್ರೀಡೆ ಇರಲಿ. ಕ್ರೀಡಾಳುಗಳು ನೋವು, ಗಾಯ ಇತ್ಯಾದಿಗಳನ್ನು ಸಹಿಸಿ ಅವಡುಗಚ್ಚಿ ಆಡುವಲ್ಲಿ ಸಾಮಾನ್ಯರಿಗಿಂತ ಎಷ್ಟೋ ಪಾಲು ಗಟ್ಟಿಗರಾಗಿರುತ್ತಾರೆ. ಆದರೆ, ಈ ವಿಚಾರದಲ್ಲಿ ಟೀಮ್ ಇಂಡಿಯಾ ಬ್ಯಾಟರ್ ರಿಷಭ್ ಪಂತ್ ಅಂತೂ ಪಂಟರ್ ಎನ್ನದೆ ವಿಧಿಯಿಲ್ಲ. ಇದಕ್ಕೆ ಕಾರಣ ನಮ್ಮ ಕಣ್ಣಮುಂದೆಯೇ ಇದೆ.

ಅನಿಲ್ ಕುಂಬ್ಳೆ, ಯುವರಾಜ್ ಛಲ ನೆನಪಿಸಿದ ರಿಷಭ್: ಗಾಯಗಳ ನಡುವೆಯೇ ಬೌಲರ್​ಗಳಿಗೆ ಪಂಚ್ ನೀಡಬಲ್ಲ ಪಂತ್
ರಿಷಭ್ ಪಂತ್Image Credit source: PTI
Ganapathi Sharma
|

Updated on:Jul 25, 2025 | 7:09 PM

Share

ಅದು, 2002ರ ಸಮಯ. ಟೀಮ್ ಇಂಡಿಯಾ (Team India) ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದ ಸಮಯ. ಟೆಸ್ಟ್ ಸರಣಿಯ ಎರಡನೇ ಪಂದ್ಯ ಆ್ಯಂಟಿಗುವಾದಲ್ಲಿ ನಡೆದಿತ್ತು. ಬ್ಯಾಟಿಂಗ್ ಮಾಡುವಾಗ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ (Anil Kumble) ಗಲ್ಲಕ್ಕೆ ಮರ್ವಿನ್ ಡಿಲ್ಲನ್ ಎಸೆತ ಅಪ್ಪಳಿಸಿತ್ತು. ಪರಿಣಾಮವಾಗಿ ದವಡೆ ಮೂಳೆ ಮುರಿತ ಸಂಭವಿಸಿತ್ತು. ದವಡೆಗೆ ಸ್ಟಿಚ್ ಹಾಕಿ ಬ್ಯಾಂಡೇಜ್ ಹಾಕಿದ್ದರು. ಆದರೂ ಛಲ ಬಿಡದ ಕುಂಬ್ಳೆ, ಆ ನೋವಿನಲ್ಲೂ ಬೆನ್ನುಬೆನ್ನಿಗೆ 14 ಓವರ್ ಬೌಲಿಂಗ್ ಮಾಡಿ ಸಾಹಸ ಮೆರೆದಿದ್ದರು. ಅಷ್ಟೇ ಏಕೆ, ಬ್ಯಾಟಿಂಗ್ ದೈತ್ಯ ಬ್ರಿಯಾನ್ ಲಾರಾ ಅವರನ್ನು ಪೆವಿಲಿಯನ್‌ಗೆ ಅಟ್ಟಿ ಸಂಭ್ರಮಿಸಿದ್ದರು. ಅಂದು ಇಡೀ ಕ್ರೀಡಾ ಜಗತ್ತು ಅನಿಲ್ ಕುಂಬ್ಳೆ ಅವರ ದಿಟ್ಟತನ, ಛಲ ಮತ್ತು ಕ್ರೀಡಾ ಸ್ಫೂರ್ತಿಯನ್ನು ಕೊಂಡಾಡಿತ್ತು. ಭಾರತೀಯ ಕ್ರಿಕೆಟ್ ಪ್ರೇಮಿಗಳಂತೂ ಕುಂಬ್ಳೆ ಅವರ ಆ ಆಟವನ್ನು ಮರೆಯಲು ಸಾಧ್ಯವೇ ಇಲ್ಲ. ಈಗ ಸುಮಾರು 23 ವರ್ಷಗಳ ಬಳಿಕ ಅಂತಹದ್ದೇ ಒಂದು ದಿಟ್ಟತನದ ಇನ್ನಿಂಗ್ಸ್ ಮೂಲಕ ರಿಷಭ್ ಪಂತ್ (Rishabh Pant) ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿದ್ದಾರೆ.

