
ನವದೆಹಲಿ, ಮೇ 07: ಭಯೋತ್ಪಾದನೆ ನಿರ್ಮೂಲನೆಗೆ ಪಾಕಿಸ್ತಾನದ ಒಳಗೆ ನುಗ್ಗಿ ಹೊಡೆಯಲು ಸಿದ್ಧ ಎಂಬುದನ್ನು ಭಾರತೀಯ ಸೇನೆ ನಿರೂಪಿಸಿದೆ. ಸೇನಾಧಿಕಾರಿಗಳು ಆಪರೇಷನ್ ಸಿಂಧೂರ್(Operation Sindoor) ಕುರಿತು ಮಾಹಿತಿ ನೀಡಿದ್ದು, ಹಿಂದೂ ಮಹಿಳೆಯರ ಕುಂಕುಮ ಅಳಿಸಿದವರನ್ನು ಪಾಕ್ ಒಳಗೇ ನುಗ್ಗಿ ಹೊಡೆದಿದ್ದೇವೆ, ಇದೇ ಮೊದಲ ಬಾರಿಗೆ ಪಾಕಿಸ್ತಾನದ ಒಳಗೆ ನುಗ್ಗಿ ಲಷ್ಕರ್-ಎ-ತೊಯ್ಬಾ, ಹಿಜ್ಬುಲ್ಲಾದ ಪ್ರಮುಖ ಕಚೇರಿಗಳನ್ನು ಧ್ವಂಸ ಮಾಡಲಾಗಿದೆ ಎಂದು ಕರ್ನಲ್ ಸೋಫಿಯಾ ಖುರೇಷಿ ಮಾಹಿತಿ ನೀಡಿದರು.
ಕರ್ನಲ್ ಸೋಫಿಯಾ ಖುರೇಷಿ ಹಾಗೂ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಜಂಟಿ ಸುದ್ದಿಗೋಷ್ಠಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಲ್ ಸೋಫಿಯಾ ಹಂಚಿಕೊಂಡ ಮಾಹಿತಿ
ಈ ಕಾರ್ಯಚರಣೆ ಬೆಳಗಿನ ಜಾವ 1.05ರಿಂದ 1.30ರವರೆಗೆ ನಡೆಯಿತು. ಪಹಲ್ಗಾಮ್‌ನಲ್ಲಿ ಸಾವನ್ನಪ್ಪಿದ ಪ್ರವಾಸಿಗರಿಗಾಗಿ ಕಾರ್ಯಾಚರಣೆ ನಡೆಸಲಾಯಿತು. ಕಳೆದ 3 ದಶಕಗಳಿಂದ ಪಾಕಿಸ್ತಾನದಲ್ಲಿ ಭಯೋತ್ಪಾದಕರನ್ನು ಸೃಷ್ಟಿಸಲಾಗುತ್ತಿದೆ.
ಪಾಕಿಸ್ತಾನ ಮತ್ತು ಪಿಒಕೆಯಲ್ಲಿ 9 ಗುರಿಗಳನ್ನು ಗುರುತಿಸಲಾಯಿತು ಮತ್ತು ನಾವು ಅವುಗಳನ್ನು ನಾಶಪಡಿಸಿದ್ದೇವೆ. ಲಾಂಚ್‌ಪ್ಯಾಡ್‌ಗಳು ಮತ್ತು ತರಬೇತಿ ಕೇಂದ್ರಗಳನ್ನು ಗುರಿಯಾಗಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ನಾವು ಯಾವುದೇ ನಾಗರಿಕರ ಮೇಲಾಗಲಿ ಅಥವಾ ಪಾಕ್ ಮಿಲಿಟರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ, ಕೇವಲ ಉಗ್ರರ ನೆಲೆಗಳನ್ನು ಮಾತ್ರ ಧ್ವಂಸಗೊಳಿಸಿದ್ದೇವೆ ಎಂದು ಖುರೇಷಿ ಸ್ಪಷ್ಟಪಡಿಸಿದ್ದಾರೆ. ನಾಗರಿಕರಿಗೆ ಹಾನಿ ಮಾಡುವುದು ನಮ್ಮ ಉದ್ದೇಶವಲ್ಲ ಎಂದರು.
ಎಲ್ಲೆಲ್ಲಿ ದಾಳಿ ನಡೆದಿದೆ
ಮತ್ತಷ್ಟು ಓದಿ: ಆಪರೇಷನ್ ಸಿಂಧೂರ್: ಸೇನೆ ಬಳಸಿದ ಅತ್ಯಾಧುನಿಕ ಸ್ಕಾಲ್ಪ್, ಹ್ಯಾಮರ್ ಮಿಸೈಲ್, ಡ್ರೋನ್ ವಿಶೇಷವೇನು?
ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಹೇಳಿದ್ದೇನು?
ಇದು 26/11 ರ ನಂತರದ ಅತಿ ದೊಡ್ಡ ಘಟನೆಯಾಗಿದೆ, ಪಹಲ್ಗಾಮ್ ಒಂದು ಹೇಡಿತನದ ದಾಳಿಯಾಗಿದ್ದು, ಇದರಲ್ಲಿ ಜನರನ್ನು ಅವರ ಕುಟುಂಬಗಳ ಮುಂದೆಯೇ ಕೊಲ್ಲಲಾಯಿತು. ಜಮ್ಮು ಮತ್ತು ಕಾಶ್ಮೀರದ ಉತ್ತಮ ಸ್ಥಿತಿಯ ಮೇಲೆ ಪರಿಣಾಮ ಬೀರಲು ಈ ದಾಳಿಯನ್ನು ನಡೆಸಲಾಗಿದೆ. ಕಳೆದ ವರ್ಷ 2.25 ಕೋಟಿಗೂ ಹೆಚ್ಚು ಪ್ರವಾಸಿಗರು ಕಾಶ್ಮೀರಕ್ಕೆ ಬಂದಿದ್ದರು.
ಪಾಕಿಸ್ತಾನದ ಈ ನೆಲೆಗಳಲ್ಲಿ ಕುಳಿತು ಪಾಕಿಸ್ತಾನವು ಭಾರತದ ಮೇಲೆ ದಾಳಿ ಮಾಡಲು ಯೋಜನೆ ರೂಪಿಸುತ್ತಿತ್ತು ಹೀಗಾಗಿ, ಆ ದಾಳಿ ತಡೆಯಲು ಈ ದಾಳಿಯು ಅನಿವಾರ್ಯವಾಗಿತ್ತು ಎಂದರು.
ಅಭಿವೃದ್ಧಿ ಮತ್ತು ಪ್ರಗತಿಗೆ ಹಾನಿ ಮಾಡುವ ಮೂಲಕ ಹಿಂದುಳಿದಿರುವಿಕೆಯನ್ನು ಕಾಯ್ದುಕೊಳ್ಳುವುದು ಈ ದಾಳಿಯ ಉದ್ದೇಶವಾಗಿದೆ. ಟಿಆರ್‌ಎಫ್ ಎಂದು ಕರೆದುಕೊಳ್ಳುವ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ಇದನ್ನು ವಿಶ್ವಸಂಸ್ಥೆ ನಿಷೇಧಿಸಿದೆ ಮತ್ತು ಲಷ್ಕರ್‌ನೊಂದಿಗೆ ಸಂಬಂಧ ಹೊಂದಿದೆ. ಪಾಕಿಸ್ತಾನ ಮೂಲದ ಗುಂಪುಗಳಿಗೆ ಟಿಆರ್‌ಎಫ್ ಅನ್ನು ರಕ್ಷಣೆಯಾಗಿ ಬಳಸಲಾಗುತ್ತಿತ್ತು. ಲಷ್ಕರ್ ನಂತಹ ಸಂಘಟನೆಗಳು ಟಿಆರ್‌ಎಫ್ ನಂತಹ ಸಂಘಟನೆಗಳನ್ನು ಬಳಸುತ್ತಿವೆ. ಪಹಲ್ಗಾಮ್ ದಾಳಿಯ ತನಿಖೆಯು ಭಯೋತ್ಪಾದಕರಿಗೆ ಪಾಕಿಸ್ತಾನದೊಂದಿಗಿನ ಸಂಪರ್ಕವನ್ನು ಬಹಿರಂಗಪಡಿಸಿದೆ. ಪಾಕಿಸ್ತಾನ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗ ಎಂಬ ಖ್ಯಾತಿಯನ್ನು ಗಳಿಸಿದೆ.
ಭಾರತವು 7 ರಾಜ್ಯಗಳ 11 ವಿಮಾನ ನಿಲ್ದಾಣಗಳಲ್ಲಿ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಶ್ರೀನಗರ, ಜಮ್ಮು, ಶ್ರೀನಗರ, ಲೇಹ್, ಚಂಡೀಗಢ, ಬಿಕಾನೇರ್, ಜೋಧ್‌ಪುರ, ರಾಜ್‌ಕೋಟ್, ಧರ್ಮಶಾಲಾ, ಅಮೃತಸರ, ಭುಜ್ ಮತ್ತು ಜಾಮ್‌ನಗರದಲ್ಲಿ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಈ ವಿಮಾನ ನಿಲ್ದಾಣಗಳು ಪಾಕಿಸ್ತಾನ ಗಡಿಯ ಪಕ್ಕದಲ್ಲಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:32 am, Wed, 7 May 25