ಕೋಲ್ಕತ್ತಾ: ಸೋಮವಾರ ರಾತ್ರಿಯಿಂದ ತೃಣಮೂಲ ಕಾಂಗ್ರೆಸ್ (Trinamool Congress Party) ಪಂಚಾಯತ್ ನಾಯಕ ಸೇರಿದಂತೆ ಕನಿಷ್ಠ ಒಂಬತ್ತು ಜನರನ್ನು ಹತ್ಯೆಗೈದ ಬಿರ್ಭೂಮ್ ಹತ್ಯಾಕಾಂಡದ (Birbhum massacre) ಹಿಂದೆ ವಿರೋಧ ಪಕ್ಷಗಳ ಕೈವಾಡವಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಬುಧವಾರ ಆರೋಪಿಸಿದ್ದಾರೆ. ನಾವು ಸರ್ಕಾರ ನಡೆಸುತ್ತಿದ್ದೇವೆ. ನಮಗೆ ಕೊಲೆ, ರಕ್ತಪಾತ ಮತ್ತು ಬಾಂಬ್ ಸ್ಫೋಟ ಏಕೆ ಬೇಕು? ಸರ್ಕಾರಕ್ಕೆ ಕಿರುಕುಳ ನೀಡಲು ಮತ್ತು ನಮ್ಮನ್ನು ನಿಂದಿಸಲು ಅಧಿಕಾರದಲ್ಲಿಲ್ಲದವರು ಇಂತಹ ಕೆಲಸಗಳನ್ನು ಮಾಡುತ್ತಾರೆ ಎಂದು ಮಮತಾ ಅವರು ಬುಧವಾರ ಕೋಲ್ಕತ್ತಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಹೇಳಿದರು. ಗುರುವಾರ ಬಿರ್ಭೂಮ್‌ನ ರಾಮ್‌ಪುರಹಟ್‌ಗೆ ಭೇಟಿ ನೀಡುವುದಾಗಿ ಬ್ಯಾನರ್ಜಿ ಹೇಳಿದರು. ಸೋಮವಾರ ತಡರಾತ್ರಿ ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ರಾಮ್‌ಪುರಹಟ್‌ನಲ್ಲಿ ಟಿಎಂಸಿ ಪಂಚಾಯತ್ ನಾಯಕನ ಹತ್ಯೆಯ ನಂತರ ಎಂಟು ಜನರು ಸಜೀವ ದಹನವಾಗಿದ್ದಾರೆ. ಮನೆಗಳನ್ನು ಸುಟ್ಟು ಇವರನ್ನು ಹತ್ಯೆ ಮಾಡಲಾಗಿದ್ದು, ಸಾವಿಗೀಡಾದವರಲ್ಲಿ ಹೆಚ್ಚಿನವರು ಮಹಿಳೆಯರು.
“ನಾನು ನಾಳೆ (ಮಾರ್ಚ್ 24) ಅಲ್ಲಿಗೆ ಹೋಗುತ್ತೇನೆ. ನಾನು ಇಂದು (ಮಾರ್ಚ್ 23) ಅಲ್ಲಿಗೆ ಹೋಗಲು ಯೋಜಿಸಿದೆ. ನಾನು ಸಿದ್ಧಳಾಗಿದ್ದೆ. ಆದರೆ ಕೆಲವು ರಾಜಕೀಯ ಪಕ್ಷಗಳು ಅಲ್ಲಿಗೆ ಹೋಗಿ ಸಿಹಿ ತಿನ್ನುತ್ತಿವೆ. ಅವರು (ವಿರೋಧ ಪಕ್ಷಗಳು) ಇರುವಾಗ ನಾನು ಅಲ್ಲಿಗೆ ಹೋಗಲು ಬಯಸುವುದಿಲ್ಲ. ನಾನು ಅವರೊಂದಿಗೆ ಅನಗತ್ಯವಾಗಿ ಜಗಳವಾಡಲು ಬಯಸುವುದಿಲ್ಲ ಎಂದು ಅವರು ಹೇಳಿದರು.
ಘಟನಾ ಸ್ಥಳಕ್ಕೆ ಸಿಪಿಐ(ಎಂ) ಮುಖಂಡರ ತಂಡ ಭೇಟಿ ನೀಡಿದ್ದು ಬುಧವಾರ ಬೆಳಗ್ಗೆ ಭಾರತೀಯ ಜನತಾ ಪರಿವಾರದ ಶಾಸಕರ ತಂಡ ತೆರಳಿದೆ.
