ಒಮಿಕ್ರಾನ್ ಡೆಲ್ಟಾಗಿಂತ ಡೇಂಜರ್ ಅಲ್ಲ, ಒಮಿಕ್ರಾನ್ ಮೊದಲು ಪತ್ತೆ ಹಚ್ಚಿದ ದಕ್ಷಿಣ ಆಫ್ರಿಕಾದ ಡಾಕ್ಟರ್ ಆ್ಯಂಜಲಿಕ್ ಹೇಳೋದೇನು?

| Updated By: Digi Tech Desk

Updated on: Dec 03, 2021 | 9:31 AM

ಒಮಿಕ್ರಾನ್ ಸೋಂಕಿನ ಬಗ್ಗೆ ಜಗತ್ತಿಗೆ ಮೊದಲು ಹೇಳಿದ್ದೇ ನಾನು. ನನ್ನ ಬಳಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನಿಗೆ ಒಮಿಕ್ರಾನ್ ಇರೋದನ್ನ ಪತ್ತೆ ಹಚ್ಚಿದ್ದೆ. ನಾನು ಸುಮಾರು 33 ವರ್ಷಗಳಿಂದ ಹಲವು ವೈದ್ಯಕೀಯ ಸವಾಲುಗಳನ್ನ ಕಂಡಿದ್ದೇನೆ.

ಒಮಿಕ್ರಾನ್ ಡೆಲ್ಟಾಗಿಂತ ಡೇಂಜರ್ ಅಲ್ಲ, ಒಮಿಕ್ರಾನ್ ಮೊದಲು ಪತ್ತೆ ಹಚ್ಚಿದ ದಕ್ಷಿಣ ಆಫ್ರಿಕಾದ ಡಾಕ್ಟರ್ ಆ್ಯಂಜಲಿಕ್ ಹೇಳೋದೇನು?
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಒಮಿಕ್ರಾನ್ ಬಗ್ಗೆ ಇಡೀ ಜಗತ್ತೇ ತಲ್ಲಣಗೊಂಡಿದೆ. ಹಲವು ದೇಶಗಳು ವಿದೇಶಗಳಿಂದ ಬರೋ ವಿಮಾನಗಳನ್ನ ರದ್ದು ಮಾಡಿವೆ. ಮಾಸ್ಕ್ ಧರಿಸೋದನ್ನ ಕಡ್ಡಾಯಗೊಳಿಸಿವೆ. ವ್ಯಾಕ್ಸಿನ್ ನೀಡಿಕೆಯನ್ನ ಚುರುಕುಗೊಳಿಸಿವೆ. ಒಮಿಕ್ರಾನ್ನಿಂದ ಮತ್ತಿನ್ನೆಷ್ಟು ಮಾರಣಹೋಮ ನಡೆಯುತ್ತೋ ಅಂತಾ ಕಂಗೆಟ್ಟು ಕೂತಿದ್ದಾರೆ. ಆದ್ರೆ, ಒಮಿಕ್ರಾನ್ ವೈರಸ್ನ್ನ ಮೊದಲು ಪತ್ತೆ ಹಚ್ಚಿದ ದಕ್ಷಿಣ ಆಫ್ರಿಕಾದ ಡಾಕ್ಟರ್ ಆ್ಯಂಜಲಿಕ್ ಹೇಳೋದೇ ಬೇರೆ.

