Train Accident: ರೈಲುದುರಂತ: ರಜೆಯಲ್ಲಿದ್ದ ಯೋಧನ ಸಮಯಪ್ರಜ್ಞೆ; ರಕ್ಷಣಾ ಕಾರ್ಯಾಚರಣೆ ತ್ವರಿತಗೊಳ್ಳಲು ಕಾರಣ

How NDRF Jawan Helped Rescue Operations: ರಜೆಯಲ್ಲಿದ್ದರೂ ಒಬ್ಬ ಯೋಧ ಯಾವತ್ತೂ ದೇಶರಕ್ಷಣೆ, ಜನರಕ್ಷಣೆಯ ಹೊಣೆ ಹೊತ್ತೇ ಇರುತ್ತಾನೆ ಎನ್ನುವುದಕ್ಕೆ ಸಾಕ್ಷಿ ಎನ್​ಡಿಆರ್​ಎಫ್ ಯೋಧ ವೆಂಕಟೇಶ್ ಎನ್.ಕೆ. ರಜೆಯಲ್ಲಿದ್ದರೂ ಈ ಯೋಧ ತನ್ನ ಜವಾಬ್ದಾರಿ ಅರಿತು ಸಮಯಪ್ರಜ್ಞೆ ತೋರಿ ದುರಂತ ಘಟನೆಯ ಬಗ್ಗೆ ಅಲರ್ಟ್ ಹೊರಡಿಸಿದ ಮೊದಲಿಗರಾಗಿದ್ದರು.

Train Accident: ರೈಲುದುರಂತ: ರಜೆಯಲ್ಲಿದ್ದ ಯೋಧನ ಸಮಯಪ್ರಜ್ಞೆ; ರಕ್ಷಣಾ ಕಾರ್ಯಾಚರಣೆ ತ್ವರಿತಗೊಳ್ಳಲು ಕಾರಣ
ರೈಲುದುರಂತ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 04, 2023 | 12:53 PM

ಬಾಲಾಸೋರ್: ಒಡಿಶಾದ ಬಾಲಾಸೋರ್​ನಲ್ಲಿ (Balasore) ಜೂನ್ 2, ಶುಕ್ರವಾರ ರಾತ್ರಿ ಸಂಭವಿಸಿದ ಸರಣಿ ರೈಲು ಅಪಘಾತದಲ್ಲಿ 290ಕ್ಕೂ ಹೆಚ್ಚು ಮಂದಿ ಮೃತಪಟ್ಟು ನೂರಾರು ಮಂದಿ ಗಾಯಗೊಂಡಿರುವ ದುರ್ಘಟನೆ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ರಕ್ಷಣಾ ತಂಡಗಳು ಬಹಳ ಕ್ಷಿಪ್ರವಾಗಿ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿ ನೂರಾರು ಮಂದಿಯ ಜೀವ ಉಳಿಸಲು ಯಶಸ್ವಿಯಾಗಿವೆ. ಈ ರಕ್ಷಣಾ ಕಾರ್ಯಾಚರಣೆ ತಂಡಗಳು ಸ್ಥಳಕ್ಕೆ ಬೇಗ ತಲುಪಲು ಕಾರಣವಾಗಿದ್ದು ಒಬ್ಬ ಯೋಧ. ರಜೆಯಲ್ಲಿದ್ದರೂ ಒಬ್ಬ ಯೋಧ ಯಾವತ್ತೂ ದೇಶರಕ್ಷಣೆ, ಜನರಕ್ಷಣೆಯ ಹೊಣೆ ಹೊತ್ತೇ ಇರುತ್ತಾನೆ ಎನ್ನುವುದಕ್ಕೆ ಸಾಕ್ಷಿ ಎನ್​ಡಿಆರ್​ಎಫ್ ಯೋಧ ವೆಂಟೇಶ್ ಎನ್.ಕೆ. ರಜೆಯಲ್ಲಿದ್ದರೂ ಈ ಯೋಧ ತನ್ನ ಜವಾಬ್ದಾರಿ ಅರಿತು ಸಮಯಪ್ರಜ್ಞೆ ತೋರಿ ದುರಂತ ಘಟನೆಯ ಬಗ್ಗೆ ಅಲರ್ಟ್ ಹೊರಡಿಸಿದ ಮೊದಲಿಗರಾಗಿದ್ದರು. ಇವರು ಕಳುಹಿಸಿದ ಲೈವ್ ಲೊಕೇಶನ್ ಆಧಾರದ ಮೇಲೆ ರಕ್ಷಣಾ ತಂಡಗಳು ಬೇಗನೇ ಸ್ಥಳಕ್ಕೆ ತಲುಪಲು ಸಾಧ್ಯವಾಯಿತು.