“ಅವರು ಈಗಾಗಲೇ ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಬೆಲೆಗಳನ್ನು ಹೆಚ್ಚಿಸಿದ್ದಾರೆ. ಗಮನವನ್ನು ಬೇರೆಡೆಗೆ ತಿರುಗಿಸಲು, ಅವರು ಹಿಂಸೆಯನ್ನು ಪ್ರಚೋದಿಸುತ್ತಾರೆ. ನಂತರ ಅವರು ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡಲು ರಾಜ್ಯಪಾಲರನ್ನು ಕರೆಯುತ್ತಾರೆ ಎಂದು ಮಮತಾ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
“ಪಶ್ಚಿಮ ಬಂಗಾಳವು 100 ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ದೂರದ ಹಳ್ಳಿಯೊಂದರಲ್ಲಿ ಘಟನೆಯೊಂದು ನಡೆದಿದೆ. ಇದನ್ನು ಖಂಡಿಸಿ ತಕ್ಷಣ ಕ್ರಮ ಕೈಗೊಂಡಿದ್ದೇವೆ. ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಬಿಹಾರದಲ್ಲಿ ಇಂತಹ ಘಟನೆಗಳು ಇದಕ್ಕಿಂತ ದೊಡ್ಡದಾಗಿ ನಡೆಯುತ್ತವೆ. ನಾವು ಸಮರ್ಥಿಸುತ್ತಿಲ್ಲ. ಅಪರಾಧ ನಡೆದಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲು ಪ್ರಯತ್ನಿಸುತ್ತಿದ್ದೇವೆ. ಕ್ರಮ ತೆಗೆದುಕೊಳ್ಳುವಾಗ ನಾವು ಯಾವುದೇ ಬಣ್ಣವನ್ನು ನೋಡುವುದಿಲ್ಲ, ”ಎಂದು ಅವರು ಹೇಳಿದರು.
ರಾಜಕೀಯ ಮುಖಂಡರೊಬ್ಬರ ಹತ್ಯೆಯಾಗಿದೆ. ಅದಕ್ಕೂ ಮೊದಲು, ಅವನ ಸಹೋದರನನ್ನು ಕೊಲ್ಲಲಾಯಿತು. ಪೊಲೀಸರು ಏಕೆ ಕ್ರಮ ಕೈಗೊಳ್ಳಲಿಲ್ಲ? ಆ ಪ್ರದೇಶದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು, ಆದರೆ ಪೊಲೀಸರು ಏನೂ ಮಾಡಲಿಲ್ಲ. ಈ ಹತ್ಯಾಕಾಂಡ ನಡೆಯಲು ಪೊಲೀಸರು ಅನುಮತಿ ನೀಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಪರಿಣಾಮ ಎಂಟು ಮಂದಿ ಸಜೀವ ದಹನವಾದರು. ಇದು ಊಹಿಸಲೂ ಸಾಧ್ಯವಿಲ್ಲ. ರಾಜ್ಯಪಾಲರು ತಮ್ಮ ಕಳವಳವನ್ನು ವ್ಯಕ್ತಪಡಿಸಿದಾಗ, ಮುಖ್ಯಮಂತ್ರಿ ಅವರ ಮೇಲೆ ದಾಳಿ ಮಾಡಿದರು ಆದರೆ (ಹತ್ಯಾಕಾಂಡದ) ಹೊಣೆಗಾರಿಕೆಯನ್ನು ತೆಗೆದುಕೊಳ್ಳಲು ಏನನ್ನೂ ಮಾಡಲಿಲ್ಲ, ”ಎಂದು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಹೇಳಿದರು.
ಇದು ರಾಜಕೀಯ ಹಿಂಸಾಚಾರದ ಪ್ರಕರಣವಾಗಿ ತೋರುತ್ತಿಲ್ಲ ಎಂದು ರಾಜ್ಯ ಪೊಲೀಸರು ಮಂಗಳವಾರ ಹೇಳಿದ್ದಾರೆ.
