ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್(Ashwini Vaishnaw) ಕಳೆದ ಎರಡು ದಿನಗಳಿಂದ ನಾನಾ ಕಾರಣಗಳಿಂದಾಗಿ ಸುದ್ದಿಯಲ್ಲಿದ್ದಾರೆ. ಒಡಿಶಾದಲ್ಲಿ ಸಂಭವಿಸಿದ ರೈಲು ದುರಂತದ ಬಳಿಕ ಪ್ರತಿಪಕ್ಷಗಳು ರಾಜೀನಾಮೆಗೆ ಒತ್ತಾಯಿಸುತ್ತಿದ್ದರೆ ಇನ್ನೂ ಕೆಲವರು ಕಾರ್ಯ ವೈಖರಿಯನ್ನು ಉಲ್ಲೇಖಿಸಿ ಮಾತನಾಡಲು ಆರಂಭಿಸಿದ್ದಾರೆ. ಒಡಿಶಾ ಭೀಕರ ರೈಲು ಅಪಘಾತದ ಬಳಿಕ ರೈಲ್ವೆ ಸುರಕ್ಷತೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅದರಲ್ಲೂ ಕಳೆದ ಐದು ವರ್ಷಗಳಿಂದ ಭಾರತೀಯ ರೈಲ್ವೆಯಲ್ಲಿ ಆಗಿರುವಂತಹ ಸುಧಾರಣೆ ಹಾಗೂ ಆಧುನಿಕ ಸುರಕ್ಷತಾ ಕ್ರಮಗಳ ಹೊರತಾಗಿಯೂ ಈ ರೀತಿಯ ಭೀಕರ ರೈಲ್ವೆ ಅಪಘಾತವು ಸಾಕಷ್ಟು ಜನರನ್ನು ಹುಬ್ಬೇರಿಸುವಂತೆ ಮಾಡಿದೆ. ಹೀಗಾಗಿ ಪ್ರತಿಪಕ್ಷಗಳು ಸೇರಿದಂತೆ ಹಲವು ಮಂದಿ ಸಚಿವರ ರಾಜೀನಾಮೆಯನ್ನು ಕೇಳುತ್ತಿದ್ದಾರೆ.
ಬೇರೆ ರೈಲ್ವೆ ಸಚಿವರುಗಳಿಗಿಂತ ಅಶ್ವಿನಿ ವೈಷ್ಣವ್ ಹೇಗೆ ಭಿನ್ನ?
ಯುಪಿಎ, ಎನ್ಡಿಎ ಎರಡೂ ಸರ್ಕಾರದ ಅವಧಿಗಳಲ್ಲಿ ಇಂತಹ ಹಲವು ದುರ್ಘಟನೆಗಳು ಸಂಭವಿಸಿವೆ. ಆದರೆ ಸಚಿವರು ಆ ಸ್ಥಳಕ್ಕೆ ಭೇಟಿಕೊಟ್ಟು ಹಿಂದಿರುಗಿಬಿಡುತ್ತಿದ್ದರು. ಅಲ್ಲೇ ಇದ್ದುಕೊಂಡು ಪ್ರತಿ ಕ್ಷಣ ಕ್ಷಣವೂ ಜನರ ಸುರಕ್ಷತೆಗಾಗಿ ತುಡಿಯುವ ಈ ಮನಸ್ಸನ್ನು ರೈಲ್ವೆ ಸಚಿವರಲ್ಲಿ ನೋಡಿದ್ದು, ಇತಿಹಾಸದಲ್ಲಿಯೇ ಮೊದಲು.
