ಆಕ್ಸ್ ಫರ್ಡ್ ವಿವಿ ಲಸಿಕೆಗೆ ಮತ್ತೆ ಗ್ರೀನ್ ಸಿಗ್ನಲ್, ಬ್ರಿಟನ್ ನಲ್ಲಿ ಶುರುವಾಯ್ತು 3ನೇ ಹಂತದ ಪ್ರಯೋಗ

  • Publish Date - 6:58 am, Sun, 13 September 20
ಆಕ್ಸ್ ಫರ್ಡ್ ವಿವಿ ಲಸಿಕೆಗೆ ಮತ್ತೆ ಗ್ರೀನ್ ಸಿಗ್ನಲ್, ಬ್ರಿಟನ್ ನಲ್ಲಿ ಶುರುವಾಯ್ತು 3ನೇ ಹಂತದ ಪ್ರಯೋಗ

ದೆಹಲಿ: ಕ್ರೂರಿ ಕೊರೊನಾ ಸದ್ದೆ ಇಲ್ಲದೆ ತನ್ನ ಅಟ್ಟಹಾಸ ಮುಂದುವರಿಸಿದೆ. ವಿಶ್ವದಾದ್ಯಂತ ಹತ್ತಿರತ್ತಿರ 3 ಕೋಟಿ ಪ್ರಕರಣಗಳು ಕನ್ಫರ್ಮ್ ಆಗಿವೆ. ಅದ್ರಲ್ಲೂ ಭಾರತದ ಸ್ಥಿತಿ ಊಹೆಗೂ ನಿಲುಕದಂಥ ಸಂದಿಗ್ಧ ಸ್ಥಿತಿಗೆ ತಲುಪಿದೆ. ಇನ್ನು ಈ ಹೊತ್ತಲ್ಲೇ ಆಕ್ಸ್​ಫರ್ಡ್ ಲಸಿಕೆಗೆ ದಿಢೀರ್ ಬ್ರೇಕ್ ಬಿದ್ದಿತ್ತು. ಇದು ಭಾರಿ ಆತಂಕ ಮೂಡಿಸಿದ್ದ ಬೆನ್ನಲ್ಲೇ ಮತ್ತೆ ಲಸಿಕೆ ಪ್ರಯೋಗ ಮುಂದುವರಿಸಲು ಬ್ರಿಟನ್ ಗ್ರೀನ್ ಸಿಗ್ನಲ್ ನೀಡಿದೆ.

ಜಗತ್ತಿನಲ್ಲಿ ಕೊರೊನಾ ಕಂಟಕದಿಂದ ಪಾರಾಗಲು ಉಳಿದಿರುವ ಏಕೈಕ ಮಾರ್ಗ ಲಸಿಕೆ. ಅದ್ರಲ್ಲೂ ಇಡೀ ವಿಶ್ವದ ಹಲವು ದೇಶಗಳು ಪೈಪೋಟಿಗೆ ಇಳಿದಿದ್ರೂ ಆಶಾಭಾವನೆ ಮೂಡಿಸಿದ್ದು ಮಾತ್ರ ಆಕ್ಸ್‌ಫರ್ಡ್‌ ವಿವಿ ಲಸಿಕೆಯೊಂದೇ. ಆದ್ರೆ, ಇತ್ತೀಚೆಗೆ ಆಕ್ಸ್​ಫರ್ಡ್ ಲಸಿಕೆಯ 3ನೇ ಹಂತದ ಪ್ರಯೋಗಕ್ಕೆ ಒಳಪಟ್ಟ ವ್ಯಕ್ತಿ ಅನಾರೋಗ್ಯಕ್ಕೆ ತುತ್ತಾಗಿದ್ದ. ಹೀಗಾಗಿ, ದಿಢೀರ್ ಎಂದು ಲಸಿಕೆಯ ಪ್ರಯೋಗಕ್ಕೆ ಬ್ರೇಕ್ ಬಿದ್ದಿತ್ತು. ಭಾರತದಲ್ಲೂ ಲಸಿಕೆ ಪ್ರಯೋಗ ನಿಂತಿತ್ತು. ಆದ್ರೀಗ, ತೊಡಕುಗಳೆಲ್ಲಾ ಮಾಯವಾಗಿ ಪ್ರಯೋಗ ಪುನಾರಂಭಿಸಲು ಸೂಚಿಸಲಾಗಿದೆ.

3ನೇ ಹಂತದ ಪ್ರಯೋಗಕ್ಕೆ ಬ್ರಿಟನ್‌ ಸರ್ಕಾರದ ಅನುಮತಿ!
ಬ್ರಿಟನ್​ನಲ್ಲಿ ಸ್ಥಗಿತಗೊಂಡಿದ್ದ ಆಕ್ಸ್​ಫರ್ಡ್ ಲಸಿಕೆಯ 3ನೇ ಹಂತದ ಪ್ರಯೋಗ ಈಗ ಮತ್ತೆ ಶುರುವಾಗಿದೆ. ಈ ಹಿಂದೆ ಬ್ರಿಟನ್‌ನಲ್ಲಿ ಪ್ರಯೋಗ ನಿಂತಾಗ ಭಾರತದಲ್ಲೂ ಪ್ರಯೋಗ ನಿಲ್ಲಿಸಲು ಪುಣೆಯ ಸೆರಮ್ ಇನ್ಸ್​ಟಿಟ್ಯೂಟ್​ಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಶೋಕಾಸ್ ನೋಟಿಸ್ ನೀಡಿತ್ತು. ಬ್ರಿಟನ್​ನಲ್ಲಿ ಪ್ರಯೋಗ ಪುನಾರಂಭ ಆಗುವವರೆಗೂ ತಟಸ್ಥವಾಗಿರಲು ಹೇಳಿತ್ತು. ಆದ್ರೀಗ ಬ್ರಿಟನ್​ನಲ್ಲಿ ಪ್ರಯೋಗ ಶುರುವಾಗಿರೋದ್ರಿಂದ ಭಾರತದಲ್ಲೂ ಈ ಲಸಿಕೆಯ ಪ್ರಯೋಗ ಮತ್ತೆ ಮುಂದುವರಿಯುವ ವಿಶ್ವಾಸ ಮೂಡಿದೆ.

ಒಟ್ನಲ್ಲಿ ಆಕ್ಸ್​ಫರ್ಡ್ ವ್ಯಾಕ್ಸಿನ್ ಪ್ರಯೋಗ ನಿಂತು ಹೋಗಿದ್ದು ಭಾರಿ ಆತಂಕ ಸೃಷ್ಟಿಮಾಡಿತ್ತು. ಆದರೆ ಈಗ ಪ್ರಯೋಗ ಪುನಾರಂಭಗೊಂಡಿರುವ ಹಿನ್ನೆಲೆ ವರ್ಷಾಂತ್ಯಕ್ಕೆ ಲಸಿಕೆ ಲಭ್ಯವಾಗುವ ಭರವಸೆ ಮೂಡಿಸಿದೆ. ಆದರೆ ಎಲ್ಲಾ ಅನುಮಾನ ಹಾಗೂ ಕುತೂಹಲಗಳಿಗೆ ಉತ್ತರ ಪಡೆಯಲು 3ನೇ ಪ್ರಯೋಗದ ಫಲಿತಾಂಶದವರೆಗೂ ಕಾಯಲೇಬೇಕಿದೆ.

Click on your DTH Provider to Add TV9 Kannada