ಸದ್ಯ ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಬಹುತೇಕ ಎಲ್ಲ ಇನ್ನಿಂಗ್ಸ್​​ಗಳಲ್ಲೂ ಉತ್ತಮ ಬ್ಯಾಟಿಂಗ್ ಪಂತ್ ಅವರಿಂದ ಮೂಡಿಬಂದಿದೆ. ಮ್ಯಾಂಚೆಸ್ಟರ್​​ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಕೂಡ ಒಂದು ಒಳ್ಳೆಯ ಬ್ಯಾಟಿಂಗ್ ಅವರಿಂದ ನಿರೀಕ್ಷಿಸಿದ್ದು ಸುಳ್ಳಲ್ಲ. ಅದಕ್ಕೆ ತಕ್ಕಂತೆ ಅವರು ಆಡುತ್ತಿದ್ದರು ಕೂಡ.

37 ರನ್ ಗಳಿಸಿ ಆಡುತ್ತಿದ್ದ ಅವರು ಕ್ರಿಸ್ ವೊಕ್ಸ್ ಎಸೆತವನ್ನು ರಿವರ್ಸ್ ಸ್ವೀಪ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡರು. ಚೆಂಡು ಇನ್ನೇನು ಆಗಮಿಸಿ ಬ್ಯಾಟ್​ಗೆ ಬಡಿಯಬೇಕು ಎನ್ನುವಷ್ಟರಲ್ಲಿ ಅವರು ಬ್ಯಾಟ್ ಬೀಸಿ ಆಗಿತ್ತು. ಅದು ನೇರವಾಗಿ ಅವರ ಬಲಗಾಲಿನ ಬೆರಳುಗಳ ಭಾಗಕ್ಕೆ ಹೊಡೆಯಿತು. ಪರಿಣಾಮವಾಗಿ ಬಲಗಾಲ ಬೆರಳಿನ ಮೂಳೆ ಮುರಿತಕ್ಕೊಳಗಾಯಿತು.

Rishabh Pant Injury

ಗಾಯಗೊಂಡು ಪೆವಿಲಿಯನ್​ಗೆ ಮರಳುತ್ತಿರುವ ಪಂತ್

ಪಂತ್ ಅದೆಷ್ಟು ನೋವಿನಿಂದ ಒದ್ದಾಡುತ್ತಿದ್ದರು ಎಂಬುದನ್ನು ಅವರ ಮುಖಭಾವವೇ ಹೇಳುತ್ತಿತ್ತು. ನಡೆದಾಡಲು ಕೂಡ ಸಾಧ್ಯವಾಗದ ಅವರನ್ನು ಸಿಬ್ಬಂದಿಯ ನೆರವಿನೊಂದಿಗೆ ವಾಹನದಲ್ಲಿ ಕುಳ್ಳಿರಿಸಿ ಪೆವಿಲಿಯನ್​ಗೆ ಕರೆದೊಯ್ಯಲಾಯಿತು. ನಂತರ ವೈದ್ಯಕೀಯದ ತಪಾಸಣೆಗಳು ನಡೆದವು. ಗಾಯ ಗಂಭೀರವಾಗಿರುವುದು ಗೊತ್ತಾಯಿತು. ಆದರೆ ಮತ್ತೊಂದೆಡೆ, ಟೀಮ್ ಇಂಡಿಯಾ ಸಂಕಷ್ಟಕ್ಕೆ ಸಿಲುಕುವ ಸುಳಿವು ಕಾಣಿಸಿತು.