39 ವರ್ಷದ ವೆಂಕಟೇಶ್ ಎನ್.ಕೆ. ಅವರು ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ಎನ್​ಡಿಆರ್​ಎಫ್​ನ 2ನೇ ಬಟಾಲಿಯನ್​ನಲ್ಲಿ ಪೋಸ್ಟ್ ಆಗಿದ್ದರು. ರಜೆಯಲ್ಲಿ ಅವರು ಪಶ್ಚಿಮ ಬಂಗಾಳದ ಹೌರಾದಿಂದ ಚೆನ್ನೈಗೆ ಹೋಗುತ್ತಿದ್ದರು. ಸರಣಿ ರೈಲು ಅಪಘಾತಕ್ಕೆ ಕಾರಣವಾದ ಕೋರಮಂಡಲ್ ಎಕ್ಸ್​ಪ್ರೆಸ್ ರೈಲಿನಲ್ಲಿ 3ನೇ ಎಸಿ ಕೋಚ್​ನಲ್ಲಿ ವೆಂಕಟೇಶ್ ಪ್ರಯಾಣಿಸುತ್ತಿದ್ದರು. ಒಡಿಶಾದ ಬಾಲಸೋರ್​ನಲ್ಲಿ ಇವರಿದ್ದ ರೈಲಿನ 12 ಕೋಚ್​ಗಳು ಹಳಿ ತಪ್ಪಿದ್ದವು. ಅದರಲ್ಲಿ ಇವರ ಕೋಚ್ ಕೂಡ ಇತ್ತು. ಆದರೆ, ಅದೃಷ್ಟಕ್ಕೆ ಇವರಿದ್ದ ಬೋಗಿಯು ಮುಂದಿನ ಕೋಚ್​ಗಳಿಗೆ ಡಿಕ್ಕಿ ಹೊಡೆಯಲಿಲ್ಲ. ಹೀಗಾಗಿ, ವೆಂಕಟೇಶ್ ಹಾಗು ಅವರ ಬೋಗಿಯಲ್ಲಿದ್ದವರಿಗೆ ಹೆಚ್ಚು ಗಾಯವಾಗಲಿಲ್ಲ.

ಇದನ್ನೂ ಓದಿOdisha Train Accident: ರೈಲು ಅಪಘಾತಕ್ಕೆ ಮೂಲ ಕಾರಣ ಹಾಗೂ ಕಾರಣಕರ್ತರನ್ನು ಪತ್ತೆಹಚ್ಚಲಾಗಿದೆ: ಅಶ್ವಿನಿ ವೈಷ್ಣವ್

