IND vs SA: ಕಳಪೆ ಪ್ರದರ್ಶನಕ್ಕೆ ಬಹಿರಂಗವಾಗಿ ಕ್ಷಮೆಯಾಚಿಸಿದ ರಿಷಭ್ ಪಂತ್
Rishabh Pant apology: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ಹೀನಾಯ ಸೋಲು ಮತ್ತು ವೈಯಕ್ತಿಕ ಕಳಪೆ ಪ್ರದರ್ಶನಕ್ಕೆ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಕ್ಷಮೆಯಾಚಿಸಿದ್ದಾರೆ. ತಂಡವಾಗಿ ನಿರೀಕ್ಷೆಗಳನ್ನು ಪೂರೈಸಲು ವಿಫಲರಾಗಿದ್ದೇವೆ ಎಂದು ಒಪ್ಪಿಕೊಂಡಿರುವ ಪಂತ್, ಮುಂದಿನ ದಿನಗಳಲ್ಲಿ ಕಠಿಣ ಪರಿಶ್ರಮದಿಂದ ಬಲವಾಗಿ ಮರಳುವ ಭರವಸೆ ನೀಡಿದ್ದಾರೆ. ಸರಣಿಯಲ್ಲಿ ಕೇವಲ 49 ರನ್ ಗಳಿಸಿ ವಿಫಲರಾಗಿದ್ದ ಪಂತ್, ತಮ್ಮ ಆಟ ಸುಧಾರಿಸಲು ಶ್ರಮಿಸುವುದಾಗಿ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಅನುಭವಿಸಿರುವ ಭಾರತ (India vs South Africa) ತಂಡದ ಬಗ್ಗೆ ಅಸಮಾಧಾನ ಸ್ಫೋಟಗೊಂಡಿದೆ. ಆಟಗಾರರಿಂದ ಹಿಡಿದು, ಮುಖ್ಯ ಕೋಚ್ವರೆಗೆ ಎಲ್ಲರನ್ನು ದೂಷಿಸಲಾಗುತ್ತಿದೆ. ಇದೀಗ ಇದೆಲ್ಲದರ ನಡುವೆ ಗುವಾಹಟಿ ಟೆಸ್ಟ್‌ನಲ್ಲಿ ತಂಡದ ನಾಯಕತ್ವ ವಹಿಸಿದ್ದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ (Rishabh Pant) ತಮ್ಮ ಕಳಪೆ ಪ್ರದರ್ಶನಕ್ಕೆ ಕ್ಷಮೆಯಾಚಿಸುವುದಾಗಿ ಹೇಳಿಕೊಂಡಿದ್ದಾರೆ. ಹಾಗೆಯೇ ಮುಂದಿನ ದಿನಗಳಲ್ಲಿ ಹೆಚ್ಚು ಶ್ರಮಿಸಿ ತಂಡಕ್ಕೆ ಮರಳುವುದಾಗಿಯೂ ಹೇಳಿದ್ದಾರೆ. ಗುವಾಹಟಿ ಟೆಸ್ಟ್‌ನಲ್ಲಿ ರಿಷಭ್ ಪಂತ್ ಔಟಾದ ರೀತಿಗೆ ಸಾಕಷ್ಟು ಟೀಕೆಗಳು ಎದುರಾಗಿದ್ದವು. ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಪ್ರೇಕ್ಷಕರಿಗಿಂತ ಹೆಚ್ಚಾಗಿ ತಂಡಕ್ಕಾಗಿ ಆಡಬೇಕೆಂದು ಹೇಳಿದ್ದರು.
