Amit Shah: ‘ಒಂದು ಇಂಚು ನೆಲವನ್ನೂ ಬಿಟ್ಟುಕೊಡಲ್ಲ’- ಚೀನಾ ಕ್ಯಾತೆ ಮಧ್ಯೆಯೂ ಅರುಣಾಚಲದಲ್ಲಿ ಅಮಿತ್ ಶಾ ಗುಡುಗು

|

Updated on: Apr 10, 2023 | 6:08 PM

Amit Shah Visit To Arunchal Pradesh: ಅಮಿತ್ ಶಾ ಅರುಣಾಚಲ ಪ್ರದೇಶಕ್ಕೆ ಭೇಟಿ ಕೊಡುತ್ತಾರೆಂದು ಗೊತ್ತಾದಾಗಲೂ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು. ಅಮಿತ್ ಶಾ ಅರುಣಾಚಲಕ್ಕೆ ಹೋಗಬಾರದು. ಇದು ಚೀನಾ ಸಾರ್ವಭೌಮತ್ವಕ್ಕೆ ಧಕ್ಕೆ ತಂದಂತೆ ಎಂದು ಬೆದರಿಕೆಯನ್ನೂ ಹಾಕಿತ್ತು. ಆದರೆ, ಇದಕ್ಕೆ ಕಿವಿಗೊಡದ ಅಮಿತ್ ಶಾ ಅರುಣಾಚಲಕ್ಕೆ ಭೇಟಿ ನೀಡಿ ಕೆಲ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮಾಡಿದ್ದಾರೆ.

Amit Shah: ‘ಒಂದು ಇಂಚು ನೆಲವನ್ನೂ ಬಿಟ್ಟುಕೊಡಲ್ಲ’- ಚೀನಾ ಕ್ಯಾತೆ ಮಧ್ಯೆಯೂ ಅರುಣಾಚಲದಲ್ಲಿ ಅಮಿತ್ ಶಾ ಗುಡುಗು
ಅಮಿತ್ ಶಾ
Follow us on

ನವದೆಹಲಿ: ಚೀನಾ ಆಕ್ಷೇಪದ ಮಧ್ಯೆಯೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅರುಣಾಚಲಪ್ರದೇಶಕ್ಕೆ (Amit Shah Visit to Arunachal Pradesh) ಭೇಟಿ ನೀಡಿದ್ದಾರೆ. ಅಲ್ಲದೇ ಭಾರತದ ಒಂದು ಇಂಚು ನೆಲವನ್ನ ಯಾರೂ ಕಿತ್ತುಕೊಳ್ಳಲು ಆಗಲ್ಲ ಎಂದು ಚೀನಾ ವಿರುದ್ಧ ಅಮಿತ್ ಶಾ ಗುಡುಗಿದ್ದಾರೆ. ಅರುಣಾಚಲ ಪ್ರದೇಶವನ್ನು ಚೀನಾ ತನ್ನ ದೇಶಕ್ಕೆ ಸೇರಿದ್ದು ಎಂದು ವಾದಿಸುತ್ತಾ ಬಂದಿದೆ. ಅರುಣಾಚಲವು ಹಿಂದೆ ಟಿಬೆಟ್​ನ ಭಾಗವಾಗಿತ್ತು. ಈಗ ಟಿಬೆಟ್ ಚೀನಾ ವಶದಲ್ಲಿರುವುದರಿಂದ ಅರುಣಾಚಲವೂ ಚೀನಾಗೆ ಸೇರಬೇಕು ಎನ್ನುತ್ತಿದೆ. ಇತ್ತೀಚೆಗೆ ಅರುಣಾಚಲಪ್ರದೇಶದ ಹಲವು ಸ್ಥಳಗಳ ಹೆಸರನ್ನೂ ಚೀನಾ ಬದಲಾಯಿಸಿದೆ. ಅರುಣಾಚಲಪ್ರದೇಶಕ್ಕೆ ಭಾರತದ ಸಚಿವರು, ಪ್ರಧಾನಿಗಳು ಭೇಟಿ ಕೊಟ್ಟಾಗೆಲ್ಲಾ ಚೀನಾ ತಗಾದೆ ತೆಗೆಯುತ್ತದೆ. ಚೀನಾದ ಸಾರ್ವಭೌಮತ್ವಕ್ಕೆ ಸಂಚಕಾರ ಆಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದೆ.

