ಚೆನ್ನೈ: ತಮಿಳುನಾಡಿನ ತಂಜಾವೂರ್ ಆಸ್ಪತ್ರೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಎರಡು ವಾರಗಳ ಹಸುಗೂಸಿಗೆ ಅಳವಡಿಸಲಾಗಿದ್ದ ಕೃತಕ ನಾಳವನ್ನು ತೆಗೆಯುವ ಸಂದರ್ಭದಲ್ಲಿ ಮಗುವಿನ ಎಡಗೈ ಹೆಬ್ಬೆರಳು ಕತ್ತರಿಸಿಹೋಗಿದೆ. ಬೆರಳಿನ ಮಧ್ಯಭಾಗದಿಂದ ಮೇಲ್ತುದಿಯ ತನಕ ಕತ್ತರಿಸಲಾಗಿದ್ದು, ದಾದಿಯ ಅಜಾಗರೂಕತೆಯಿಂದ ಈ ಘಟನೆ ಸಂಭವಿಸಿದೆ ಎಂಬ ಆರೋಪ ಕೇಳಿಬಂದಿದೆ. ಮಗುವಿಗೆ ಹಾಕಲಾಗಿದ್ದ ಐವಿ ಪೈಪ್ ಅನ್ನು ಕತ್ತರಿಯಿಂದ ತುಂಡರಿಸುವಾಗ ಬೆರಳು ಸಹ ತುಂಡಾದ ಘಟನೆ ಸೋಮವಾರ (ಜೂನ್ 7) ಮಧ್ಯಾಹ್ನದ ವೇಳೆಗೆ ಜರುಗಿದೆ.
ದಾದಿಯ ಅಜಾಗರೂಕತೆಗೆ ಆಕ್ರೋಶ ವ್ಯಕ್ತಪಡಿಸಿರುವ ಹಸುಳೆಯ ತಂದೆ ತಪ್ಪು ಎಸಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಬೆರಳು ಕತ್ತರಿಸಿಹೋಗಿರುವುದು ಗೊತ್ತಾಗುತ್ತಿದ್ದಂತೆಯೇ ತಕ್ಷಣ ಎಚ್ಚೆತ್ತ ಆಸ್ಪತ್ರೆಯ ಹಿರಿಯ ವೈದ್ಯರು ಶಸ್ತ್ರ ಚಿಕಿತ್ಸೆ ಮೂಲಕ ಬೆರಳನ್ನು ಮರುಜೋಡಿಸುವ ಪ್ರಯತ್ನ ಮಾಡಿದ್ದಾರೆ. ಸದ್ಯ ಅದಕ್ಕೆ ಬೇಕಾದ ಪೂರಕ ಚಿಕಿತ್ಸೆ ಒದಗಿಸಲಾಗುತ್ತಿದೆ.
ತಂಜಾವೂರಿನ ಸರ್ಕಾರಿ ಆಸ್ಪತ್ರೆಯ ಮುಖ್ಯಸ್ಥ ಡಾ.ಜಿ.ರವಿಕುಮಾರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕತ್ತರಿಯನ್ನು ಬಳಸಿ ಪೈಪ್ ಕತ್ತರಿಸುವ ವೇಳೆ ಮಗು ಅಲುಗಾಡಿರುವ ಸಾಧ್ಯತೆ ಇದೆ. ಈ ಘಟನೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು ಆಂತರಿಕ ತನಿಖೆಗೆ ನಿರ್ದೇಶಿಸಿದ್ದೇವೆ. ಇದರ ಕುರಿತು ಆಸ್ಪತ್ರೆಯ ಸಮಿತಿಯು ವಿವರವನ್ನು ಕಲೆಹಾಕಿ ಕ್ರಮ ಜರುಗಿಸಲಾಗುವುದು. ಸದ್ಯ ಒತ್ತಡದ ಕಾರಣದಿಂದ ತಪ್ಪು ಮಾಡಿರುವ ಆರೋಪ ಹೊತ್ತ ದಾದಿ ಆಸ್ಪತ್ರೆಗೆ ಬರುತ್ತಿಲ್ಲ. ಅವರು ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮರುಜೋಡಣೆಯ ಬಗ್ಗೆ ಮಾತನಾಡಿರುವ ಅವರು, ಶಸ್ತ್ರಚಿಕಿತ್ಸೆ ಫಲಕಾರಿ ಆಗುವ ವಿಶ್ವಾಸವಿದೆ. ಆದರೆ, ಕನಿಷ್ಠ ಮೂರು ದಿನಗಳ ತನಕ ಆ ಬೆರಳಿಗೆ ಏನೂ ತಾಗದಂತೆ ನೋಡಿಕೊಳ್ಳಲೇಬೇಕು. ಹೀಗಾಗಿ ಆ ಕುರಿತು ಸಾಕಷ್ಟು ನಿಗಾ ವಹಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಸೋಮವಾರದಂದು ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವಾಗ ಈ ಅಚಾತುರ್ಯ ನಡೆದಿದ್ದು, ಸದ್ಯ ಮಗುವಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
(Nurse cuts left thumb of 2 week old baby while removing iv line using scissors in Tamil Nadu Thanjavur)
ಇದನ್ನೂ ಓದಿ:
‘2 ತಾಸಾದರೂ ನನ್ನ 5 ತಿಂಗಳ ಮಗುವನ್ನು ಒಬ್ಬರೂ ತಪಾಸಣೆ ಮಾಡಲಿಲ್ಲ..ಜೀವವೇ ಹೋಯ್ತು’-ಮೃತದೇಹ ತೋಳಲ್ಲಿ ಅಪ್ಪಿ ತಂದೆಯ ಕಣ್ಣೀರು
ಜಿಲ್ಲಾಸ್ಪತ್ರೆ ವಾರ್ಡ್ ಮುಂದೆಯೇ ಹೆರಿಗೆ, ಮಗು ಸಾವು; ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಹೃದಯ ವಿದ್ರಾವಕ ಘಟನೆ
Published On - 8:17 am, Wed, 9 June 21