ಒಮಿಕ್ರಾನ್ ಡೆಲ್ಟಾಗಿಂತ ಡೇಂಜರ್ ಅಲ್ಲ
ಒಮಿಕ್ರಾನ್ ಸೋಂಕಿನ ಬಗ್ಗೆ ಜಗತ್ತಿಗೆ ಮೊದಲು ಹೇಳಿದ್ದೇ ನಾನು. ನನ್ನ ಬಳಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನಿಗೆ ಒಮಿಕ್ರಾನ್ ಇರೋದನ್ನ ಪತ್ತೆ ಹಚ್ಚಿದ್ದೆ. ನಾನು ಸುಮಾರು 33 ವರ್ಷಗಳಿಂದ ಹಲವು ವೈದ್ಯಕೀಯ ಸವಾಲುಗಳನ್ನ ಕಂಡಿದ್ದೇನೆ. ಆದರೆ ನನ್ನ ಒಂದೇ ಒಂದು ಹೇಳಿಕೆಗೆ ಇಡೀ ಜಗತ್ತೇ ಇಷ್ಟು ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯಿಸಿದ್ದನ್ನ ನೋಡಿದ್ದು ಇದೇ ಮೊದಲು.

ನನ್ನ ರೋಗಿಯೇ ಒಮಿಕ್ರಾನ್ ಸೋಂಕಿತ ಅಂತಾ ಹೇಳಿದಾಗ. ಇಡೀ ಜಗತ್ತೇ ನನ್ನ ಪಾತ್ರದ ಬಗ್ಗೆ ಮಹತ್ವ ನೀಡಿದೆ. ನನಗೆ ತಿಳಿಯದೆ ಜಗತ್ತಿನ ಗಮನ ಸೆಳೆದಿದ್ದೇನೆ. ಆದರೆ ಒಮಿಕ್ರಾನ್ ಬಗ್ಗೆ ಜಗತ್ತಿನ ಅದರಲ್ಲೂ ಬ್ರಿಟನ್ನ ಪ್ರತಿಕ್ರಿಯೆ ಕಂಡು ನಿಜಕ್ಕೂ ದಿಗ್ಭ್ರಮೆಗೊಂಡಿದ್ದೇನೆ. ಒಮಿಕ್ರಾನ್ ಡೆಲ್ಟಾಗಿಂತ ಡೇಂಜರ್ ಅಲ್ಲ. ಇದೊಂದು ಮೈಲ್ಡ್ ಸಿಂಪ್ಟಮ್ಸ್ ಆಗಿದ್ದು, ಡೆತ್ ರೇಟ್ ಕೂಡ ಹೆಚ್ಚಿಲ್ಲ. ಒಮಿಕ್ರಾನ್ನಿಂದಾಗಿ ಆಸ್ಪತ್ರೆ ಸೇರೋರ ಸಂಖ್ಯೆಯೂ ಕಡಿಮೆ ಇದೆ.

ದಕ್ಷಿಣ ಆಫ್ರಿಕಾದಲ್ಲಿ ಈವರೆಗೂ ಒಮಿಕ್ರಾನ್ನಿಂದ ಬಳಲಿ ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ. ಬ್ರಿಟನ್ ಮತ್ತು ಇತರೆ ಯುರೋಪ್ ರಾಷ್ಟ್ರಗಳು ಸುಖಾಸುಮ್ಮನೆ ಅಂತಾರಾಷ್ಟ್ರೀಯ ವಿಮಾನ ಸಂಚಾರ ರದ್ದು ಪಡಿಸಿವೆ. ಮಾಸ್ಕ್ ಧರಿಸೋದನ್ನ ಕಡ್ಡಾಯಗೊಳಿಸಿ ಕೆಲ ಕಟ್ಟುನಿಟ್ಟಿನ ನಿಯಮಗಳನ್ನ ಜಾರಿಗೊಳಿಸಿವೆ. ಅಸಲಿ ಸತ್ಯ ಏನಂದ್ರೆ, ಒಮಿಕ್ರಾನ್ ವೈರಸ್ ವರ್ತನೆ ಬಗ್ಗೆ ಈಗಲೇ ಅಷ್ಟು ದೊಡ್ಡ ಮಟ್ಟದಲ್ಲಿ ಜಡ್ಜ್ಮೆಂಟ್ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕಠಿಣ ನಿಯಮಗಳು ಮತ್ತು ಲಾಕ್ಡೌನ್ ಹೇರಿಕೆ ಬಗ್ಗೆ ನಿರ್ಧರಿಸಲು, ಒಮಿಕ್ರಾನ್ ವೈರಸ್ನ ವಾಸ್ತವತೆ ಇನ್ನೂ ನಮಗೆ ತಿಳಿದಿಲ್ಲ.