ಜೀವ ಉಳಿದಿತಲ್ಲ ಎಂದು ವೆಂಕಟೇಶ್ ಸುಮ್ಮನಾಗಬಹುದಿತ್ತು. ಆದರೆ, ಯೋಧನಾಗಿ, ಅದರಲ್ಲೂ ಇಂಥ ದುರಂತಗಳಲ್ಲಿ ರಕ್ಷಣೆಗೆ ಸದಾ ಮುಂದಾಗುವ ಎನ್​ಡಿಆರ್​ಎಫ್ ಪಡೆಯ ಸಿಬ್ಬಂದಿಯವರಾಗಿ ವೆಂಕಟೇಶ್ ಕೂಡಲೇ ದುರಂತದ ಬಗ್ಗೆ ತಮ್ಮ ಹಿರಿಯ ಇನ್ಸ್​ಪೆಕ್ಟರ್​ಗೆ ಮೊದಲು ಕರೆ ಮಾಡಿದರು. ಬಳಿಕ ದುರಂತಸ್ಥಳದ ಫೋಟೋ, ವಿಡಿಯೋ ಹಾಗೂ ಸ್ಥಳದ ಲೈವ್ ಲೊಕೇಶನ್ ಅನ್ನು ಎನ್​ಡಿಆರ್​ಎಫ್​ನ ಕಂಟ್ರೋಲ್ ರೂಮ್​ನ ವಾಟ್ಸಾಪ್ ನಂಬರ್​ಗೆ ಕಳುಹಿಸಿದರು. ಇದರ ಆಧಾರದ ಮೇಲೆ ರಕ್ಷಣಾ ತಂಡಗಳು ಬಹಳ ಬೇಗ ಸ್ಥಳಕ್ಕೆ ಆಗಮಿಸಲು ಸಾಧ್ಯವಾಯಿತು. ರಕ್ಷಣಾ ತಂಡ ಬರುವವರೆಗೂ ಕಾಯದೇ ವೆಂಕಟೇಶ್ ಕೂಡಲೇ ತಾವೇ ಗಾಯಾಳುಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಶುಕ್ರವಾರ ಬಾಲಾಸೋರ್​ನಲ್ಲಿ ಸಂಭವಿಸದ ಈ ಸರಣಿ ರೈಲು ಅಪಘಾತದಲ್ಲಿ ಕೋರಮಂಡಲ್ ಎಕ್ಸ್​ಪ್ರೆಸ್, ಗೂಡ್ಸ್ ರೈಲು ಹಾಗೂ ಯಶವಂತಪುರ್ ಹೌರಾ ಎಕ್ಸ್​ಪ್ರೆಸ್ ರೈಲುಗಳು ಅಪಘಾತಗೊಂಡಿವೆ. ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಬದಲಾಗಿದ್ದು ಈ ದುರಂತಕ್ಕೆ ಮೂಲ ಕಾರಣ ಎಂದು ರೈಲ್ವೆ ಇಲಾಖೆ ಸದ್ಯಕ್ಕೆ ಗುರುತಿಸಿದೆ. ಮೊದಲಿಗೆ ಗೂಡ್ಸ್ ರೈಲಿಗೆ ಕೋರಮಂಡಲ್ ಎಕ್ಸ್​ಪ್ರೆಸ್ ಡಿಕ್ಕಿಯಾಗಿ 12 ಬೋಗಿಗಳು ಹಳಿ ತಪ್ಪಿ ಪಕ್ಕದ ಹಳಿಗೆ ಹೋಗಿವೆ. ಆ ಟ್ರ್ಯಾಕ್​ನಲ್ಲಿ ಬರುತ್ತಿದ್ದ ಯಶವಂತರ ರೈಲು ಈ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ.

ಇದೇ ವೆಳೆ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ರೈಲು ದರುಂತದಲ್ಲಿ ಮಡಿದವರ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡವರಿಗೆ 1 ಲಕ್ಷ ರೂ ನೀಡುವುದಾಗಿ ಹೇಳಿದ್ದಾರೆ. ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಕೂಡ ದುರಂತದಲ್ಲಿ ಮಡಿದವರ ಕುಟುಂಬಗಳಿಗೆ 5 ಲಕ್ಷ ರೂ ಪರಿಹಾರ ಪ್ರಕಟಿಸಿದ್ದಾರೆ.s

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:36 pm, Sun, 4 June 23