ಟೀಮ್ ಇಂಡಿಯಾಕ್ಕೆ ಐಸಿಸಿ ನಿಯಮದ ಆಘಾತ

ಅತ್ತ ಪಂತ್ ಬ್ಯಾಟಿಂಗ್ ಸಾಧ್ಯತೆ ಕ್ಷೀಣಿಸಿದ ನಡುವೆ ಭಾರತಕ್ಕೆ ಮತ್ತೊಂದು ಆಘಾತ ಕಾದಿತ್ತು. ಐಸಿಸಿ ಕನ್ಕ್ಯುಶನ್ (Concussion) ಸಬ್ಸ್​ಟಿಟ್ಯೂಟ್ ನಿಯಮದ ಪ್ರಕಾರ ತಲೆ ಮತ್ತು ಕುತ್ತಿಗೆಯ ಭಾಗಕ್ಕೆ ಗಾಯವಾದರೆ ಮಾತ್ರ ಬದಲಿ ಆಟಗಾರನನ್ನು ಆಡಿಸಬಹುದು. ಆದರೆ ಪಂತ್ ಕಾಲಿಗೆ ಏಟಾಗಿರುವುದು. ಹೀಗಾಗಿ ಅವರು ಬ್ಯಾಟಿಂಗ್ ಮಾಡುವುದಿಲ್ಲ ಎಂದರೆ ಬದಲಿಗೆ ಮತ್ತೊಬ್ಬ ಆಡುವಂತಿಲ್ಲ. ಅಂದರೆ, 10 ಮಂದಿ ಬ್ಯಾಟರಗಳನ್ನು ಮಾತ್ರ ಬಳಸಿಕೊಂಡು ಆಡಬೇಕು. ತಂಡದ ಈ ಸಂಕಷ್ಟದ ಸಮಯದಲ್ಲಿ, ಮೊದಲೇ ರನ್ ಕಡಿಮೆ ಇರುವ ಸನ್ನಿವೇಶದಲ್ಲಿ ಇದು ಮತ್ತೊಂದು ಹೊಡೆತ.

ಮತ್ತೆ ಬ್ಯಾಟ್ ಹಿಡಿದು ಕ್ರೀಸಿಗಿಳಿದ ಪಂತ್

ಪಂತ್ ಮತ್ತೆ ಬ್ಯಾಟಿಂಗ್​ಗೆ ಬರುವುದಿಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ರವೀಂದ್ರ ಜಡೇಜಾ ಮತ್ತು ಶಾರ್ದೂಲ್ ಠಾಕೂರ್ ವಿಕೆಟ್ ಪತನವಾಗುತ್ತಿದ್ದಂತೆಯೇ ಬ್ಯಾಟ್ ಹಿಡಿದು ಪಂತ್ ಮತ್ತೆ ಕ್ರೀಸಿಗೆ ಆಗಮಿಸಿದರು! ಅರ್ಧಶತಕ ಗಳಿಸಿ ತಂಡವು ಸಾಧಾರಣ ಮೊತ್ತ ಪೇರಿಸುವಲ್ಲಿ ನೆರವಾದರು.

ಅವರು ಮತ್ತೆ ಕ್ರೀಸ್​​ಗೆ ಬಂದಾಗ ಟೀಮ್ ಇಂಡಿಯಾ ಅಭಿಮಾನಿಗಳಲ್ಲಿ ಒಂದು ಕ್ಷಣ ಅಚ್ಚರಿ, ಕುತೂಹಲ ಮೂಡಿತ್ತು. ಆದರೆ, ಪಂತ್​​ಗೆ ಇದೇನು ಹೊಸದಲ್ಲವಲ್ಲ. ಗಾಯ, ನೋವು, ಆಘಾತ ಎದುರಿಸಿ ಮತ್ತೆ ಪುಟಿದೇಳುವ ಸಾಮರ್ಥ್ಯ ತಮ್ಮಲ್ಲಿದೆ ಎಂಬುದನ್ನು ಅವರು ಮತ್ತೆ ಮತ್ತೆ ಸಾಬೀತು ಪಡಿಸುತ್ತಲೇ ಇದ್ದಾರೆ.

