- Kannada News Photo gallery Cricket photos rishabh pant and chris woakes Injury: India-England Series Ends in Draw, Players Exchange Messages
‘ನಿಜವಾಗಿಯೂ ಬೇಸರವಾಗಿದೆ’; ರಿಷಭ್ ಪಂತ್ ಬಳಿ ಕ್ಷಮೆಯಾಚಿಸಿದ ಇಂಗ್ಲೆಂಡ್ ವೇಗಿ
India vs England Test Series: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಡ್ರಾದೊಂದಿಗೆ ಅಂತ್ಯವಾಯಿತು. ಈ ಸರಣಿಯಲ್ಲಿ ರಿಷಭ್ ಪಂತ್ ಮತ್ತು ಕ್ರಿಸ್ ವೋಕ್ಸ್ ಗಂಭೀರವಾಗಿ ಗಾಯಗೊಂಡರು. ಪಂತ್ ಅವರ ಕಾಲಿಗೆ ವೋಕ್ಸ್ ಎಸೆದ ಚೆಂಡು ಬಡಿದರೆ, ವೋಕ್ಸ್ ಫೀಲ್ಡಿಂಗ್ ಮಾಡುವಾಗ ಗಾಯಗೊಂಡರು. ಗಾಯದ ನಂತರವೂ ವೋಕ್ಸ್ ಒಂದೇ ಕೈಯಲ್ಲಿ ಬ್ಯಾಟಿಂಗ್ ಮಾಡಿದ್ದು ಪ್ರಶಂಸೆಗೆ ಪಾತ್ರವಾಗಿದೆ. ಈ ಇಬ್ಬರೂ ಆಟಗಾರರು ಪರಸ್ಪರ ಸಂದೇಶಗಳ ಮೂಲಕ ಆರೋಗ್ಯ ವಿಚಾರಿಸಿಕೊಂಡಿದ್ದಾರೆ.
Updated on:Aug 07, 2025 | 9:25 PM

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಸಮಬಲದೊಂದಿಗೆ ಅಂತ್ಯವಾಯಿತು. ಇಡೀ ಸರಣಿಯಲ್ಲಿ ಎರಡೂ ತಂಡಗಳ ಆಟಗಾರರು ಅದ್ಭುತ ಪ್ರದರ್ಶನ ನೀಡುವ ಮೂಲಕ ತಮ್ಮ ತಂಡವನ್ನು ಗೆಲ್ಲಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸಿದರು. ಆದಾಗ್ಯೂ ಕೊನೆಯಲ್ಲಿ ಸರಣಿ ಡ್ರಾದಲ್ಲಿ ಕೊನೆಗೊಂಡಿತು. ಆದರೆ ಈ ಸರಣಿ ನಡುವೆ ಇಬ್ಬರು ಆಟಗಾರರು ಗಂಭೀರವಾಗಿ ಗಾಯಗೊಂಡ ಪ್ರಸಂಗವೂ ನಡೆಯಿತು.

ವಾಸ್ತವವಾಗಿ ಉಭಯ ತಂಡಗಳ ನಡುವೆ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಟೀಂ ಇಂಡಿಯಾದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಬ್ಯಾಟಿಂಗ್ ಮಾಡುವ ವೇಳೆ, ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್ ಎಸೆದ ಬೆಂಕಿ ಎಸೆತ ಪಂತ್ ಅವರ ಕಾಲಿಗೆ ಬಡಿಯಿತು. ಇದರಿಂದಾಗಿ ಅರ್ಧದಲ್ಲೇ ಮೈದಾನ ತೊರೆದಿದ್ದ ಪಂತ್ ಅವರ ಕಾಲ್ಬೆರಳಿನಲ್ಲಿ ಮೂಳೆ ಮುರಿತ ಉಂಟಾಗಿದೆ ಎಂದು ವರದಿಯಾಗಿತ್ತು. ಹೀಗಾಗಿ ಸರಣಿಯ ಕೊನೆಯ ಪಂದ್ಯದಿಂದ ಪಂತ್ ಹೊರಗುಳಿದಿದ್ದರು.

