ಭುವನೇಶ್ವರ್: ಇಪ್ಪತ್ತು ವರ್ಷ ಪಾಕಿಸ್ತಾನದ ಜೈಲಿನಲ್ಲಿದ್ದ ಭಾರತೀಯರೊಬ್ಬರು ತಾಯ್ನಾಡಿಗೆ ಮರಳಿದ ನಂತರ ತನ್ನವರಿಗಾಗಿ ಭಾರೀ ಹುಡುಕಾಟ ನಡೆಸಿ, ಕೊನೆಗೂ ಮನೆಯನ್ನು ಸೇರಿಕೊಂಡಿದ್ಧಾರೆ. ಒಡಿಶಾದ ಸುಂದರ್ಘರ್ ಜಿಲ್ಲೆಯ 50 ವರ್ಷದ ವ್ಯಕ್ತಿಯನ್ನು ಬಿರ್ಜು ಕುಲ್ಲು ಎಂದು ಗುರುತಿಸಲಾಗಿದೆ.
ಅಚಾನಕ್ ಆಗಿ ದೇಶದ ಗಡಿ ದಾಟಿದ್ದ ಬಿರ್ಜು ಕುಲ್ಲುನನ್ನು ಪಾಕ್ ರಕ್ಷಣಾ ಪಡೆ ಬಂಧಿಸಿ, ಲಾಹೋರ್ ಜೈಲಿನಲ್ಲಿ ಇರಿಸಿತ್ತು. 20 ವರ್ಷಗಳನ್ನು ಜೈಲಿನಲ್ಲಿ ಕಳೆಯುವಂತೆ ಮಾಡಿತ್ತು. ಕಳೆದ ಅಕ್ಟೋಬರ್ನಲ್ಲಿ ಶಿಕ್ಷೆಯ ಅವಧಿ ಪೂರ್ಣಗೊಂಡ ನಂತರ, ಪಾಕ್ ಪಡೆ ಆತನನ್ನು ಭಾರತಕ್ಕೆ ಹಸ್ತಾಂತರಿಸಿದೆ.
ಹೋಟೆಲ್ ಕೆಲಸಕ್ಕೆಂದು ಹೋಗಿದ್ದ!
ಹೋಟೆಲ್ ಕೆಲಸಕ್ಕೆಂದು ಜಾರ್ಖಂಡ್ಗೆ ಹೋಗಿದ್ದ ಬಿರ್ಜು ನಂತರ ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಮನೆಯವರಿಗೆ ಅವನು ಎಲ್ಲಿದ್ದಾನೆ, ಹೇಗಿದ್ದಾನೆ ಎಂಬ ಬಗ್ಗೆ ಯಾವುದೇ ಸುಳಿವಿರಲಿಲ್ಲ. ಆತ ಮರಳಿ ಬರುತ್ತಾನೆ ಎಂಬ ಆಸೆಯನ್ನು ಎಲ್ಲರೂ ಕಳೆದುಕೊಂಡಿದ್ದರು.
‘ಬಿರ್ಜು ಮರಳಿ ಬಂದದ್ದು ತುಂಬಾ ಸಂತೋಷವಾಗಿದೆ. ಇದು ನಮಗೆಲ್ಲಾ ಹೊಸ ಬದುಕು’ ಎಂದು ಆತನ ಸಹೋದರಿ ಹೇಳಿದ್ದಾರೆ. ‘ನನ್ನ ಬಂಧುಗಳನ್ನು, ನೆಂಟರನ್ನು, ಗೆಳೆಯರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇನೆ’ ಎಂದು ಬಿರ್ಜು ಕುಲ್ಲು ಹೇಳಿಕೊಂಡಿದ್ಧಾನೆ. ಆತನ ಪುನರ್ವಸತಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಡುವುದಾಗಿ ಕುತ್ರಾ ಗ್ರಾಮದ ಅಭಿವೃದ್ಧಿ ಅಧಿಕಾರಿ ಮಾನಸ್ ರಂಜನ್ ರೇ ಇದೇ ವೇಳೆ ತಿಳಿಸಿದ್ದಾರೆ.
Published On - 3:23 pm, Sat, 14 November 20