Rishabh Pant
ಅಂಡರ್ 19 ವಿಶ್ವಕಪ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಸಾಕಷ್ಟು ಸದ್ದು ಮಾಡಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್, 2017 ರಲ್ಲಿ ಟಿ20 ಮಾದರಿಯಲ್ಲಿ ಟೀಂ ಇಂಡಿಯಾ ಪರ ಚೊಚ್ಚಲ ಪಂದ್ಯವನ್ನಾಡಿದರು. ನಂತರ ಒಂದು ವರ್ಷದ ಬಳಿಕ ಅಂದರೆ 2018 ರಲ್ಲಿ ತಂಡದ ಪರ ಏಕದಿನ ಹಾಗೂ ಟೆಸ್ಟ್ ಮಾದರಿಯಲ್ಲೂ ಮೊದಲ ಪಂದ್ಯವನ್ನಾಡಿದರು. ಅಂದಿನಿಂದ ಪಂತ್ ಟೀಂ ಇಂಡಿಯಾದ ಖಾಯಂ ಸದಸ್ಯರಲ್ಲಿ ಒಬ್ಬರಾಗಿದ್ದಾರೆ. ಇದುವರೆಗೂ 33 ಟೆಸ್ಟ್ ಪಂದ್ಯಗಳನ್ನಾಡಿರುವ ಪಂತ್, 43.67ರ ಸರಾಸರಿಯಲ್ಲಿ 2271 ರನ್ ಬಾರಿಸಿದ್ದಾರೆ. ಇದರಲ್ಲಿ ಐದು ಶತಕ ಹಾಗೂ ಹನ್ನೊಂದು ಅರ್ಧಶತಕವೂ ಸೇರಿದೆ. ಇದರ ಜತೆಗೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನೆಲದಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಬ್ಯಾಟರ್ ಎನ್ನುವ ಗೌರವಕ್ಕೂ ಪಂತ್ ಪಾತ್ರರಾಗಿದ್ದಾರೆ. ಪಂತ್ ಏಕದಿನ ಕ್ರಿಕೆಟ್ನಲ್ಲಿ 30 ಪಂದ್ಯಗಳಿಂದ 865 ರನ್ ಬಾರಿಸಿದ್ದರೆ, ಟಿ20 ಕ್ರಿಕೆಟ್ನಲ್ಲಿ 66 ಪಂದ್ಯಗಳನ್ನಾಡಿ 987 ರನ್ ಗಳಿಸಿದ್ದಾರೆ. ಐಪಿಎಲ್ನಲ್ಲೂ ಕಮಾಲ್ ಮಾಡಿರುವ ಪಂತ್, ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಾಗವಾಗಿದ್ದು, ಇದುವರೆಗೆ 98 ಐಪಿಎಲ್ ಪಂದ್ಯಗಳನ್ನಾಡಿರುವ ಪಂತ್, ಒಟ್ಟು 2818 ರನ್ ಕಲೆಹಾಕಿದ್ದಾರೆ.