ದೆಹಲಿ: ದೇಶದಲ್ಲಿ ಕೊರೊನಾ 3ನೇ ಅಲೆ ಭೀತಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ (ಡಿ.23) ಮಹತ್ವದ ಸಭೆ ನಡೆಸಿದರು. ಪರಿಣಾಮಕಾರಿ ಕಾಂಟ್ಯಾಕ್ಟ್ ಟ್ರೇಸಿಂಗ್ಗೆ ಒತ್ತು ನೀಡಬೇಕು, ಕೊವಿಡ್-19 ಟೆಸ್ಟ್ ಹೆಚ್ಚಿಸಬೇಕು ಎಂದು ಸೂಚಿಸಿದರು. ಕೊರೊನಾ ಲಸಿಕಾಕರಣದ ವೇಗ ಹೆಚ್ಚಿಸಲು ಗಮನ ನೀಡಬೇಕು ಎಂದು ಪ್ರಧಾನಿ ಸೂಚಿಸಿದರು. ಆರೋಗ್ಯ ಮತ್ತು ಮೂಲಸೌಕರ್ಯ ಸುಧಾರಣೆಗೆ ಗಮನ ಕೊಡಿ ಎಂದು ಹೇಳಿದರು. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ರಾಜ್ಯಗಳಿಗೆ ಕೇಂದ್ರದಿಂದ ತಂಡ ಕಳಿಸಿಕೊಡಲಾಗುವುದು. ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯ ಸಮಸ್ಯೆ ಇರುವ ರಾಜ್ಯಗಳಿಗೆ ಅಗತ್ಯ ನೆರವು ಒದಗಿಸಲಾಗುವುದು. ಬದಲಾಗ್ತಿರುವ ಪರಿಸ್ಥಿತಿಗೆ ಅನುಗುಣವಾಗಿ ಕೇಂದ್ರ ಸರ್ಕಾರ ಸಕ್ರಿಯವಾಗಿ ಕ್ರಮಕೈಗೊಳ್ಳುತ್ತಿದೆ. ಅಗತ್ಯವಿರುವೆಡೆ ಕಂಟೇನ್ಮೆಂಟ್ ಜೋನ್ ರೂಪಿಸಲು ಕ್ರಮಕೈಗೊಳ್ಳಬೇಕು. ಒಮಿಕ್ರಾನ್ ಪ್ರಭೇದದ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆ ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದರು.
ದೇಶದ ಹಲವು ಪ್ರದೇಶಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಾಗರೂಕತೆಯಿಂದ ಇರಬೇಕು ಮತ್ತು ನಿಗಾವಹಿಸುವುದರಲ್ಲಿ ಎಚ್ಚರ ತಪ್ಪಬಾರದು ಎಂದು ಸಲಹೆ ಮಾಡಿದರು. ದೇಶದಲ್ಲಿ ಒಮಿಕ್ರಾನ್ ಸೋಂಕು ಪ್ರಕರಣಗಳ ಒಟ್ಟು ಸಂಖ್ಯೆ 300 ದಾಟಿದ ಹಿನ್ನೆಲೆಯಲ್ಲಿ ಈ ಮಹತ್ವದ ಸಭೆಯನ್ನು ಪ್ರಧಾನಿ ನಡೆಸಿದರು. ಭಾರತದಲ್ಲಿ ಕೊವಿಡ್ ಪಿಡುಗಿನ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ. ಹೀಗಾಗಿ ನಾವೆಲ್ಲರೂ ಎಚ್ಚರಿಕೆಯ ಮಟ್ಟವನ್ನು ತಗ್ಗಿಸಬಾರದು ಎಂದರು.
ಹೊಸ ರೂಪಾಂತರಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ನಾವು ಜಾಗರೂಕರಾಗಿ ಮತ್ತು ಎಚ್ಚರಿಕೆಯಿಂದ ಇರಬೇಕು. ಕೊವಿಡ್ ನಿಯಂತ್ರಣಕ್ಕೆ ಸಂಬಂಧಿಸಿದ ಶಿಷ್ಟಾಚಾರಗಳನ್ನು ಎಲ್ಲರೂ ಪಾಲಿಸಬೇಕು. ಇದು ಇಂದಿಗೂ ಅತ್ಯಂತ ಪ್ರಸ್ತುತವಾಗಿದೆ ಎಂದು ಮೋದಿ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.
ಕೊರೊನಾ ಆತಂಕ ತಗ್ಗದ ರಾಜ್ಯಗಳೊಂದಿಗೆ ಕೇಂದ್ರ ಸರ್ಕಾರವು ನಿಕಟವರ್ತಿಯಾಗಿ ಕೆಲಸ ಮಾಡಬೇಕಿದೆ. ಭವಿಷ್ಯದ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಗತ್ಯ ಸಲಹೆ ನೀಡಬೇಕಿದೆ. ಜಿಲ್ಲಾ ಮಟ್ಟದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿಕೊಳ್ಳಬೇಕು. ಆಮ್ಲಜನಕ ಘಟಕಗಳು ಮತ್ತು ಪೂರೈಕೆ ವ್ಯವಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎನ್ನುವುದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಖಾತ್ರಿಪಡಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಎಲ್ಲ ಅರ್ಹ ನಾಗರಿಕರಿಗೆ ಕೊವಿಡ್ ಲಸಿಕೆ ಸಿಗುವುದನ್ನು ಸರ್ಕಾರಗಳು ಖಾತ್ರಿಪಡಿಸಿಕೊಳ್ಳಬೇಕು ಎಂದು ಮೋದಿ ಸಲಹೆ ಮಾಡಿದರು. ಕೆಲ ದೇಶಗಳಲ್ಲಿ ಈಗಾಗಲೇ ಬೂಸ್ಟರ್ ಡೋಸ್ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಭಾರತದಲ್ಲಿಯೂ ಬೂಸ್ಟರ್ ಡೋಸ್ ನೀಡಲು ಅನುಮತಿಸಬೇಕು ಎಂಬ ವಿಚಾರದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.
ಇದನ್ನೂ ಓದಿ: ಸ್ವಸಹಾಯ ಗುಂಪುಗಳಿಗೆ ₹1,000 ಕೋಟಿ ವರ್ಗಾವಣೆ; ಹೆಣ್ಣು ಮಕ್ಕಳ ಸಬಲೀಕರಣಕ್ಕಾಗಿ ಸರ್ಕಾರ ಶ್ರಮಿಸುತ್ತಿದೆ: ನರೇಂದ್ರ ಮೋದಿ
ಇದನ್ನೂ ಓದಿ: Uttar Pradesh Election: ಉತ್ತರ ಪ್ರದೇಶ ಚುನಾವಣೆ ಮುಂದೂಡಲು ಪ್ರಧಾನಿ ಮೋದಿ, ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಸಲಹೆ: ಒಮಿಕ್ರಾನ್ ಆತಂಕ ಹಿನ್ನೆಲೆ