ಕ್ಷಮೆಯಾಚಿಸಿದ ರಿಷಭ್ ಪಂತ್
ಇದೀಗ ಟೆಸ್ಟ್ ಸರಣಿ ಮುಗಿಸಿದ ಬಳಿಕ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿರುವ ಪಂತ್, ‘ಕಳೆದ ಎರಡು ವಾರಗಳಲ್ಲಿ ನಾವು ಉತ್ತಮ ಪ್ರದರ್ಶನ ನೀಡಿಲ್ಲ ಎಂಬುದನ್ನು ಮರೆಮಾಚಲು ಸಾಧ್ಯವಿಲ್ಲ. ತಂಡವಾಗಿ ಮತ್ತು ವ್ಯಕ್ತಿಗಳಾಗಿ, ನಾವು ಯಾವಾಗಲೂ ಅತ್ಯುನ್ನತ ಮಟ್ಟದಲ್ಲಿ ಪ್ರದರ್ಶನ ನೀಡಲು ಮತ್ತು ಲಕ್ಷಾಂತರ ಭಾರತೀಯರ ಮುಖದಲ್ಲಿ ನಗು ತರಿಸಲು ಬಯಸುತ್ತೇವೆ. ಕ್ಷಮಿಸಿ , ಈ ಬಾರಿ ನಾವು ನಿರೀಕ್ಷೆಗಳಿಗೆ ತಕ್ಕಂತೆ ಆಡಲಿಲ್ಲ. ಆದರೆ ಕ್ರೀಡೆಗಳು ತಂಡವಾಗಿ ಅಥವಾ ಆಟಗಾರರಾಗಿ ಕಲಿಯಲು ಮತ್ತು ಬೆಳೆಯಲು ನಿಮಗೆ ಕಲಿಸುತ್ತವೆ. ಭಾರತವನ್ನು ಪ್ರತಿನಿಧಿಸುವುದು ನಮ್ಮ ಜೀವನದ ದೊಡ್ಡ ಗೌರವ. ಈ ತಂಡದ ಸಾಮರ್ಥ್ಯ ಏನೆಂದು ನಮಗೆ ತಿಳಿದಿದೆ ಮತ್ತು ನಾವು ಕಷ್ಟಪಟ್ಟು ಕೆಲಸ ಮಾಡುತ್ತೇವೆ, ಒಟ್ಟಿಗೆ ಬರುತ್ತೇವೆ ಮತ್ತು ಬಲವಾಗಿ ಮರಳುತ್ತೇವೆ. ನಿಮ್ಮ ಅಚಲ ಬೆಂಬಲ ಮತ್ತು ಪ್ರೀತಿಗೆ ಧನ್ಯವಾದಗಳು. ಜೈ ಹಿಂದ್’ ಎಂದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ ಅರ್ಧಶತಕ ಬಾರಿಸಿದ ರಿಷಭ್ ಪಂತ್
ಟೆಸ್ಟ್ ಸರಣಿಯಲ್ಲಿ ರಿಷಭ್ ಪಂತ್ ವಿಫಲ
ಸರಣಿಯಲ್ಲಿ ಟೀಂ ಇಂಡಿಯಾದ ಯಾವುದೇ ಬ್ಯಾಟ್ಸ್‌ಮನ್ ಪ್ರಭಾವ ಬೀರಲು ಸಾಧ್ಯವಾಗದಿದ್ದರೂ, ಪಂತ್ ಅವರ ಪ್ರದರ್ಶನ ವಿಶೇಷವಾಗಿ ಕಳಪೆಯಾಗಿತ್ತು. ಪಂತ್ ಆಡಿದ ಎರಡು ಟೆಸ್ಟ್‌ಗಳಲ್ಲಿ ಕೇವಲ 49 ರನ್ ಗಳಿಸಿದ್ದರು. ಗುವಾಹಟಿ ಟೆಸ್ಟ್‌ನಲ್ಲಿ ಅವರು ತಮ್ಮ ವಿಕೆಟ್ ಕೈಚೆಲ್ಲಿದ ರೀತಿ ನಿಜಕ್ಕೂ ಆಘಾತಕಾರಿಯಾಗಿತ್ತು. ಇದಲ್ಲದೆ, ಹಾಲಿ ನಾಯಕನಾಗಿ, ಅವರು ತಮ್ಮದೇ ಆಟಗಾರರ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕಂಡುಬಂದಿತು. ಒಟ್ಟಾರೆಯಾಗಿ, ಈ ಸರಣಿ ಪಂತ್‌ಗೆ ದುಃಸ್ವಪ್ನವಾಗಿತ್ತು ಎಂದರೇ ತಪ್ಪಾಗಲಾರದು. ಇದೀಗ ಮುಂದಿನ ದಿನಗಳಲ್ಲಿ ಪಂತ್ ಹೇಗೆ ಪುನರಾಗಮನ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:40 pm, Thu, 27 November 25