ಹಾಗೆ ನೋಡಿದರೆ, ಕ್ರಿಕೆಟ್ ಇರಲಿ ಅಥವಾ ಇನ್ಯಾವುದೇ ಕ್ರೀಡೆ ಇರಲಿ. ಕ್ರೀಡಾಳುಗಳು ಗಾಯ, ನೋವು ಇತ್ಯಾದಿಗಳನ್ನು ಸಹಿಸುವಲ್ಲಿ ಸಾಮಾನ್ಯರಿಗಿಂತ ಎಷ್ಟೋ ಪಾಲು ಗಟ್ಟಿಗರಾಗಿರುತ್ತಾರೆ. ಮಾಜಿ ಆಲ್​ರೌಂಡರ್​ ಯುವರಾಜ್ ಸಿಂಗ್ ಅವರನ್ನು ನಾವಿಲ್ಲಿ ನೆನಪಿಸಿಕೊಳ್ಳಲೇಕು. ಕ್ಯಾನ್ಸರ್ ಮಹಾಮಾರಿಯಿಂದ ಬಳಲುತ್ತಿದ್ದರೂ 2011ರ ವಿಶ್ವಕಪ್​ ಟೂರ್ನಿಯುದ್ಧಕ್ಕೂ ಅವರು ನೀಡಿದ ಸರ್ವಾಂಗೀಣ ಪ್ರದರ್ಶನ ಮರೆಯಲಸಾಧ್ಯ.

ಗಾಯಗಳನ್ನೆದುರಿಸುವಲ್ಲಿ ಗಟ್ಟಿಗ ಪಂತ್!

ರಿಷಭ್ ಪಂತ್ ಕೂಡ ಗಾಯಗಳನ್ನೆದುರಿಸುವ ವಿಚಾರದಲ್ಲಿ ಗಟ್ಟಿಗರೇ. ಲಾರ್ಡ್ಸ್​ನನಲ್ಲಿ ನಡೆದ ಭಾರತ-ಇಂಗ್ಲೆಂಡ್ ಮೂರನೇ ಟೆಸ್ಟ್ ಪಂದ್ಯದಲ್ಲಿಯೂ ಪಂತ್ ಕೈಗೆ ಗಾಯವಾಗಿತ್ತು. ಕೈ ಬೆರಳಿನ ಉಗುರು ಕಿತ್ತುಬಂದಿತ್ತು. ಆ ನೋವಿನಿಂದಾಗಿ ಅವರು ಕೀಪಿಂಗ್ ಕೂಡ ಮಾಡಿರಲಿಲ್ಲ. ಬದಲಿಗೆ ಧೃವ್ ಜುರೇಲ್ ಕೀಪಿಂಗ್ ಮಾಡಿದ್ದರು. ಆದರೂ ಆ ನೋವಿನಲ್ಲೂ ಕ್ರೀಸಿಗೆ ಬಂದು ಬ್ಯಾಟಿಂಗ್ ಪ್ರದರ್ಶಿಸಿದ್ದರು.

ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ನಂತರ ಟೀಂ ಇಂಡಿಯಾದ ಕೀಪರ್ ಕಂ ಬ್ಯಾಟರ್ ಸ್ಥಾನಕ್ಕೆ ಪಂತ್ ಕಾಯಂ ಆಯ್ಕೆ ಆಗುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅದೊಂದು ದಿನ ಯಾರೂ ಊಹಿಸದ ಆಘಾತ ಎದುರಾಯಿತು.

