ಬಿಜೆಪಿಯನ್ನು ತೊರೆದ ಮುಕುಲ್ ರಾಯ್ಗೆ ಬಿಜೆಪಿ ಮುಖಂಡ ದಿಲೀಪ್ ಘೋಷ್ ತಿರುಗೇಟು ನೀಡಿದ್ದಾರೆ. ಟಿಎಂಸಿಯಲ್ಲಿದ್ದು ಕಟ್ ಮನಿ (ಭ್ರಷ್ಟಾಚಾರ) ಸಂಸ್ಕೃತಿ ಅಭ್ಯಾಸ ಆದವರಿಗೆ ಬಿಜೆಪಿಗೆ ಬಂದು ಉಳಿಯುವುದು ತುಂಬ ಕಷ್ಟ ಎಂದು ವ್ಯಂಗ್ಯವಾಡಿದ್ದಾರೆ. ಹಾಗೇ, ಮುಕುಲ್ ರಾಯ್ ಪದೇಪದೆ ಪಕ್ಷ ಬದಲಿಸುತ್ತಾರೆ ಎಂಬುದನ್ನು ಅಲ್ಲಗಳೆದ ದಿಲೀಪ್ ಘೋಷ್, ಮುಕುಲ್ಗೆ ಬಿಜೆಪಿಯಲ್ಲಿ ಉಳಿಯುವುದಷ್ಟೇ ಕಷ್ಟ ಎಂದಿದ್ದಾರೆ.
ಬಿಜೆಪಿಗೆ ಬರುವ ಇತರ ಪಕ್ಷದವರಿಗೆ ಇಲ್ಲಿ ಉಳಿದುಕೊಳ್ಳಲು ತಪಸ್ಸು ಮಾಡುವ ಅಗತ್ಯವಿಲ್ಲ. ಆದರೆ ಕಟ್ ಮನಿ, ಸಿಂಡಿಕೇಟ್ ಸಂಸ್ಕೃತಿಯಿರುವ ಟಿಎಂಸಿಯಿಂದ ಬಿಜೆಪಿಗೆ ಬಂದವರಿಗೆ ಇಲ್ಲಿ ಮುಂದುವರಿಯುವುದು ತುಂಬ ಕಷ್ಟ ಎಂದು ದಿಲೀಪ್ ಘೋಷ್ ಹೇಳಿದ್ದಾರೆ. ಮುಕುಲ್ ರಾಯ್ ಮತ್ತೆ ಬಿಜೆಪಿಯಿಂದ ಹೊರಹೋದಾಕ್ಷಣ ನಮ್ಮ ಪಕ್ಷಕ್ಕೆ ಯಾವ ನಷ್ಟವೂ ಅಲ್ಲ, ನಮಗೇನೂ ಬಾಧಿಸುವುದೂ ಇಲ್ಲ ಎಂದಿದ್ದಾರೆ.
ಮುಕುಲ್ ರಾಯ್ ಒಬ್ಬ ಅನುಭವಿ ರಾಜಕಾರಣಿ. ಅವರೇನೇ ಮಾಡಿದರೂ, ಅದರ ಹಿಂದೊಂದು ಪ್ಲ್ಯಾನ್ ಇದ್ದೇ ಇರುತ್ತದೆ. ಸಾವಿರಾರು ಜನರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ. ಆದರೆ ಕೆಲವೇ ಜನರಿಗೆ ಇಲ್ಲಿ ಒಗ್ಗಿಕೊಳ್ಳಲು ಸಮಸ್ಯೆಯಾಗುತ್ತದೆ. ಅದು ಅವರ ವೈಯಕ್ತಿಕ ಸಮಸ್ಯೆಯೇ ಹೊರತು ಪಕ್ಷದ್ದಲ್ಲ ಎಂದು ದಿಲೀಪ್ ಘೋಷ್ ಹೇಳಿದ್ದಾರೆ.
ನಮ್ಮ ಪಕ್ಷ ಯಾರೇ ಬಂದರೂ ಅವರನ್ನು ಸ್ವಾಗತಿಸುತ್ತದೆ. ಪ್ರಜಾಪ್ರಭುತ್ವ ಮಾದರಿಯಲ್ಲಿ ಅವರಿಗೆ ಜವಾಬ್ದಾರಿಯನ್ನೂ ವಹಿಸುತ್ತದೆ. ಆದರೆ ಒಂದಷ್ಟು ಮಂದಿಗೆ ಶಿಸ್ತಿನಿಂದ ಕೆಲಸ ಮಾಡಲು ಸಾಧ್ಯವಿಲ್ಲ. ಬಿಜೆಪಿಯ ಸಿದ್ಧಾಂತಕ್ಕೆ ಬದ್ಧರಾಗಿ ಇರಲು ಸಾಧ್ಯವಿಲ್ಲ. ಅಂಥವರು ಪಕ್ಷವನ್ನು ಬಿಟ್ಟು ಹೋಗುತ್ತಾರೆ ಎಂದು ದಿಲೀಪ್ ಘೋಷ್ ಹೇಳಿದ್ದಾರೆ. ನಮ್ಮ ಪಕ್ಷ ಸಂಘಟನೆಯಾಗಿದ್ದು ಹಳೇ ಕಾರ್ಯಕರ್ತರಿಂದ. ಅವರಿನ್ನೂ ಪಕ್ಷಕ್ಕೆ ಬದ್ಧರಾಗಿದ್ದಾರೆ. ಹೀಗೆ ಬಂದು..ಹಾಗೇ ಹೋಗುವವರ ಬಗ್ಗೆಯೆಲ್ಲ ನಾವು ತಲೆ ಕೆಡಿಸಿಕೊಳ್ಳೋದಿಲ್ಲ ಎಂದು ದಿಲೀಪ್ ಘೋಷ್ ಖಡಾಖಂಡಿತವಾಗಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Sushant Singh Rajput: ಸುಶಾಂತ್ ಸಾವಿನ ನಂತರ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ನೀಡಿದ ಅಚ್ಚರಿಯ ಹೇಳಿಕೆಗಳು
Published On - 9:58 am, Sun, 13 June 21