“ಎರಡು ಗುಂಪುಗಳ ನಡುವಿನ ವೈಯಕ್ತಿಕ ದ್ವೇಷವೇ ಭಾದು ಶೇಖ್ ಹತ್ಯೆಗೆ ಕಾರಣವಾಗಿರಬಹುದು. ಇದರಲ್ಲಿ ಯಾವುದೇ ರಾಜಕೀಯ ಪೈಪೋಟಿ ಇಲ್ಲ ಎಂದು ಪಶ್ಚಿಮ ಬಂಗಾಳದ ಪೊಲೀಸ್ ಮಹಾನಿರ್ದೇಶಕ ಮನೋಜ್ ಮಾಳವಿಯಾ ಹೇಳಿದ್ದಾರೆ. ಇಂತಹ ಟೀಕೆಗಳನ್ನು ಮಾಡುವ ಬದಲು ಮುಖ್ಯಮಂತ್ರಿಗಳು ಮೊದಲು ಜವಾಬ್ದಾರಿ ವಹಿಸಿ ರಾಜೀನಾಮೆ ನೀಡಬೇಕು. ಪಂಚಾಯತ್ ನಾಯಕನನ್ನು ಹತ್ಯೆ ಮಾಡಿದ ಬಾಂಬ್ ಸ್ಫೋಟದ ಬಗ್ಗೆ ಎನ್‌ಐಎ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ನಾನು ಈಗಾಗಲೇ ಕೇಂದ್ರ ಗೃಹ ಕಾರ್ಯದರ್ಶಿಗೆ ಪತ್ರ ಬರೆದಿದ್ದೇನೆ. ಹತ್ಯಾಕಾಂಡಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷ್ಯಗಳನ್ನು ತಿರುಚಲು ಮುಖ್ಯಮಂತ್ರಿ ಬಿರ್ಭೂಮ್‌ಗೆ ಬರುತ್ತಿದ್ದಾರೆ ಎಂದು ಬಿಜೆಪಿ ಶಾಸಕ ಮತ್ತು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಗವರ್ನರ್ ಜಗದೀಪ್ ಧನ್ಖರ್ ಅವರು ನಿನ್ನೆ ವಿಡಿಯೊ ಸಂದೇಶದಲ್ಲಿ “ಮಾನವ ಹಕ್ಕುಗಳ ನಾಶ ಮತ್ತು ಕಾನೂನು ಮತ್ತು ಸುವ್ಯವಸ್ಥೆ ತಲೆಕೆಳಗಾಗಿದ್ದು ನೋಡಿ ದುಃಖಿತ ಮತ್ತು ವಿಚಲಿತನಾಗಿದ್ದೇನೆ ಎಂದು ಹೇಳಿದ್ದಾರೆ.
ಅಂತಹ ಹೇಳಿಕೆಗಳು ಎಸ್‌ಐಟಿಯ ತನಿಖೆಯ ಮೇಲೆ ಪ್ರಭಾವ ಬೀರಬಹುದು ಎಂದು ಬ್ಯಾನರ್ಜಿ ರಾಜ್ಯಪಾಲರಿಗೆ ಪ್ರತಿಕ್ರಿಯಿಸಿದ್ದು, ಧನ್ಖರ್ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿವೆ ಎಂದು ಆರೋಪಿಸಿದರು. ಅವರು ಯಾವಾಗಲೂ ರಾಜ್ಯದ ಪ್ರತಿಷ್ಠೆಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಮಮತಾ ಧನ್ಖರ್ ವಿರುದ್ಧ ವಾಗ್ದಾಳಿ ನಡೆಸಿದರು.
“ಇಲ್ಲಿ ಒಬ್ಬ ಸಾಹೇಬರು ಕುಳಿತಿದ್ದಾರೆ. ಪಶ್ಚಿಮ ಬಂಗಾಳ ಅತ್ಯಂತ ಕೆಟ್ಟ ರಾಜ್ಯ ಎಂದು ಹೇಳಿದರು. ಪ್ರತಿದಿನ ಅವರು ಡಾರ್ಜಿಲಿಂಗ್‌ನಿಂದ ಜಲ್ಪೈಗುರಿಗೆ ಸಂಚರಿಸಿ ಸರ್ಕಾರವನ್ನು ನಿಂದಿಸುತ್ತಿದ್ದಾರೆ. ನಿರ್ದಿಷ್ಟ ಸ್ಥಳಗಳಲ್ಲಿ ದಾಳಿ ನಡೆಸುವಂತೆ ರಾಜ್ಯಪಾಲರಿಂದ ಸೂಚನೆ ನೀಡಲಾಗುತ್ತಿದೆ ಎಂದು ಕೆಲವು ಪ್ರಮುಖರು ನನಗೆ ಮಾಹಿತಿ ನೀಡಿದ್ದಾರೆ. ನನಗೆ ಎಲ್ಲವೂ ಗೊತ್ತು” ಎಂದು ಮಮತಾ ಹೇಳಿದ್ದಾರೆ.