ಈ ಪರಿಸ್ಥಿತಿಯನ್ನ ನಮ್ಮ ಸರ್ಕಾರ ಒಂದು ಸಂಕಷ್ಟ ಎಂದು ಭಾವಿಸದೆ, ಸವಾಲಾಗಿ ಸ್ವೀಕರಿಸಿದೆ. ಕೆಲ ಸಾಕ್ಷಿಗಳ ಆಧಾರದಲ್ಲಿ ಒಮಿಕ್ರಾನ್ ಒಂದು ವೇಗವಾಗಿ ಹರಡುವ ಮತ್ತು ಕಡಿಮೆ ರೋಗ ಲಕ್ಷಣ ಹೊಂದಿರುವ ವೈರಸ್ ಅನ್ನೋದು ಸೋಂಕಿಗೆ ಒಳಗಾದ ಬಹುತೇಕರಿಂದ ಗೊತ್ತಾಗಿದೆ. ಇದು ಹರ್ಡ್ ಇಮ್ಯೂನಿಟಿ ಅಭಿವೃದ್ಧಿಗೆ ಸಹಾಯಕವಾಗಲಿದೆ. ಮುಂದಿನ 2 ವಾರಗಳಲ್ಲಿ ಈ ಬಗ್ಗೆ ಮತ್ತಷ್ಟು ಮಾಹಿತಿ ದೊರೆಯಲಿದೆ. ಒಮಿಕ್ರಾನ್ ವೇಗವಾಗಿ ಹರಡುವ ವಿವಿಧ ರೋಗ ಲಕ್ಷಣ ಹೊಂದಿರುವ ವೈರಸ್ ಆಗಿದ್ರೂ, ಸದ್ಯ ಅಂತಹ ಯಾವುದೇ ಸ್ಥಿತಿ ನಮ್ಮಲ್ಲಿಲ್ಲ.

ನಾನು ಮತ್ತು ನನ್ನ ಸಹೋದ್ಯೋಗಿಗಳು ಸೌತ್ ಆಫ್ರಿಕಾದಲ್ಲಿ ನೋಡಿದಂತೆ ಯುಕೆಯಲ್ಲಿ ಪತ್ತೆಯಾಗಿರುವಂತಹ ಸ್ನಾಯು ಸೆಳೆತ ಲಕ್ಷಣಗಳು ಸೋಂಕಿತರಲ್ಲಿ ಕಂಡುಬಂದಿಲ್ಲ. ನಾನು ಅಧ್ಯಯನ ಮಾಡಿರುವ ಮೊದಲ ಒಮಿಕ್ರಾನ್ ಕೇಸ್ನ ಬಗ್ಗೆಯೇ ಹೇಳೋದಾದ್ರೆ, ಓರ್ವ ಯುವಕನಲ್ಲಿ ಸೋಂಕು ಪತ್ತೆಯಾಗಿತ್ತು. ತಾನು ಸೋಂಕಿಗೆ ತುತ್ತಾಗಿರುವ ಬಗ್ಗೆ ಆತನಿಗೇ ಮಾಹಿತಿ ಇರಲಿಲ್ಲ. ತಾನು ಜಾಸ್ತಿ ಸಮಯ ಬಿಸಿಲಲ್ಲಿ ಕೆಲಸ ಮಾಡಿ ಆರೋಗ್ಯ ಹಾಳಾಗಿದೆ ಅಂದುಕೊಂಡಿದ್ದ. ಆದ್ರೆ ಪರೀಕ್ಷೆ ಬಳಿಕ ಆತ ಒಮಿಕ್ರಾನ್ ಸೋಂಕಿಗೆ ತುತ್ತಾಗಿರೋದು ಬೆಳಕಿಗೆ ಬಂದಿತ್ತು.