ಅಪಘಾತದಲ್ಲಿ ಜರ್ಝರಿತರಾಗಿದ್ದ ರಿಷಭ್ ಪಂತ್

ಅದು 2022ರ ಡಿಸೆಂಬರ್ 30. ತಾಯಿಯನ್ನು ನೋಡಲೆಂದು ದೆಹಲಿಯಿಂದ ರೂರ್ಕಿಗೆ ಪಂತ್ ಹೊರಟಿದ್ದರು. ಮುಂಜಾನೆಯ ಸಮಯದಲ್ಲಿ ಅವರ ಕಾರು ಭೀಕರ ಅಪಘಾತಕ್ಕೀಡಾಯಿತು. ಬಹುಶಃ ಆ ಅಪಘಾತದ ದೃಶ್ಯವನ್ನು ನೋಡಿದ, ಅದರಲ್ಲಿ ಪಂತ್ ಅವರಿಗಾದ ಗಾಯಗಳನ್ನು ನೋಡಿದ ಯಾರೂ ಸಹ ಅವರು ಬದುಕಿ ಬರಬಹುದು ಎಂಬುದನ್ನೂ ಊಹಿಸಿರುವುದು ಕಷ್ಟಸಾಧ್ಯ. ಅದಾಗಲೇ ಮಂಡಿರಜ್ಜು ಸಮಸ್ಯೆಯಿಂದ ಬಳಲುತ್ತಿದ್ದ ಪಂತ್ ಮಂಡಿಗೂ ಅಪಘಾತದಲ್ಲಿ ಬಲವಾದ ಏಟು ಬಿದ್ದಿತ್ತು. ಅದಾಗಲೇ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕಿದ್ದ ಮಂಡಿ ಚಿಪ್ಪು ಮತ್ತಷ್ಟು ಆಘಾತಕ್ಕೀಡಾಗಿತ್ತು.

ಫೀನಿಕ್ಸ್​​ನಂತೆ ಮೇಲೆದ್ದು ಬಂತ ಪಂತ್

ಆದರೆ, ಯಾರೂ ಊಹಿಸದ ರೀತಿಯಲ್ಲಿ ಫೀನಿಕ್ಸ್​​ನಂತೆ ಮೇಲೆದ್ದು ಬಂದ ಪಂತ್ 2024 ರ ಐಪಿಎಲ್​​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದರು. ನಂತರ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿ, ತಮ್ಮಲ್ಲಿನ್ನೂ ಕ್ರಿಕೆಟ್ ಆಡುವ, ಬ್ಯಾಟಿಂಗ್ ಮಾಡುವ ಕಸುವಿದೆ ಎಂದು ಸಾಬೀತುಪಡಿಸಿದರು. 2024ರ ಟಿ-20 ವಿಶ್ವಕಪ್​ನಲ್ಲೂ ಗಮನಾರ್ಹ ಇನ್ನಿಂಗ್ಸ್​​ಗಳನ್ನು ಆಡಿದರು. ಆ ಮೂಲಕ ಎಲ್ಲ ಮಾದರಿಯ ಕ್ರಿಕೆಟ್​​ನಲ್ಲಿ ಮತ್ತೆ ಮಿಂಚುವ ಸುಳಿವು ನೀಡಿದರು.