ಅಶ್ವಿನಿ ವೈಷ್ಣವ್ ಎಂಜಿನಿಯರ್ ಆಗಿದ್ದ ಕಾರಣ, ಈ ರೈಲ್ವೆ ದುರಂತದ ಕಾರಣವನ್ನು ಪತ್ತೆ ಹಚ್ಚುವುದು ಅವರಿಗೆ ಸುಲಭವಾಯಿತು. ರೈಲ್ವೆಯ ಯೋಜನೆಗಳಾಗಿರಲಿ ಅದರ ಅನುಷ್ಠಾನವಿರಲಿ ಎಂಜಿನಿಯರ್ ಆಗಿದ್ದರಿಂದ ಅದರ ಆಗುಹೋಗುಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಲ್ಲರು, ಹಾಗೆಯೇ ವಂದೇ ಭಾರತ್ ಎಕ್ಸ್‌ಪ್ರೆಸ್ ಯೋಜನೆಯಲ್ಲೂ ಅವರು ಪ್ರಮುಖ ಪಾತ್ರವಹಿಸಿದ್ದಾರೆ, ಈ ಯೋಜನೆಯು ಅಂತಾರಾಷ್ಟ್ರೀಯ ರೈಲ್ವೆ ಯೋಜನೆಗಳಲ್ಲೇ ಮಾದರಿ ಯೋಜನೆ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.
ಮತ್ತಷ್ಟು ಓದಿ: Odisha Train Accident: ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ಘೋಷಿಸಿದ ಒಡಿಶಾ ಸರ್ಕಾರ
ಆದರೆ ಅಶ್ವಿನಿ ವೈಷ್ಣವ್ ಅವರು ಕಳೆದ ಎರಡು ದಿನಗಳಿಂದ ನಿರಂತರವಾಗಿ ಘಟನಾ ಸ್ಥಳದಲ್ಲಿ ನಡೆಸುತ್ತಿರುವ ಕಾರ್ಯಾಚರಣೆಯನ್ನು ನೋಡಿ ಸಾಕಷ್ಟು ಮಂದಿ ಅವರ ಕಾರ್ಯವನ್ನು ಶ್ಲಾಘಿಸುತ್ತಿದ್ದಾರೆ. ಘಟನೆ ನಡೆದ ಕೇವಲ 2 ಗಂಟೆಗಳಲ್ಲಿ ಅಶ್ವಿನಿ ವೈಷ್ಣವ್ ಅವರು ಸ್ಥಳಕ್ಕೆ ಭೇಟಿ ನೀಡಿ ಸಂಪೂರ್ಣ ರಕ್ಷಣಾ ಕಾರ್ಯಾಚರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಅದಾದ ಬಳಿಕ ಹಗಲೂ ಇರುಳು ಘಟನಾ ಸ್ಥಳದಲ್ಲಿಯೇ ಉಳಿದು, ಮೊದಲು ರಕ್ಷಣಾ ಕಾರ್ಯಾಚರಣೆ ನಂತರ ಗಾಯಾಳುಗಳಿಗೆ ಚಿಕಿತ್ಸೆ, ಸುರಕ್ಷಿತವಾಗಿರುವವರಿಗೆ ಅವರವರ ಊರುಗಳಿಗೆ ತಲುಪಿಸುವ ಕಾರ್ಯ ಹಾಗೆಯೇ ಇತರೆ ಕೆಲಸಗಳನ್ನು ಅಚ್ಚುಕಟ್ಟಾಗಿ ಅಶ್ವಿನಿ ವೈಷ್ಣವ್ ನಿರ್ವಹಿಸುತ್ತಿದ್ದಾರೆ.
