ನವದೆಹಲಿ: ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ಸರಣಿ ರೈಲು ಅಪಘಾತದಲ್ಲಿ (Odisha Train Accident) ಸುಮಾರು 300 ಮಂದಿ ಸಾವನ್ನಪ್ಪಿದ್ದಾರೆ. ಬಹನಾಗ ಬಜಾರ್ ಬಳಿಯ ಘಟನಾ ಸ್ಥಳದಲ್ಲಿ ಬೋಗಿಗಳನ್ನು ಬಹುತೇಕ ತೆರವುಗೊಳಿಸಲಾಗಿದ್ದು, ಹಳಿಗಳನ್ನು ಪರಿಶೀಲಿಸಿ ಸರಿಪಡಿಸಲಾಗುತ್ತಿದೆ. ಬುಲ್ಡೋಜರ್, ಕ್ರೇನ್ಗಳನ್ನು ಆಪರೇಟ್ ಮಾಡುವ ಜನರ ತಂಡದೊಂದಿಗೆ ಸೇರಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಬೋಗಿಗಳು, ಇತರ ಅವಶೇಷಗಳನ್ನು ತೆರವುಗೊಳಿಸಲಾಗಿದೆ. ಇಲ್ಲಿಯ ಪ್ರಧಾನ ಟ್ರಂಕ್ ಲೈನ್ ಅನ್ನು ರೆಸ್ಟೋರ್ ಮಾಡಲಾಗಿರುವುದು ವರದಿಯಾಗಿದೆ. ಬಹಂಗ ಬಜಾರ್ನಲ್ಲಿ ಹಾಳಾದ ಹಳಿಗಳನ್ನು ದುರಸ್ತಿ ಮಾಡಲಾಗುತ್ತಿದೆ. ಮೇಲೆ ಹಾದು ಹೋಗುವ ಎಲೆಕ್ಟ್ರಿಕ್ ಕೇಬಲ್ಗಳನ್ನೂ ಮರುಸ್ಥಾಪಿಸಲಾಗುತ್ತಿದೆ.
ಬಹಂಗಾ ರೈಲು ನಿಲ್ದಾಣದ ಬಳಿ ಎಲ್ಲಾ ಟ್ರ್ಯಾಕ್ಗಳನ್ನು ಬಹಳ ಶೀಘ್ರದಲ್ಲಿ ಓಡಾಟಕ್ಕೆ ಅನುವು ಮಾಡಿಕೊಡುವತ್ತ ಪ್ರಯತ್ನಿಸಲಾಗುತ್ತಿದೆ. ಭಾನುವಾರ ರಾತ್ರಿ 8ರ ಹೊತ್ತಿಗೆ ಕನಿಷ್ಠ ಎರಡು ರೈಲ್ವೆ ಲೈನ್ಗಳಾದರೂ ಬಳಕೆಗೆ ಸಿಗಲಿದೆ ಎಂದು ರೈಲ್ವೆ ಬೋರ್ಡ್ ಹೇಳಿದೆ. ಟ್ರ್ಯಾಕ್ಗಳಲ್ಲಿ ರೈಲು ಓಡಾಟದ ಪ್ರಯೋಗ ಮಾಡಲಾಗಿರುವ ವಿಡಿಯೋವೊಂದನ್ನು ಎಎನ್ಐ ಸುದ್ದಿ ಸಂಸ್ಥೆ ಹಂಚಿಕೊಂಡಿದೆ.
#WATCH | Railway track trial underway at the site of Balasore train accident as restoration work is underway
As per Railway Board, at least two railway lines are expected to be operational by 8pm today.#Odisha pic.twitter.com/lNsc0Yt9YU
— ANI (@ANI) June 4, 2023
ಈ ಮಾರ್ಗ ಬಹಳ ಮುಖ್ಯವಾಗಿದ್ದು, ದಕ್ಷಿಣ ಭಾರತ ಮತ್ತು ಈಶಾನ್ಯಕ್ಕೆ ಇದು ಸಂಪರ್ಕ ಕಲ್ಪಿಸುತ್ತದೆ. ಆದಷ್ಟೂ ಬೇಗ ಈ ಮಾರ್ಗದ ಪುನಶ್ಚೇತನ ಆಗುವುದು ಮುಖ್ಯ. ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಈ ಕುರಿತು ಮಾತನಾಡಿ, ಜೂನ್ 6, ಮಂಗಳವಾರದೊಳಗೆ ಈ ಮಾರ್ಗವನ್ನು ಸಂಪೂರ್ಣವಾಗಿ ಬಳಕೆಗೆ ಸಿದ್ಧಪಡಿಸಲಾಗುವುದು ಎಂದಿದ್ದಾರೆ. ಎರಡು ಲೈನ್ಗಳನ್ನಾದರೂ ನಾವು ಆದಷ್ಟೂ ಬೇಗ ಸರಿಪಡಿಸುತ್ತೇವೆ ಎಂದು ರೈಲ್ವೆ ಅಧಿಕಾರಿಯೊಬ್ಬರೂ ಪುನರುಚ್ಚರಿಸಿದ್ದಾರೆ.
ಇದನ್ನೂ ಓದಿ: Electronic Interlocking: ರೈಲುದುರಂತಕ್ಕೆ ಕಾರಣವಾದ ಎಲೆಕ್ಟ್ರಾನಿಕ್ ಇಂಟರ್ಲಾಕಿಂಗ್ ಎಂದರೇನು? ಇದು ಹೇಗೆ ಕೆಲಸ ಮಾಡುತ್ತದೆ?
ಜೂನ್ 4ರಂದು ಸಂಭವಿಸಿದ ದುರ್ಘಟನೆಯಲ್ಲಿ ಮೂರು ರೈಲುಗಳು ಅಪಘಾತಗೊಂಡಿದ್ದವು. ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಾಗ ರೈಲು ನಿಲ್ದಾಣದ ಸಮೀಪ ಟ್ರ್ಯಾಕ್ ಬದಲಿಸಿದ ಕೋರಮಂಡಲ್ ಎಕ್ಸ್ಪ್ರೆಸ್, ನಿಂತಿದ್ದ ಗೂಡ್ಸ್ ಗಾಡಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ 12 ಬೋಗಿಗಳು ಪಕ್ಕದ ಟ್ರ್ಯಾಕ್ಗೆ ಉರುಳಿವೆ. ಅತ್ತ ಯಶವಂತಪುರದಿಂದ ಹೌರಾಗೆ ಹೋಗುತ್ತಿದ್ದ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲು ಈ ಬೋಗಿಗಳಿಗೆ ಅಪ್ಪಳಿಸಿದೆ. ಅದರ 9 ಕೋಚ್ಗಳು ಹಳಿ ತಪ್ಪಿವೆ. ಒಟ್ಟು 21 ಬೋಗಿಗಳು ಹಾನಿಯಾಗಿದ್ದು, 290ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಗಾಯಾಳುಗಳ ಸಂಖ್ಯೆ 1,000 ದಾಟಿದೆ. ಹಲವರು ಗಂಭೀರವಾಗಿ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಇದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