ಇಲ್ಲಿ ಒಮಿಕ್ರಾನ್ ಸೋಂಕಿಗೆ ತುತ್ತಾದವರು ಬಹುತೇಕ ಯುವಕರೇ ಆಗಿದ್ದು, ಅದರಲ್ಲೂ ಒಂದು ಡೋಸ್ ವ್ಯಾಕ್ಸಿನ್ ಪಡೆದವರೇ ಹೆಚ್ಚಿದ್ದಾರೆ ಅನ್ನೋದನ್ನ ಅಂಕಿ ಅಂಶಗಳು ಹೇಳ್ತಿವೆ. ಹೀಗಾಗಿ, ನನ್ನ ಪ್ರಕಾರ ಬ್ರಿಟನ್ ವಿನಾ ಕಾರಣ ಈ ವಿಚಾರಕ್ಕೆ ದೊಡ್ಡ ಪ್ರಚಾರ ಕೊಡ್ತಿದೆ ಅನ್ನಿಸುತ್ತಿದೆ.

ಇಷ್ಟಾದರೂ ಈಗಿನ ಚಿತ್ರಣ ಮುಂದೊಂದು ದಿನ ಬದಲಾಗಬಹುದು. ಹಿಂದಿನದ್ದನ್ನು ಗಮನಿಸಿದಾಗ ಲಸಿಕೆ ಪಡೆಯದವರು, ಹೊಸ ತಳಿಗೆ ತುತ್ತಾಗಬಹುದು. ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲಬಹುದು. ಆದ್ರೆ ವಾಸ್ತವದಲ್ಲಿ ನಾವು ಕೊರೊನಾ ಜೊತೆಯೇ ಬದುಕಲು ಕಲಿಯಬೇಕಿದೆ. ಹೀಗಾಗಿ, ಪ್ರತಿಯೊಬ್ಬರೂ ವ್ಯಾಕ್ಸಿನ್ ಪಡೆಯಿರಿ.
ಡಾ. ಆ್ಯಂಜಲಿಕ್ ಕೊಯೆಟ್ಜಿ
ದಕ್ಷಿಣ ಆಫ್ರಿಕಾ ಮೆಡಿಕಲ್ ಅಸೋಸಿಯೇಷನ್

ಒಟ್ನಲ್ಲಿ ಒಮಿಕ್ರಾನ್ ಬಗ್ಗೆ ಇಡೀ ಜಗತ್ತೇ ಬೆಚ್ಚಿ ಬೀಳ್ತಿದ್ರೂ, ಸೋಂಕು ಪತ್ತೆ ಹಚ್ಚಿದ ವೈದ್ಯೆ, ಆ್ಯಂಜಲಿಕ್ ಕೊಯೆಟ್ಜಿ ಮಾತ್ರ ಒಮಿಕ್ರಾನ್ ಸೋಂಕನ್ನ ಅಷ್ಟು ಅಪಾಯಕಾರಿಯಾಗಿ ಪರಿಗಣಿಸೋದು ಬೇಡ ಅನ್ನೋ ಮಾತುಗಳನ್ನ ಹೇಳಿದ್ದಾರೆ. ಆದ್ರೂ, ಸೋಂಕಿನ ಬಗ್ಗೆ ನಾವು ಎಚ್ಚರದಿಂದಿರೋದು ಉತ್ತಮ.

ವರದಿ: ಚಂದ್ರಮೋಹನ್

ಇದನ್ನೂ ಓದಿ: ಕರ್ನಾಟಕದಲ್ಲಿ ಒಮಿಕ್ರಾನ್ ಸೋಂಕು ಪತ್ತೆ: ಗೃಹಕಚೇರಿಯಲ್ಲಿ ತುರ್ತು ಸಭೆ ಕರೆದ ಸಿಎಂ ಬಸವರಾಜ ಬೊಮ್ಮಾಯಿ

Published On - 7:42 am, Fri, 3 December 21