ದೆಹಲಿ: ‘ಕೇವಲ ಕಲ್ಪನೆಯಲ್ಲಿ ಮಾತ್ರ ದೇಶದಲ್ಲಿ ಪ್ರಜಾಪ್ರಭುತ್ವ ಜಾರಿಯಲ್ಲಿದೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ಮೇಲೆ ಕಿಡಿಕಾರಿದರು.
ಕೇಂದ್ರ ಸರ್ಕಾರದ ನಿರ್ಧಾರಗಳನ್ನು ವಿರೋಧಿಸಿದವರನ್ನು ದೇಶ ವಿರೋಧಿಗಳೆಂದು ಬಿಂಬಿಸಲಾಗುತ್ತಿದೆ. ರೈತರು, ಕಾರ್ಮಿಕರು ಅಥವಾ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೇಂದ್ರ ಸರ್ಕಾರವನ್ನು ಟೀಕಿಸಿದರೂ ಅವರನ್ನು ದೇಶ ವಿರೋಧಿಯ ಪಟ್ಟದಲ್ಲಿ ಕೂರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರೇ, ರೈತರನ್ನ ಎದುರು ಹಾಕಿಕೊಳ್ಳಬೇಡಿ. ಪ್ರತಿಭಟನೆಯನ್ನು ನಿರ್ಲಕ್ಷಿಸಬೇಡಿ, ರೈತ ಸಮುದಾಯ ತಿರುಗಿಬಿದ್ದರೆ ಆರ್ಎಸ್ಎಸ್ ಮತ್ತು ಬಿಜೆಪಿಗೆ ಕುತ್ತು ಬರಲಿದೆ ಎಂದು ರಾಹುಲ್ ಗಾಂಧಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ರಾಜ್ಯಸಭೆಯ ಕಾಂಗ್ರೆಸ್ ನಾಯಕ ಗುಲಾಂ ನಬೀ ಆಜಾದ್ ಅವರ ಜೊತೆ ರಾಹುಲ್ ಗಾಂಧಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಭೇಟಿ ಮಾಡಿದರು. ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಾಂಗ್ರೆಸ್ ಸಂಗ್ರಹಿಸಿದ್ದ 2 ಕೋಟಿ ಸಹಿಗಳನ್ನು ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರಿಗೆ ಸಲ್ಲಿಸಿ, ‘ಚರ್ಚೆ ಮಾಡಲು ಆಸ್ಪದ ನೀಡದಂತೆ ಕೇಂದ್ರ ನೂತನ ಕೃಷಿ ಕಾಯ್ದೆಗಳನ್ನು ಜಾರಿಗೊಳಿಸಿದೆ. ರೈತರನ್ನು ಸಂಕಷ್ಟಕ್ಕೀಡು ಮಾಡಲಿರುವ ಕಾಯ್ದೆಗಳನ್ನು ಮರಳಿ ಪಡೆಯದೇ ರೈತರು ಚಳವಳಿ ನಿಲ್ಲಿಸುವುದಿಲ್ಲ. ಸರ್ಕಾರ ಜಂಟಿ ಸದನ ಕರೆದು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಕೋಟ್ಯಾಂತರ ರೈತರ ಪರವಾಗಿ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದೇವೆ’ ಎಂದು ರಾಹುಲ್ ಗಾಂಧಿ ತಿಳಿಸಿದರು.
ದೆಹಲಿ ಪೊಲೀಸರು ರಾಷ್ಟ್ರಪತಿ ಭವನ ಮತ್ತು ಕಾಂಗ್ರೆಸ್ ಕಚೇರಿಯ ಸುತ್ತ ಭದ್ರತೆಯ ದೃಷ್ಟಿಯಿಂದ 144ನೇ ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಕಾಂಗ್ರೆಸ್ ನಿಯೋಗದಲ್ಲಿದ್ದ ಪ್ರಿಯಾಂಕಾ ಗಾಂಧಿಯನ್ನು ಮಂದಿರ್ ಮಾರ್ಗ್ ಠಾಣೆಯ ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದರು. ಬಂಧನದ ನಾಟಕೀಯ ಪ್ರಹಸನದ ನಂತರ ಪ್ರಿಯಾಂಕಾ ಗಾಂಧಿ ಸಹ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು.
Delhi Chalo ಬೆಂಬಲಿಸಿ ರಾಷ್ಟ್ರಪತಿ ಭೇಟಿಗೆ ತೆರಳಿದ ನಿಯೋಗ; ಪ್ರಿಯಾಂಕಾ ಗಾಂಧಿ ವಶಕ್ಕೆ ಪಡೆದು, ಬಿಡುಗಡೆ