ಅಮಿತ್ ಶಾ ಅರುಣಾಚಲ ಪ್ರದೇಶಕ್ಕೆ ಭೇಟಿ ಕೊಡುತ್ತಾರೆಂದು ಗೊತ್ತಾದಾಗಲೂ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು. ಅಮಿತ್ ಶಾ ಅರುಣಾಚಲಕ್ಕೆ ಹೋಗಬಾರದು. ಇದು ಚೀನಾ ಸಾರ್ವಭೌಮತ್ವಕ್ಕೆ ಧಕ್ಕೆ ತಂದಂತೆ ಎಂದು ಬೆದರಿಕೆಯನ್ನೂ ಹಾಕಿತ್ತು. ಆದರೆ, ಇದಕ್ಕೆ ಕಿವಿಗೊಡದ ಅಮಿತ್ ಶಾ ಅರುಣಾಚಲಕ್ಕೆ ಭೇಟಿ ನೀಡಿ ಕೆಲ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮಾಡಿದ್ದಾರೆ.

ಯಾರೂ ಕೂಡ ನಮ್ಮ ಒಂದಿಂಚೂ ನೆಲವನ್ನೂ ಕಸಿಯಲು ಸಾಧ್ಯವಿಲ್ಲ. ಭಾರತದ ಭೂಭಾಗದ ಸಮಗ್ರತೆಯನ್ನು ಯಾರೂ ಪ್ರಶ್ನಿಸಲು ಆಗುವುದಿಲ್ಲ ಎಂದು ಅಮಿತ್ ಶಾ ಚೀನಾಗೆ ತಿರುಗೇಟು ನೀಡಿದ್ದಾರೆ. ಚೀನಾ ಗಡಿಯಲ್ಲಿರುವ ಅರುಣಾಚಲ ಪ್ರದೇಶದ ಕಿಬಿತೂ ಎಂಬ ಗ್ರಾಮದಲ್ಲಿ ವೈಬ್ರೆಂಟ್ ವಿಲೇಜಸ್ ಯೋಜನೆಯನ್ನು ಅಮಿತ್ ಶಾ ಚಾಲನೆಗೆ ತಂದಿದ್ದಾರೆ. ಈ ವೇಳೆ ಮಾತನಾಡುತ್ತಾ, ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಈಶಾನ್ಯ ರಾಜ್ಯಗಳಿಗೆ ಪ್ರಾಶಸ್ತ್ಯ ನೀಡಿರುವ ಸಂಗತಿಯನ್ನು ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿElon Musk: ಪ್ರಧಾನಿ ಮೋದಿಯನ್ನು ಟ್ವಿಟರ್‌ನಲ್ಲಿ ಫಾಲೋ ಮಾಡುತ್ತಿರುವ ಎಲಾನ್ ಮಸ್ಕ್

2014ಕ್ಕೆ ಮುಂಚೆ ಇಡೀ ಈಶಾನ್ಯ ಪ್ರದೇಶವನ್ನು ಸೂಕ್ಷ್ಮ ಪ್ರದೇಶವೆಂಬಂತೆ ನೋಡಲಾಗುತ್ತಿತ್ತು. ಕಳೆದ 9 ವರ್ಷದಲ್ಲಿ ಪ್ರಧಾನಿ ಮೋದಿ ಅವರ ಲುಕ್ ಈಸ್ಟ್ ನೀತಿ ದೆಸೆಯಿಂದಾಗಿ ಈಶಾನ್ಯ ರಾಜ್ಯಗಳು ಭಾರತದ ಅಭಿವೃದ್ಧಿಗೆ ಕೊಡುಗೆ ನೀಡುವ ಪ್ರದೇಶಗಳಾಗಿ ಪರಿಗಣಿತವಾಗಿವೆ’ ಎಂದು ಅಮಿತ್ ಶಾ ಹೇಳಿದ್ದಾರೆ.

