ಕೇಜ್ರಿವಾಲ್ ಅವರನ್ನು ಮತ್ತೆ ದೆಹಲಿ ಸಿಎಂ ಮಾಡುವುದೇ ನಮ್ಮ ಗುರಿ; ಪ್ರಮಾಣ ವಚನದ ಬಳಿಕ ಅತಿಶಿ ಸುದ್ದಿಗೋಷ್ಠಿ

|

Updated on: Sep 21, 2024 | 7:52 PM

ದಿವಂಗತರಾದ ಸುಷ್ಮಾ ಸ್ವರಾಜ್ ಮತ್ತು ಶೀಲಾ ದೀಕ್ಷಿತ್ ನಂತರ ಅತಿಶಿ ದೆಹಲಿಯ ಮೂರನೇ ಮಹಿಳಾ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅತಿ ಕಿರಿಯ ವಯಸ್ಸಿನಲ್ಲಿ ಮುಖ್ಯಮಂತ್ರಿ ಪಟ್ಟಕ್ಕೇರಿದ ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. ಪ್ರಮಾಣವಚನ ಸ್ವೀಕಾರದ ಬಳಿಕ ಸಿಎಂ ಅತಿಶಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಆ ಕುರಿತು ಮಾಹಿತಿ ಇಲ್ಲಿದೆ.

ಕೇಜ್ರಿವಾಲ್ ಅವರನ್ನು ಮತ್ತೆ ದೆಹಲಿ ಸಿಎಂ ಮಾಡುವುದೇ ನಮ್ಮ ಗುರಿ; ಪ್ರಮಾಣ ವಚನದ ಬಳಿಕ ಅತಿಶಿ ಸುದ್ದಿಗೋಷ್ಠಿ
ಅತಿಶಿ
Follow us on

ನವದೆಹಲಿ: ದೆಹಲಿಯ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅತಿಶಿ ಇಂದು ಮೊದಲ ಪತ್ರಿಕಾಗೋಷ್ಠಿ ನಡೆಸಿದರು. ಅರವಿಂದ್ ಕೇಜ್ರಿವಾಲ್ ಅವರನ್ನು ಮತ್ತೆ ದೆಹಲಿ ಸಿಎಂ ಮಾಡುವುದೊಂದೇ ನನ್ನ ಕೆಲಸ ಎಂದು ಹೇಳಿರುವ ಅತಿಶಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅರವಿಂದ್ ಕೇಜ್ರಿವಾಲ್ ವಿರುದ್ಧ ಪಿತೂರಿ ನಡೆಸಿತು, ಅವರನ್ನು 6 ತಿಂಗಳು ಜೈಲಿನಲ್ಲಿ ಇರಿಸಿತು, ಅವರನ್ನು ನಾಶ ಮಾಡಲು ಪ್ರಯತ್ನಿಸಿತು. ಆದರೆ ಸುಪ್ರೀಂ ಕೋರ್ಟ್ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಿತು. ಇಡಿ ಮತ್ತು ಸಿಬಿಐ ಕೇಂದ್ರ ಸರ್ಕಾರದ ಗಿಳಿಗಳಾಗಿ ಮಾರ್ಪಟ್ಟಿದೆ ಎಂದು ಅತಿಶಿ ಆರೋಪಿಸಿದ್ದಾರೆ.

“ಅರವಿಂದ್ ಕೇಜ್ರಿವಾಲ್ ಅವರು ಜನತಾ ನ್ಯಾಯಾಲಯಕ್ಕೆ ಹೋಗುತ್ತೇನೆ ಎಂದು ಹೇಳಿದರು. ಇನ್ನುಮುಂದೆ ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿರುವುದಿಲ್ಲ ಎಂಬುದು ಬಹಳ ಬೇಸರದ ಸಂಗತಿ. ಆದರೆ, ಮುಂದಿನ ವರ್ಷದ ಚುನಾವಣೆಯವರೆಗೆ ಮಾತ್ರ ನಾನು ಮುಖ್ಯಮಂತ್ರಿಯಾಗಿರುತ್ತೇನೆ. ಮತ್ತೆ ಆಮ್ ಆದ್ಮಿ ಪಕ್ಷ ಚುನಾವಣೆಯಲ್ಲಿ ಗೆದ್ದರೆ ಅರವಿಂದ್ ಕೇಜ್ರಿವಾಲ್ ಅವರೇ ಸಿಎಂ ಆಗುತ್ತಾರೆ. ಈಗ ನಮ್ಮ ಕೆಲಸವೆಂದರೆ ಅರವಿಂದ್ ಕೇಜ್ರಿವಾಲ್ ಅವರನ್ನು ಮತ್ತೆ ಸಿಎಂ ಮಾಡುವುದು” ಎಂದು ಹೊಸ ದೆಹಲಿ ಸಿಎಂ ಅತಿಶಿ ಹೇಳಿದ್ದಾರೆ.

