ಕೇರಳದಲ್ಲಿ ಸತತ ಆರನೇ ದಿನವೂ ನಿಫಾ ವೈರಸ್(Nipah Virus)ನ ಹೊಸ ಪ್ರಕರಣಗಳು ವರದಿಯಾಗದ ಹಿನ್ನೆಲೆಯಲ್ಲಿ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ.9 ಗ್ರಾಮ ಪಂಚಾಯ್ತಿಗಳಲ್ಲಿ ಕಂಟೈನ್ಮೆಂಟ್ ವಲಯಗಳನ್ನು ನಿರ್ಮಿಸಲಾಗಿತ್ತು, ಈ ನಿರ್ಬಂಧಗಳನ್ನು ಕೋಯಿಕ್ಕೋಡ್ ಜಿಲ್ಲಾಡಳಿತ ಗುರುವಾರ ಹಿಂತೆಗೆದುಕೊಂಡಿದೆ. ವಟಕರ ತಾಲೂಕಿನಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂಬ ಆರೋಗ್ಯ ಇಲಾಖೆಯ ಮೌಲ್ಯಮಾಪನದೊಂದಿಗೆ ಜಿಲ್ಲಾಧಿಕಾರಿ ಎ ಗೀತಾ ಕಂಟೈನ್ಮೆಂಟ್ ಜೋನ್ಗಳನ್ನು ತೆಗೆದುಹಾಕಿದ್ದಾರೆ.
ಇಲ್ಲಿಯವರೆಗೆ ಕೋಯಿಕ್ಕೋಡ್ನಲ್ಲಿ 6 ನಿಫಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ, ಇಬ್ಬರು ಸಾವನ್ನಪ್ಪಿದ್ದಾರೆ. ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಎರಡು ವಾರಗಳಿಂದ ಕೇರಳದಲ್ಲಿ ನಿಫಾ ವೈರಸ್ ಪ್ರಕರಣ ಹೆಚ್ಚಾಗುತ್ತಿದ್ದು, ಜನರಲ್ಲಿ ಭೀತಿ ಉಂಟಾಗಿತ್ತು.
ನಿಫಾ ವೈರಸ್ ಲಕ್ಷಣಗಳು
ನಿಫಾ ವೈರಸ್ ತಗುಲಿರುವುದರ ಸಾಮಾನ್ಯ ಲಕ್ಷಣಗಳೆಂದರೆ, ಅನಾರೋಗ್ಯ, ಜ್ವರ, ಮೈ ಕೈ ನೋವು, ಸ್ನಾಯುಗಳ ನೋವು, ತಲೆನೋವು, ಸುಸ್ತು, ವಾಂತಿ. ನಿಫಾ ವೈರಸ್ ಮನುಷ್ಯರಲ್ಲಿ ಬಹಳ ವೇಗವಾಗಿ ಹರಡುತ್ತದೆ. ನಿಫಾ ವೈರಸ್ ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡುತ್ತದೆ. ಅದೇ ರೀತಿ ಪ್ರಾಣಿಗಳಿಂದ ಮನುಷ್ಯರಿಗೂ ಹರಡುತ್ತದೆ. ಬಾವಲಿ, ಹಂದಿ, ಕುರಿ ಸೇರಿದಂತೆ ಸಾಕು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ.
ಬಾವಲಿ ಅಥವಾ ಹಕ್ಕಿಗಳು ಅರ್ಧಂಬರ್ಧ ತಿಂದು ಬಿಟ್ಟ ಹಣ್ಣುಗಳನ್ನು ಸೇವನೆ ಮಾಡುವುದರಿಂದ ನಿಫಾ ವೈರಸ್ ತಗುಲುತ್ತದೆ. ಬಾವಲಿಗಳು ತಿಂದ ಹಣ್ಣುಗಳನ್ನು ಸೇವನೆ ಮಾಡುವುದರಿಂದ ನಿಫಾ ವೈರಸ್ ತಗುಲುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ನಿಫಾ ವೈರಸ್ ಮನುಷ್ಯರಿಂದ ಮನುಷ್ಯರಿಗೆ ಹರಡದಂತೆ ತಡೆಯಲು, ನಿಫಾ ವೈರಸ್ ತಗುಲಿದವರಿಂದ ಭೌತಿಕ ಅಂತರ ಕಾಪಾಡಿಕೊಳ್ಳಬೇಕು. ನಿಫಾ ವೈರಸ್ ತಗುಲಿದವರನ್ನು ಭೇಟಿಯಾದ ಬಳಿಕ ಕೈಗಳನ್ನು ತಪ್ಪದೇ ತೊಳೆಯಬೇಕು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