ಪತ್ನಿ ಜತೆ ಜಗಳವಾಡಿ, ಕೋಪದಲ್ಲಿ ಬೃಹತ್ ಚರಂಡಿಗೆ ಹಾರಿದ ವ್ಯಕ್ತಿ, ಮುಂದುವರೆದ ಶೋಧ ಕಾರ್ಯಾಚರಣೆ
ನೋಯ್ಡಾದಲ್ಲಿ ಪತ್ನಿಯೊಂದಿಗೆ ಮದ್ಯಪಾನದ ವಿಚಾರಕ್ಕೆ ಜಗಳವಾಡಿದ 29 ವರ್ಷದ ವ್ಯಕ್ತಿಯೊಬ್ಬ ಕೋಪದಲ್ಲಿ ಬೃಹತ್ ಚರಂಡಿಗೆ ಹಾರಿದ್ದಾನೆ. ಸದ್ಯ ಶೋಧ ಕಾರ್ಯಾಚರಣೆ ತೀವ್ರಗೊಂಡಿದೆ. ಮಳೆ ಮತ್ತು ಕಸದಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಮತ್ತೊಂದು ಘಟನೆಯಲ್ಲಿ, ಮನೆಗೆ ತಡವಾಗಿ ಬಂದಿದ್ದಕ್ಕೆ ಪೋಷಕರ ಬೈಗುಳಕ್ಕೆ ನೊಂದ 13 ವರ್ಷದ ಬಾಲಕಿ ದೆಹಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಎರಡು ಘಟನೆಗಳು ಆಘಾತಕಾರಿ ಸನ್ನಿವೇಶಗಳನ್ನು ಎತ್ತಿ ತೋರಿಸಿವೆ.

ನೋಯ್ಡಾ, ಅಕ್ಟೋಬರ್ 08: ಹೆಂಡತಿಯೊಂದಿಗೆ ಮದ್ಯಪಾನದ ವಿಚಾರಕ್ಕೆ ಜಗಳವಾಡಿದ 29 ವರ್ಷದ ವ್ಯಕ್ತಿಯೊಬ್ಬ ಕೋಪದಲ್ಲಿ ನೋಯ್ಡಾದ ಸೆಕ್ಟರ್-81 ಮೆಟ್ರೋ ನಿಲ್ದಾಣದ ಬಳಿಯಿರುವ ಆಳವಾದ ಬೃಹತ್ ಚರಂಡಿಗೆ ಹಾರಿದ ಆಘಾತಕಾರಿ ಘಟನೆ ನಡೆದಿದೆ. ಸೆಕ್ಟರ್ 39 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ನಡೆದ ಈ ಘಟನೆಯಿಂದ ಸ್ಥಳದಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ.
ನಾಪತ್ತೆಯಾದ ವ್ಯಕ್ತಿಯನ್ನು ರವಿ ಎಂದು ಗುರುತಿಸಲಾಗಿದೆ. ಆತನ ಪತ್ನಿ ಪೊಲೀಸರಿಗೆ ನೀಡಿರುವ ಹೇಳಿಕೆಯ ಪ್ರಕಾರ, ರವಿ ಅವರ ಅತಿಯಾದ ಕುಡಿತದ ಚಟಕ್ಕೆ ಸಂಬಂಧಿಸಿದಂತೆ ದಂಪತಿ ನಡುವೆ ರಸ್ತೆಯಲ್ಲೇ ತೀವ್ರ ವಾಗ್ವಾದ ನಡೆದಿತ್ತು. ಗಲಾಟೆಯ ನಡುವೆ ಕೋಪದ ಭರದಲ್ಲಿ ರವಿ ಏಕಾಏಕಿ ರಸ್ತೆಬದಿಯ ಚರಂಡಿಗೆ ಹಾರಿದ್ದಾನೆ. ಸ್ಥಳೀಯರು ತುರ್ತು ಸಹಾಯವಾಣಿ ‘ಡಯಲ್-112’ಗೆ ಮಾಹಿತಿ ನೀಡಿದ ತಕ್ಷಣವೇ ಸೆಕ್ಟರ್ 39 ಠಾಣಾ ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿತು.
ಶೋಧ ಕಾರ್ಯಾಚರಣೆಗೆ ಅಡ್ಡಿ:
ಮಳೆಯಿಂದಾಗಿ ಚರಂಡಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದು ಮತ್ತು ಅಪಾರ ಪ್ರಮಾಣದ ಘನತ್ಯಾಜ್ಯ ಹಾಗೂ ಹೂಳು ತುಂಬಿಕೊಂಡಿರುವುದರಿಂದ ಅಗ್ನಿಶಾಮಕ ಸಿಬ್ಬಂದಿಗೆ ಆತನನ್ನು ಪತ್ತೆಹಚ್ಚುವುದು ಸವಾಲಾಗಿ ಪರಿಣಮಿಸಿತು. ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ ಸ್ಥಳೀಯ ಆಡಳಿತವು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳನ್ನು ಕಾರ್ಯಾಚರಣೆಗೆ ಇಳಿಸಿದೆ. ಬೋಟ್‌ಗಳು ಮತ್ತು ಜಾಲರಿಗಳನ್ನು ಬಳಸಿ ಶೋಧ ಮುಂದುವರಿಸಲಾಗಿದೆ.
ಮತ್ತಷ್ಟು ಓದಿ: Alcohol: ಇದ್ದಕ್ಕಿದ್ದಂತೆ ಮದ್ಯಪಾನ ಮಾಡುವುದನ್ನು ನಿಲ್ಲಿಸಿದರೆ ಏನಾಗುತ್ತೆ ಗೊತ್ತಾ?
ಇನ್ನೊಂದು ಪ್ರತ್ಯೇಕ ದುರಂತ: ಮನೆಗೆ ತಡವಾಗಿ ಬಂದಿದ್ದಕ್ಕೆ ಬೈದ ಪೋಷಕರು, 13ರ ಬಾಲಕಿ ಆತ್ಮಹತ್ಯೆ ದೆಹಲಿಯ ಶಹದಾರಾ ಜಿಲ್ಲೆಯ ಕೃಷ್ಣ ನಗರದಲ್ಲಿ ಮತ್ತೊಂದು ಬೇಸರದ ಘಟನೆ ಬೆಳಕಿಗೆ ಬಂದಿದೆ. ಮನೆಗೆ ತಡವಾಗಿ ಮರಳಿದ್ದಕ್ಕಾಗಿ ಪೋಷಕರು ಬುದ್ಧಿವಾದ ಹೇಳಿ ಗದರಿಸಿದ್ದಕ್ಕೆ ನೊಂದ 13 ವರ್ಷದ ಬಾಲಕಿಯೊಬ್ಬಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕೆಲಸದಲ್ಲಿದ್ದ ಆಕೆಯ ಸಹೋದರಿ ರಾತ್ರಿ ಪದೇ ಪದೇ ಕರೆ ಮಾಡಿದರೂ ಸ್ವೀಕರಿಸದಿದ್ದಾಗ ಮನೆಗೆ ಧಾವಿಸಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಆಕೆಯನ್ನು ಕೆಳಕ್ಕಿಳಿಸಿ ಡಾ. ಹೆಡ್ಗೆವಾರ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