ಹಾಗೆಯೇ ಕೇವಲ 72 ಗಂಟೆಗಳಲ್ಲಿ ಎಲ್ಲಾ ಬೋಗಿಗಳನ್ನು ಅಲ್ಲಿಂದ ಸ್ಥಳಾಂತರ ಮಾಡಿ ಹೊಸ ರೈಲ್ವೆ ಹಳಿಗಳನ್ನು ನಿರ್ಮಿಸಿ, ರೈಲುಗಳ ಸುಗಮ ಪ್ರಯಾಣಕ್ಕೂ ಅಶ್ವಿನಿ ವೈಷ್ಣವ್ ಖುದ್ದು ನಿಂತು ಕೆಲಸ ಮಾಡಿಸುತ್ತಿದ್ದಾರೆ. ಹಾಗೆಯೇ ಪ್ರಧಾನಿ ನರೇಂದ್ರ ಮೋದಿಯವರ ಸೂಚನೆ ಮೇರೆಗೆ ಸಂಪೂರ್ಣ ತನಿಖೆ ಹಾಗೂ ತಪ್ಪಿತಸ್ಥರ ವಿರುದ್ಧದ ಕ್ರಮಕ್ಕೆ ಹಠ ಬಿದ್ದು ಅಶ್ವಿನಿ ವೈಷ್ಣವ್ ಕೆಲಸ ಮಾಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಮತ್ತಷ್ಟು ಓದಿ: Odisha Train Accident: ರೈಲು ಅಪಘಾತ ಸಂಭವಿಸಿದ ಸ್ಥಳದಲ್ಲಿ ದುರಸ್ತಿ ಕಾರ್ಯ ಶುರು, ರೈಲ್ವೆ ಸಚಿವರಿಂದ ಮೇಲ್ವಿಚಾರಣೆ
ಅಶ್ವಿನಿ ವೈಷ್ಣವ್ ಏಕಾಏಕಿ ರೈಲ್ವೆ ಸಚಿವರಾಗಿದ್ದಲ್ಲ
ಅಶ್ವಿನಿ ವೈಷ್ಣವ್ ಏಕಾಏಕಿ ರೈಲ್ವೆ ಸಚಿವರಾದಂತಹ ವ್ಯಕ್ತಿಯಲ್ಲಿ ಈ ಹಿಂದೆಯೂ ಕೇಂದ್ರ ಸರ್ಕಾರದ ಸಾಕಷ್ಟು ಉನ್ನತ ಹುದ್ದೆಗಳಲ್ಲಿ ಐಎಎಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ಕೆಲಸ ಮಾಡಿರುವ ಅಶ್ವಿನಿ ವೈಷ್ಣವ್, ವಾಜಪೇಯಿ ಅವರು ಅಧಿಕಾರದಿಂದ ಕೆಳಗಿಳಿದ ಬಳಿಕ ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದರು. ಇವರು ನಂತರ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿದ್ದರು. ಆದರೆ ಉನ್ನತ ಶಿಕ್ಷಣ ಮುಗಿಸಿ ವಾಪಸಾದ ಬಳಿಕ ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಿದ್ದರು, ಬಳಿಕ ಐಎಎಸ್ ನ್ನು ತೊರೆದು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದರು, ರೈಲ್ವೆ ಸಚಿವರಾಗುವುದಕ್ಕೂ ಮೊದಲು ಪ್ರಮುಖ ರೈಲ್ವೆ ಸುರಕ್ಷತಾ ಕಂಪನಿಗಳು ಹಾಗೂ ಕೋಚಿಂಗ್ ಕಂಪನಿಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿದ್ದರು.
ಮತ್ತಷ್ಟು ಓದಿ: Odisha Train Accident: ಎಲ್ಲಿದ್ದೀಯೋ ಕಂದ, ಕಣ್ಣಂಚಲ್ಲಿ ನೀರು, ಶವಗಳ ರಾಶಿಯ ನಡುವೆ ಮುಸುಕು ತೆಗೆದು ಮಗನಿಗಾಗಿ ತಂದೆಯ ಹುಡುಕಾಟ
ಅಶ್ವಿನಿ ವೈಷ್ಣವ್ ಅವರು ರಾಜಸ್ಥಾನದ ಪಾಲಿ ಜಿಲ್ಲೆಯ ಜೀವಂದ್ ಕಲ್ಲನ್ ನಿವಾಸಿ, ಬಳಿಕ ಜೋಧ್ಪುರದಲ್ಲಿ ನೆಲೆಸಿದರು. ರೈಲ್ವೆ ಇಲಾಖೆ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದಂತೆ ಅವರ ನೈಪುಣ್ಯತೆಯನ್ನು ಆಧರಿಸಿಯೇ ಪ್ರಧಾನಿ ನರೇಂದ್ರ ಮೋದಿಯವರು ರೈಲ್ವೆ ಇಲಾಖೆಯಂತಹ ಮಹತ್ವದ ಜವಾಬ್ದಾರಿಯನ್ನು ನೀಡಿದ್ದರು. ಇದರ ಜತೆಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯನ್ನೂ ನಿಭಾಯಿಸುತ್ತಿದ್ದಾರೆ.
