ಮಹಾರಾಷ್ಟ್ರ: ಸಾಮಾಜಿಕ ಮಾಧ್ಯಮದ ಪೋಸ್ಟ್ ವಿಚಾರದ ಘರ್ಷಣೆಯಲ್ಲಿ ವ್ಯಕ್ತಿ ಸಾವು, 8 ಮಂದಿಗೆ ಗಾಯ

|

Updated on: May 14, 2023 | 1:01 PM

ಸ್ಥಳೀಯ ಆಡಳಿತದ ಪ್ರಕಾರ, ಅಕೋಲಾ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯದ ಉಪ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಜನರು ಶಾಂತಿ ಕಾಪಾಡುವಂತೆ ಮನವಿ ಮಾಡಿದರು.

ಮಹಾರಾಷ್ಟ್ರ: ಸಾಮಾಜಿಕ ಮಾಧ್ಯಮದ ಪೋಸ್ಟ್ ವಿಚಾರದ ಘರ್ಷಣೆಯಲ್ಲಿ ವ್ಯಕ್ತಿ ಸಾವು, 8 ಮಂದಿಗೆ ಗಾಯ
ಮಹಾರಾಷ್ಟ್ರ
Follow us on

ಅಕೋಲಾ: ಮಹಾರಾಷ್ಟ್ರದ (Maharashtra) ಅಕೋಲಾ ನಗರದಲ್ಲಿ ಸಾಮಾಜಿಕ ಮಾಧ್ಯಮ (Social media) ಪೋಸ್ಟ್‌ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿದ್ದು, ಇದರಲ್ಲಿ  ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಪೊಲೀಸರು ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಓಲ್ಡ್ ಸಿಟಿಯ ಸೂಕ್ಷ್ಮ ಪ್ರದೇಶದಲ್ಲಿ ಶನಿವಾರ ರಾತ್ರಿ 11.30 ರ ಸುಮಾರಿಗೆ ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 26 ಜನರನ್ನು ಬಂಧಿಸಿದ್ದಾರೆ.

ಜಿಲ್ಲಾ ಮ್ಯಾಜಿಸ್ಟ್ರೇಟ್ ನೀಮಾ ಅರೋರಾ ಅವರು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಗರದ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನರನ್ನು ಕಾನೂನುಬಾಹಿರವಾಗಿ ಗುಂಪುಗೂಡುವುದನ್ನು ನಿಷೇಧಿಸುವ ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 144 ಅನ್ನು ವಿಧಿಸಲು ಆದೇಶಿಸಿದ್ದಾರೆ.

ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಧಾರ್ಮಿಕ ಪೋಸ್ಟ್ ವೈರಲ್ ಆದ ನಂತರ ಹಿಂಸಾಚಾರ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸಂದೀಪ್ ಘುಗೆ ತಿಳಿಸಿದ್ದಾರೆ.

ಎರಡು ಗುಂಪುಗಳ ಸದಸ್ಯರು ಪರಸ್ಪರ ಕಲ್ಲು ತೂರಾಟ ನಡೆಸಿದರು. ಘಟನೆಯಲ್ಲಿ ಕೆಲವು ವಾಹನಗಳಿಗೂ ಹಾನಿಯಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಮೋನಿಕಾ ರಾವುತ್ ತಿಳಿಸಿದ್ದಾರೆ.ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ, ಇತರ ಎಂಟು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಇಬ್ಬರು ಪೊಲೀಸರೂ ಸೇರಿದ್ದಾರೆ. ಗಲಭೆಕೋರರು ಕಲ್ಲು ತೂರಿದಾಗ ಪೊಲೀಸರು ಗಾಯಗೊಂಡಿದ್ದಾರೆ ಎಂದು ಘುಗೆ ಹೇಳಿದರು.

ಗಲಭೆಕೋರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದು, ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ರಾವುತ್ ಹೇಳಿದ್ದಾರೆ.


ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿಕೊಂಡು 26 ಜನರನ್ನು ಬಂಧಿಸಿದ್ದಾರೆ ಎಂದು ಎಸ್ಪಿ ಘುಗೆ ತಿಳಿಸಿದ್ದಾರೆ.

ಸ್ಥಳೀಯ ಆಡಳಿತದ ಪ್ರಕಾರ, ಅಕೋಲಾ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯದ ಉಪ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದು, ಜನರು ಶಾಂತಿ ಕಾಪಾಡುವಂತೆ ಮನವಿ ಮಾಡಿದರು.

ಘಟನೆಯ ನಂತರ ನಗರದಲ್ಲಿ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ಎಎಸ್ಪಿ ರಾವುತ್ ತಿಳಿಸಿದ್ದಾರೆ.ಅಮರಾವತಿಯಿಂದ ರಾಜ್ಯ ಮೀಸಲು ಪೊಲೀಸ್‌ನ ಒಂದು ಸಾವಿರ ಸಿಬ್ಬಂದಿಯನ್ನು ಅಕೋಲಾ ನಗರದಲ್ಲಿ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.
ಯಾವುದೇ ವದಂತಿಗಳನ್ನು ನಂಬಬೇಡಿ ಮತ್ತು ಭಯಪಡಬೇಡಿ ಎಂದು ಪೊಲೀಸರು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