ಎಲ್ಲದಕ್ಕಿಂತಲೂ ಹೆಚ್ಚಾಗಿ, ಟೆಸ್ಟ್ ಕ್ರಿಕೆಟ್​ ಆಕರ್ಷಣೆ ಕಳೆದುಕೊಳ್ಳುತ್ತಿದೆ ಎಂಬ ವಾದಗಳಿರುವ ಈ ಕಾಲಘಟ್ಟದಲ್ಲಿ ಪಂತ್​​ರಂಥ ಯುವ ಆಟಗಾರರು ಕೆಂಪು ಬಾಲ್ ಕ್ರಿಕೆಟ್​​​ನಲ್ಲಿ ಮಿಂಚುತ್ತಿರುವುದು ನಿಜಕ್ಕೂ ಸಂತಸದ ವಿಚಾರ. ಗಾಯಗಳು ಪಂತ್​​ರನ್ನು ಘಾಸಿಗೊಳಿಸದಿರಲಿ, ಬದಲಿಗೆ ಮತ್ತಷ್ಟು ಗಟ್ಟಿಗೊಳಿಸಲಿ. ಛಾತಿಯೊಂದಿಗೆ ಟೀಮ್ ಇಂಡಿಯಾಕ್ಕೆ ಮರಳಿ ಅವರ ಬ್ಯಾಟ್​​ನಿಂದ ಇನ್ನಷ್ಟು ಉತ್ತಮ ಇನ್ನಿಂಗ್ಸ್​​ಗಳು ಮೂಡಿಬರಲಿ.

ಇನ್ನಷ್ಟು ಅಭಿಮತ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:48 pm, Fri, 25 July 25

‘ಪವಿತ್ರಾ ಗೌಡ ಶ್ರೀಮಂತೆ ಅಲ್ಲ, ತುಂಬ ಕಷ್ಟ ಇದೆ’: ಲಾಯರ್ ಅಚ್ಚರಿಯ ಹೇಳಿಕೆ
‘ಪವಿತ್ರಾ ಗೌಡ ಶ್ರೀಮಂತೆ ಅಲ್ಲ, ತುಂಬ ಕಷ್ಟ ಇದೆ’: ಲಾಯರ್ ಅಚ್ಚರಿಯ ಹೇಳಿಕೆ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಸಚಿವ ಎಸ್. ಜೈಶಂಕರ್
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ಸಚಿವ ಎಸ್. ಜೈಶಂಕರ್
ನಮಸ್ತೇ ಸದಾ ವತ್ಸಲೇ: ವಿಧಾನಸಭೆಯಲ್ಲಿ RSS ಗೀತೆ ಹಾಡಿದ ಡಿಕೆ ಶಿವಕುಮಾರ್
ನಮಸ್ತೇ ಸದಾ ವತ್ಸಲೇ: ವಿಧಾನಸಭೆಯಲ್ಲಿ RSS ಗೀತೆ ಹಾಡಿದ ಡಿಕೆ ಶಿವಕುಮಾರ್
ತಿಮರೋಡಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ: ಪೂಜಾರ್, ವಕೀಲ
ತಿಮರೋಡಿ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ: ಪೂಜಾರ್, ವಕೀಲ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
ಎನ್​ಡಿಆರ್​ಎಫ್ ನಿಯಮ ಉಲ್ಲಂಘಿಸಿ ವಯನಾಡ್​ಗೆ ನೆರವು ನೀಡಲಾಗಿದೆ: ಅಶೋಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
‘ಸಾರಥಿ’ ಸಿನಿಮಾ ಬಿಡುಗಡೆ ಸಮಯದಲ್ಲಿ ಪಟ್ಟ ಕಷ್ಟ ನೆನೆದ ನಿರ್ಮಾಪಕ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಸಮೀರ್​ನನ್ನು ಕೇಳಿಕೊಂಡು 4-5 ಪೊಲೀಸರು ಬಂದಿದ್ದರು: ಆಶಾ, ಗೃಹಿಣಿ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಮುಂಬರುವ ದಿನಗಳಲ್ಲಿ ಮಾಸ್ಕ್​ಮ್ಯಾನ್ ವಿರುದ್ಧವೂ ದೂರು: ಸ್ನೇಹಮಯಿ ಕೃಷ್ಣ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಬಿಹಾರ: ಔಂಟಾ-ಸಿಮಾರಿಯಾ ಸೇತುವೆ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ
ಡೀಮ್ಡ್ ಫಾರೆಸ್ಟ್​ನಿಂದಾಗಿ ಕುರಿಗಳಿಗೆ ಮೇಯಲು ಸ್ಥಳ ಸಿಗುತ್ತಿಲ್ಲ: ಶಾಸಕ