ದುರಾದೃಷ್ಟಕರವೆಂಬಂತೆ ರಿಷಭ್ ಪಂತ್ ಗಂಭೀರವಾಗಿ ಗಾಯಗೊಳ್ಳಲು ಕಾರಣರಾಗಿದ್ದ ಅದೇ ಕ್ರಿಸ್ ವೋಕ್ಸ್ ಓವಲ್ ಟೆಸ್ಟ್ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಗಾಯಗೊಂಡರು. ಇದರಿಂದಾಗಿ ವೋಕ್ಸ್ ಕೊನೆಯ ಪಂದ್ಯವನ್ನು ಆಡಲು ಸಾಧ್ಯವಾಗಲಿಲ್ಲ. ಇದೀಗ ಸರಣಿ ಮುಗಿದ ಬಳಿಕ ಪಂತ್ ಹಾಗೂ ವೋಕ್ಸ್ ಪರಸ್ಪರ ಸಂದೇಶ ಕಳುಹಿಸಿ ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ.

ವಾಸ್ತವವಾಗಿ ಓವಲ್ ಟೆಸ್ಟ್‌ನಲ್ಲಿ ಕೈಗೆ ಗಂಭೀರವಾಗಿ ಗಾಯವಾಗಿದ್ದರೂ ಕ್ರಿಸ್ ವೋಕ್ಸ್ ಒಂದೇ ಕೈನಲ್ಲಿ ಬ್ಯಾಟಿಂಗ್ ಮಾಡಲು ಕ್ರಿಸ್ಗೆ ಬಂದಿದ್ದರು. ವೋಕ್ಸ್ ಅವರ ಕ್ರೀಡಾ ಸ್ಫೂರ್ತಿಗೆ ಇಡೀ ಜಗತ್ತೇ ಸಲ್ಯೂಟ್ ಹೊಡೆದಿತ್ತು. ಇತ್ತ ರಿಷಭ್ ಪಂತ್ ಕೂಡ ವೋಕ್ಸ್ ಅವರ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸೆಲ್ಯೂಟ್ ಎಮೋಜಿಯೊಂದಿಗೆ ಪೋಸ್ಟ್ ಮಾಡಿದ್ದರು.

ಪಂತ್ ಅವರ ಪೋಸ್ಟ್ ನೋಡಿದ ವೋಕ್ಸ್ ಈ ಬಗ್ಗೆ ಪ್ರತಿಕ್ರಿಯಿಸಿದ್ದ್ದು, ‘ನಾನು ಪಂತ್ ಅವರ ಪೋಸ್ಟ್ಗೆ ಧನ್ಯವಾದಗಳು ಎಂದು ಪ್ರತ್ಯುತ್ತರಿಸಿ, ನಿಮ್ಮ ಪ್ರೀತಿಗೆ ಧನ್ಯವಾದಗಳು, ನೀವು ಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದೀರಿ ಎಂದು ಭಾವಿಸುತ್ತೇನೆ ಎಂದು ಹೇಳಿದೆ.

ಇದಾದ ನಂತರ, ಪಂತ್ ನನಗೆ ವಾಯ್ಸ್ ಮೆಸೇಜ್ ಕಳುಹಿಸಿ ಅದರಲ್ಲಿ, ‘ಚೇತರಿಸಿಕೊಳ್ಳುತ್ತಿದ್ದೇನೆ. ನೀವು ಕೂಡ ಬೇಗ ಹುಷಾರಾಗಿ ಎಂದು ಆಶಿಸುತ್ತೇನೆ. ನಾವು ಮತ್ತೆ ಮೈದಾನದಲ್ಲಿ ಭೇಟಿಯಾಗುತ್ತೇವೆ ಎಂದು ಹೇಳಿದ್ದರು. ಆ ಬಳಿಕ ನಾನು, ನನ್ನಿಂದ ನಿಮ್ಮ ಕಾಲ್ಬೆರಳು ಮುರಿಯಿತು. ಅದಕ್ಕಾಗಿ ನನ್ನನ್ನು ಕ್ಷಮಿಸಿ ಎಂದು ಪ್ರತಿಕ್ರಿಯಿಸಿದೆ ಎಂದು ವೋಕ್ಸ್ ಹೇಳಿದ್ದಾರೆ.
Published On - 9:25 pm, Thu, 7 August 25
