- Kannada News Photo gallery Cricket photos Dhruv Jurel: Record-Breaking Wicket-Keeper in India vs England Test
IND vs ENG: ಪ್ಲೇಯಿಂಗ್ 11 ನಲ್ಲಿ ಇಲ್ಲದಿದ್ದರೂ ಇತಿಹಾಸ ಸೃಷ್ಟಿಸಿದ ಧ್ರುವ್ ಜುರೆಲ್
Dhruv Jurel: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಗಾಯದಿಂದಾಗಿ, ಬದಲಿ ಆಟಗಾರ ಧ್ರುವ ಜುರೆಲ್ ವಿಕೆಟ್ ಕೀಪಿಂಗ್ ಮಾಡಿದರು. ಅವರು ಒಟ್ಟು ನಾಲ್ಕು ಕ್ಯಾಚ್‌ಗಳನ್ನು ಪಡೆದು, ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಭಾರತೀಯ ಬದಲಿ ವಿಕೆಟ್ ಕೀಪರ್ ಎನಿಸಿಕೊಂಡರು. ಜೋ ರೂಟ್ ಮತ್ತು ಬೆನ್ ಡಕೆಟ್ ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.
Updated on: Jul 26, 2025 | 4:43 PM

ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಹಿಡಿತ ಸಾಧಿಸಿದ್ದು, ಬೃಹತ್ ಮುನ್ನಡೆಯತ್ತ ಸಾಗಿದೆ. ಇತ್ತ ಟೀಂ ಇಂಡಿಯಾ ಏನೆಲ್ಲ ಪ್ರಯತ್ನ ಪಟ್ಟರೂ ಇಂಗ್ಲೆಂಡ್ ಬ್ಯಾಟರ್ಗಳನ್ನು ಕಟ್ಟಿಹಾಕುವಲ್ಲಿ ವಿಫಲವಾಗಿದೆ. ಆದಾಗ್ಯೂ ಇದೆಲ್ಲದರ ನಡುವೆ ಪ್ಲೇಯಿಂಗ್ 11 ನಲ್ಲಿ ಅವಕಾಶ ಪಡೆಯದ ಹೊರತಾಗಿಯೂ ಬದಲಿ ಆಟಗಾರನಾಗಿ ವಿಕೆಟ್ ಕೀಪಿಂಗ್ ಮಾಡಿದ ಧ್ರುವ್ ಜುರೆಲ್ ಇತಿಹಾಸ ಸೃಷ್ಟಿಸಿದ್ದಾರೆ.

ವಾಸ್ತವವಾಗಿ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ಸಮಯದಲ್ಲಿ ಬ್ಯಾಟಿಂಗ್ ಮಾಡುವಾಗ ರಿಷಭ್ ಪಂತ್ ಕಾಲಿಗೆ ಗಾಯವಾಯಿತು. ಹೀಗಾಗಿ ಕೇವಲ ಬ್ಯಾಟರ್ ಆಗಿ ಆಡುತ್ತಿರುವ ಪಂತ್ ಬದಲಿಗೆ ಧ್ರುವ್ ಜುರೆಲ್ ವಿಕೆಟ್ ಕೀಪಿಂಗ್ ಮಾಡುತ್ತಿದ್ದು, ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಧ್ರುವ್ ಇದುವರೆಗೆ ಒಟ್ಟು 4 ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಧ್ರುವ್ ಜುರೆಲ್ ಮೊದಲಿಗೆ ವಾಷಿಂಗ್ಟನ್ ಸುಂದರ್ ಅವರ ಎಸೆತದಲ್ಲಿ ಹ್ಯಾರಿ ಬ್ರೂಕ್ ಅವರನ್ನು ಸ್ಟಂಪ್ ಮಾಡಿದರು. ಆ ಬಳಿಕ ರವೀಂದ್ರ ಜಡೇಜಾ ಅವರ ಎಸೆತದಲ್ಲಿ ಜೋ ರೂಟ್ ಅವರನ್ನು ಸಹ ಸ್ಟಂಪ್ ಔಟ್ ಮಾಡಿದರು. ಇದರಿಂದಾಗಿ, ರೂಟ್ ಅವರ 150 ರನ್‌ಗಳ ಅದ್ಭುತ ಇನ್ನಿಂಗ್ಸ್ ಕೊನೆಗೊಂಡಿತು.

ಇದಕ್ಕೂ ಮುನ್ನ 94 ರನ್ ಬಾರಿಸಿ ಆಡುತ್ತಿದ್ದ ಬೆನ್ ಡಕೆಟ್, ಅನ್ಶುಲ್ ಕಾಂಬೋಜ್ ಅವರ ಎಸೆತದಲ್ಲಿ ಕೀಪರ್ ಜುರೆಲ್ಗೆ ಕ್ಯಾಚಿತ್ತು ಔಟಾದರು. ನಂತರ ಬುಮ್ರಾ ಬೌಲಿಂಗ್‌ನಲ್ಲಿ ಜೇಮಿ ಸ್ಮಿತ್ ನೀಡಿದ ಕ್ಯಾಚ್ ಅನ್ನು ಹಿಡಿಯುವ ಮೂಲಕ ಜುರೆಲ್ 4 ವಿಕೆಟ್ ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಇದಕ್ಕೂ ಮುನ್ನ ನಡೆದಿದ್ದ ಲಾರ್ಡ್ಸ್ ಟೆಸ್ಟ್‌ನಲ್ಲಿಯೂ ಧ್ರುವ್ ಜುರೆಲ್ ಬದಲಿ ವಿಕೆಟ್ ಕೀಪರ್ ಆಗಿ ಕಾಣಿಸಿಕೊಂಡಿದ್ದರು. ಆ ಪಂದ್ಯದಲ್ಲಿ ಅವರು ವಿಕೆಟ್ ಕೀಪರ್ ಆಗಿ 3 ವಿಕೆಟ್ ಕಬಳಿಸಿದರು. 2021 ರಲ್ಲಿ ಕಾನ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕೆಎಸ್ ಭರತ್ ಬದಲಿ ವಿಕೆಟ್ ಕೀಪರ್ ಆಗಿ ಆಡಿ 3 ವಿಕೆಟ್ ಕಬಳಿಸಿದ್ದರು. ಈಗ ಜುರೆಲ್, ಭರತ್ ಅವರನ್ನು ಹಿಂದಿಕ್ಕಿದ್ದಾರೆ.