ಅರುಣಾಚಲಪ್ರದೇಶವನ್ನು ಚೀನಾ ಝಾಂಗ್ನನ್ (Zangnan) ಎಂಬ ಹೆಸರಿನಲ್ಲಿ ಕರೆಯುತ್ತದೆ. ಅಮಿತ್ ಶಾ ಅರುಣಾಚಲಕ್ಕೆ ಭೇಟಿ ನೀಡುವ ಮುನ್ನ ಝಾಂಗ್ನನ್ ಚೀನಾದ ಭೂಭಾಗ ಎಂದು ಆ ದೇಶದ ವಕ್ತಾರ ವ್ಯಾಂಗ್ ವೆನ್​ಬಿನ್ ಹೇಳಿದ್ದರು. ಝಾಂಗ್ನನ್ ದಕ್ಷಿಣ ಟಿಬೆಟ್ ಆಗಿದ್ದು ಅದು ಚೀನಾದ ಭೂಭಾಗ ಎನ್ನುವ ಚೀನಾ ಕೆಲ ಆಯ್ದ ಸ್ಥಳಗಳ ಹೆಸರನ್ನು ಮರುನಾಮಕರಣ ಮಾಡಿಕೊಂಡಿದೆ.

ಚೀನಾದ ಈ ವಾದಕ್ಕೆ ಭಾರತ ಮೊದಲಿಂದಲೂ ಸೊಪ್ಪು ಹಾಕುತ್ತಿಲ್ಲ. ಹೆಸರು ಬದಲಾಯಿಸಿದಾಕ್ಷಣ ವಾಸ್ತವ ಸ್ಥಿತಿ ಬದಲಾಗುವುದಿಲ್ಲ. ಅರುಣಾಚಲಪ್ರದೇಶ ಯಾವತ್ತಿದ್ದರೂ ಭಾರತದ ಅವಿಭಾಜ್ಯ ಅಂಗ ಎಂದು ಭಾರತ ಸ್ಪಷ್ಟಪಡಿಸುತ್ತಲೇ ಬಂದಿದೆ. ಇತ್ತೀಚೆಗೆ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್, ಆ ಸಚಿವಾಲಯದ ವಕ್ತಾರ ಅರಿಂದಮ್ ಬಾಗಚಿ ಮೊದಲಾದವರು ಚೀನಾದ ವಾದವನ್ನು ಬಲವಾಗಿ ಅಲ್ಲಗಳೆಯುತ್ತಾ ಬಂದಿದ್ದಾರೆ.

ಇದನ್ನೂ ಓದಿಉತ್ತರಪ್ರದೇಶ: ಮದುವೆ ಮಂಟಪದಲ್ಲಿ ರಿವಾಲ್ವರ್​​ನಿಂದ ನಾಲ್ಕು ಸುತ್ತು ಗುಂಡು ಹಾರಿಸಿದ ವಧು; ವರ ತಬ್ಬಿಬ್ಬು

ಇನ್ನು, ಅರುಣಾಚಲಪ್ರದೇಶ ವಿಚಾರದಲ್ಲಿ ಭಾರತದ ನಿಲುವಿಗೆ ಅಮೆರಿಕ ಸಹಜವಾಗಿಯೇ ಬೆಂಬಲ ನೀಡುತ್ತಿದೆ. ಅರುಣಾಚಲಪ್ರದೇಶ ಭಾರತದ ಭೂಭಾಗ ಎಂಬುದನ್ನು ಅಮೆರಿಕ ಒಪ್ಪುತ್ತದೆ. ಈಗ ಚೀನಾ ಅರುಣಾಚಲ ತನಗೆ ಸೇರಿದ್ದು ಎಂದರೆ ಅದು ಅಮೆರಿಕದ ನಿಲುವನ್ನು ಪ್ರಶ್ನಿಸಿದಂತೆಯೇ. ಸ್ಥಳಗಳ ಹೆಸರು ಬದಲಾಯಿಸುವ ಕಾರ್ಯವನ್ನು ಅಮೆರಿಕ ಬಲವಾಗಿ ವಿರೋಧಿಸುತ್ತದೆ ಎಂದು ಅಮೆರಿಕ ಅಧ್ಯಕ್ಷೀಯ ನಿವಾಸ ವೈಟ್​ಹೌಸ್​ನ ಮಾಧ್ಯಮ ಕಾರ್ಯದರ್ಶಿ ಕೆರೀನ್ ಜೀನ್ ಪಿಯೆರೆ ಇತ್ತೀಚೆಗೆ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:08 pm, Mon, 10 April 23