ಈ ಪ್ರತಿಪಕ್ಷಗಳು ಅಶ್ವಿನಿ ವೈಷ್ಣವ್ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದರೂ ಕೂಡ ಅಶ್ವಿನಿ ವೈಷ್ಣವ್ ತುಂಬಾ ನಾಜೂಕಾಗಿ ಉತ್ತರಿಸುತ್ತಿದ್ದಾರೆ, ತಮ್ಮ ರಾಜೀನಾಮೆ ಕುರಿತಂತೆ ಪ್ರತಿಪಕ್ಷಗಳ ಆರೋಪಗಳಿಗೆ ಸಂಬಂಧಿಸಿ ಆ ಬಗ್ಗೆ ಚಿಂತನೆ ನಡೆಸಲು ಸಿದ್ಧನಿದ್ದೇನೆ ಆದರೆ ಈಗ ಮೊದಲು ರಕ್ಷಣಾ ಕಾರ್ಯಾಚರಣೆ ಹಾಗೂ ಸ್ಪಷ್ಟನೆ ತೆಗೆದುಕೊಳ್ಳುವುದು ಅನಿವಾರ್ಯ ಹೇಳಿ ನಿರ್ದಿಷ್ಟ ಗುರಿಯನ್ನು ಸಾರ್ವಜನಿಕರಿಗೆ ತಿಳಿಸಿದ್ದಾರೆ.
ದುರಸ್ತಿ ಕಾರ್ಯ
ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗಾ ಬಜಾರ್ ನಿಲ್ದಾಣದಲ್ಲಿ ಸಂಭವಿಸಿದ ರೈಲು ಅಪಘಾತದ ಬಳಿಕ, ಈಗ ಹೌರಾ-ಚೆನ್ನೈ ರೈಲು ಮಾರ್ಗವನ್ನು ಸರಿಪಡಿಸುವ ಕೆಲಸವನ್ನು ಮಾಡಲಾಗುತ್ತಿದೆ. ಶನಿವಾರ ಮಧ್ಯಾಹ್ನದ ವೇಳೆಗೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಮುಗಿದಿದೆ. ಬಳಿಕ ಅಪಘಾತದ ಕೋಚ್‌ಗಳನ್ನು ತೆಗೆದುಹಾಕಲಾಗಿದ್ದು, ಈಗ ಟ್ರ್ಯಾಕ್‌ಗಳನ್ನು ಹಾಕುವ ಮತ್ತು ವಿದ್ಯುತ್ ಕಂಬಗಳು ಮತ್ತು ತಂತಿಗಳನ್ನು ಅಳವಡಿಸುವ ಕೆಲಸ ನಡೆಯುತ್ತಿದೆ. 1000ಕ್ಕೂ ಹೆಚ್ಚು ರೈಲ್ವೆ ನೌಕರರು ಈ ಕಾರ್ಯದಲ್ಲಿ ತೊಡಗಿದ್ದಾರೆ, ದುರಸ್ತಿ ಕಾರ್ಯಕ್ಕಾಗಿ 7ಕ್ಕೂ ಹೆಚ್ಚು ಪೊಕ್ಲೆನ್ ಯಂತ್ರಗಳು, ಕ್ರೇನ್ ಇತ್ಯಾದಿಗಳನ್ನು ಅಳವಡಿಸಲಾಗಿದೆ.
ಘಟನೆ ಏನು?
ಬಾಲಸೋರ್‌ನ ಬಹನಾಗಾ ಬಜಾರ್ ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ. ಈ ರೈಲಿನ ಕೆಲವು ಬೋಗಿಗಳು ಹಾದುಹೋಗುತ್ತಿದ್ದ ಯಶವಂತಪುರ-ಹೌರಾ ಎಕ್ಸ್‌ಪ್ರೆಸ್‌ನ ಹಿಂಭಾಗಕ್ಕೂ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ 288 ಜನರು ಸಾವನ್ನಪ್ಪಿದ್ದಾರೆ. 900 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಗೊಂಡ ಸುಮಾರು 56 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:11 pm, Sun, 4 June 23