ಇಂದೋರ್: ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿಂದೂ ದೇವರು- ದೇವತೆಗಳಿಗೆ ಅವಮಾನ ಮಾಡಿದ ಆರೋಪದಡಿ ಜ.1ರಂದು ಬಂಧಿತನಾಗಿದ್ದ ಕಾಮಿಡಿಯನ್ ಮುನಾವರ್ ಫಾರೂಖಿಗೆ ನಿನ್ನೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಬಂಧನಕ್ಕೊಳಗಾಗಿ ಸುಮಾರು 1 ತಿಂಗಳ ಬಳಿಕ ಫಾರೂಖಿ ಬಿಡುಗಡೆಯಾಗಿದ್ದಾರೆ.
ಇಂದೋರ್ನ 56 ಡುಕಾನ್ ಎಂಬಲ್ಲಿನ ಕೆಫೆಯೊಂದರಲ್ಲಿ ಅಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುನಾವರ್ ಹಿಂದು ದೇವತೆಗಳು ಮತ್ತು ಗೃಹ ಸಚಿವ ಅಮಿತ್ ಶಾಗೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಶಾಸಕಿ ಮಾಲಿನಿ ಗೌರ್ ಪುತ್ರ, ಹಿಂದ್ ರಕ್ಷಕ್ ಸಂಘಟನೆಯ ಸಮಾವೇಶಕನೂ ಆಗಿರುವ ಏಕಲವ್ಯ ಗೌರ್ ದೂರು ದಾಖಲಿಸಿದ್ದರು. ಅವರ ದೂರಿನ ಅನ್ವಯ ಮುನಾವರ್ ಫಾರೂಖಿ ಸೇರಿ ಒಟ್ಟು ಆರು ಮಂದಿಯ ಬಂಧನವಾಗಿತ್ತು.
ಅನುಮತಿಯನ್ನೂ ಪಡೆದಿರಲಿಲ್ಲ !
ಹೊಸವರ್ಷಾಚರಣೆಯಂದು ಕೆಫೆಯಲ್ಲಿ ಕಾರ್ಯಕ್ರಮ ನಡೆಸಲು ಮೊದಲನೇದಾಗಿ ಮುನಾವರ್ ಫಾರೂಖಿ ಮತ್ತು ಸಹಚರರು ಅನುಮತಿಯನ್ನೇ ಪಡೆದಿರಲಿಲ್ಲ. ಎರಡನೇದಾಗಿ ಕೊವಿಡ್ ನಿಯಂತ್ರಣಾ ನಿಯಮಗಳನ್ನು ಸಂಫೂರ್ಣವಾಗಿ ಉಲ್ಲಂಘನೆ ಮಾಡಿದ್ದರು. ಅದಾದ ಬಳಿಕ ಕಾರ್ಯಕ್ರಮದಲ್ಲಿ ಹಿಂದು ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದರು. ಅಮಿತ್ ಶಾರನ್ನೂ ಅವಮಾನಿಸಿದ್ದರು. ಹೀಗಾಗಿ ಐಪಿಸಿ ಸೆಕ್ಷನ್ 188, 269, 34, ಮತ್ತು 295Aದಡಿ ಪ್ರಕರಣ ದಾಖಲಾಗಿತ್ತು. ಇದೇ ಕಾರಣಕ್ಕೆ ಬಂಧಿಸಲ್ಪಟ್ಟಿದ್ದರು.
ಆದರೆ ಫಾರೂಖಿ ಪರ ವಕೀಲ, ಅಂಶುಮಾನ್ ಶ್ರೀವಾಸ್ತವಾ, ಈ ಎಲ್ಲ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಅವರ ವಿರುದ್ಧ ಮಾಡಲಾದ ಆರೋಪದಲ್ಲಿ ಸ್ಪಷ್ಟತೆಯೇ ಇಲ್ಲ. ರಾಜಕೀಯ ಕಾರಣಕ್ಕಾಗಿ ಅವರನ್ನು ಬಂಧಿಸಲಾಗಿದೆ. ಅಂದಿನ ಕಾರ್ಯಕ್ರಮದಲ್ಲಿ ಫಾರೂಖಿಯಾಗಲೀ, ಉಳಿದ ನಟರಾಗಲೀ, ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಮಾತುಗಳನ್ನಾಡಿಲ್ಲ. ಯಾರನ್ನೂ ಅವಮಾನಿಸಿಲ್ಲ ಎಂದು ಹೇಳಿದ್ದಾರೆ.
ಈ ಮೊದಲು ಪ್ರಕರಣದ ವಿಚಾರಣೆ ನಡೆಸಿದ್ದ ಮಧ್ಯಪ್ರದೇಶ ಹೈಕೋರ್ಟ್ ಜಾಮೀನು ನೀಡಲು ನಿರಾಕರಿಸಿತ್ತು. ಒಬ್ಬ ವ್ಯಕ್ತಿ ತನಗೆ ಕೊಟ್ಟಿರುವ ಸ್ವಾತಂತ್ರ್ಯವನ್ನು ಇನ್ನೊಬ್ಬರಿಗೆ ನೋವಾಗುವ ರೀತಿ ಬಳಸಿಕೊಳ್ಳಬಾರದು. ಸಮತೋಲಿತವಾಗಿ ಮಾತನಾಡಬೇಕಾಗುತ್ತದೆ ಎಂದು ಕೋರ್ಟ್ ಹೇಳಿತ್ತು. ಆದರೆ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ನೇತೃತ್ವದ ಪೀಠ ಫಾರೂಖಿಗೆ ಮಧ್ಯಂತರ ಜಾಮೀನು ನೀಡಿದೆ. ಮುನಾವರ್ ಫಾರೂಖಿ ಮಧ್ಯಪ್ರದೇಶದ ಇಂದೋರ ಮೂಲದ ಹಾಸ್ಯನಟ. ಅವರು ಮೂಲತಃ ಗುಜರಾತ್ನ ಜುನಾಗಢ್ನವರು.
Munawar Faruqui ಹಿಂದೂ ದೇವತೆಗಳು ಮತ್ತು ಅಮಿತ್ ಶಾ ನಿಂದನೆ ಆರೋಪ ಹೊತ್ತ ಮುನಾವರ್ ಫಾರೂಖಿಗೆ ಮಧ್ಯಂತರ ಜಾಮೀನು