ಇದನ್ನೂ ಓದಿ: Atishi Swearing-in Ceremony: ದೆಹಲಿ ನೂತನ ಮುಖ್ಯಮಂತ್ರಿಯಾಗಿ ಅತಿಶಿ ಪ್ರಮಾಣ ವಚನ ಸ್ವೀಕಾರ

“ಅರವಿಂದ್ ಕೇಜ್ರಿವಾಲ್ ಬಡವರಿಗೆ ವಿದ್ಯುತ್ ನೀಡಿದ ವ್ಯಕ್ತಿ. ಅವರು ಮಕ್ಕಳಿಗೆ ಶಿಕ್ಷಣ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಇನ್ನೂ ಅನೇಕ ಯೋಜನೆಗಳನ್ನು ಪರಿಚಯಿಸಿದವರು” ಎಂದು ಅತಿಶಿ ಹೇಳಿದರು.


ಇನ್ನು 4 ತಿಂಗಳಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಸಂಕಷ್ಟದಲ್ಲಿರುವ ದೆಹಲಿ ಜನರಿಗಾಗಿ ಕೆಲಸ ಮಾಡುವುದೊಂದೇ ನನ್ನ ಕೆಲಸ. ಬಿಜೆಪಿಯವರು ಯಾವ ಕೆಲಸ ನಿಲ್ಲಿಸಿದರೋ ಆ ಎಲ್ಲಾ ಕೆಲಸಗಳನ್ನು ಮಾಡುತ್ತೇವೆ. ಈಗ ಅರವಿಂದ್ ಕೇಜ್ರಿವಾಲ್ ಜೈಲಿನಿಂದ ಹೊರಬಂದಿದ್ದಾರೆ ಎಂದು ಅತಿಶಿ ಹೇಳಿದ್ದಾರೆ.

ಇದನ್ನೂ ಓದಿ: ಸೆಪ್ಟೆಂಬರ್ 21ರಂದು ದೆಹಲಿ ಸಿಎಂ ಆಗಿ ಅತಿಶಿ ಪ್ರಮಾಣವಚನ ಸ್ವೀಕಾರ

ಅತಿಶಿ ದೆಹಲಿಯ ಮೂರನೇ ಮಹಿಳಾ ಸಿಎಂ ಮತ್ತು ಭಾರತದ 17ನೇ ಮಹಿಳಾ ಮುಖ್ಯಮಂತ್ರಿ ಆಗಿದ್ದಾರೆ. ಅವರು ಇತರ 5 ಸಚಿವರೊಂದಿಗೆ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಪಕ್ಷವು ಘೋಷಿಸಿದ ಹೊಸ ಸಚಿವ ಸಂಪುಟದಲ್ಲಿ ಸುಲ್ತಾನ್‌ಪುರ್ ಮಜ್ರಾ ಶಾಸಕ ಮುಖೇಶ್ ಅಹ್ಲಾವತ್, ಸಚಿವರಾದ ಗೋಪಾಲ್ ರಾಯ್, ಕೈಲಾಶ್ ಗಹ್ಲೋಟ್, ಸೌರಭ್ ಭಾರದ್ವಾಜ್ ಮತ್ತು ಇಮ್ರಾನ್ ಹುಸೇನ್ ಅವರು ಸೇರಿದ್ದಾರೆ.


ಜಾಮೀನಿನ ಮೇಲೆ ಬಿಡುಗಡೆಯಾದ ಅರವಿಂದ್ ಕೇಜ್ರಿವಾಲ್ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಎಎಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅತಿಶಿ ಅವರನ್ನು ಮುಂದಿನ ಸಿಎಂ ಆಗಿ ಆಯ್ಕೆ ಮಾಡಲಾಯಿತು. ಪ್ರಮಾಣ ವಚನ ಸ್ವೀಕರಿಸುವ ಮುನ್ನ ಅತಿಶಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಆಗಮಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:16 pm, Sat, 21 September 24