ದೆಹಲಿ: ಎನ್ಸಿಪಿ ಮುಖ್ಯಸ್ಥ, ಹಿರಿಯ ರಾಜಕಾರಣಿ ಶರದ್ ಪವಾರ್ ಅವರಿಗೆ ಭಾನುವಾರ ಸಂಜೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಮುಂಬೈ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗಿದೆ ಎಂದು ಪಕ್ಷದ ವಕ್ತಾರ ನವಾಬ್ ಮಲಿಕ್ ಹೇಳಿದ್ದಾರೆ. ನಮ್ಮ ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರಿಗೆ ನಿನ್ನೆ ಸಂಜೆ ಹೊಟ್ಟೆ ನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು. ವೈದ್ಯಕೀಯ ತಪಾಸಣೆಗಾಗಿ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಅವರಿಗೆ ಪಿತ್ತಕೋಶದಲ್ಲಿ ಸಮಸ್ಯೆ ಇರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿದೆ ಎಂದು ನವಾಬ್ ಮಲಿಕ್ ಟ್ವೀಟ್ ಮಾಡಿದ್ದಾರೆ.
ಬುಧವಾರ ಪವಾರ್ ಅವರಿಗೆ ಸರ್ಜರಿ ನಡೆಯಲಿದೆ. ಈ ನಿಟ್ಟಿನಲ್ಲಿ ಅವರು ಭಾಗವಹಿಸಲಿರುವ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಅವರಿಗೆ ಬ್ಲಡ್ ಥಿನ್ನಿಂಗ್ ಚಿಕಿತ್ಸೆ ನಡೆದು ಬರುತ್ತಿತ್ತು. ಇದೀಗ ಪಿತ್ತಕೋಶ ಸಮಸ್ಯೆ ಕಂಡು ಬಂದಿರುವುದರಿಂದ ಆ ಚಿಕಿತ್ಸೆಯನ್ನು ನಿಲ್ಲಿಸಲಾಗಿದೆ. 2021ಮಾರ್ಚ್ 31ಕ್ಕೆ ಅವರು ಆಸ್ಪತ್ರೆಗೆ ದಾಖಲಾಗಲಿದ್ದು ಅಲ್ಲಿ ಎಂಡೋಸ್ಕೊಪಿ ಮತ್ತು ಸರ್ಜರಿ ನಡೆಯಲಿದೆ. ಮುಂದಿನ ಸೂಚನೆ ಸಿಗುವವರೆಗೆ ಅವರ ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದಿದ್ದಾರೆ ಮಲಿಕ್.
He is on Blood Thinning Medication which is now being stopped due to this issue.
He will be admitted in hospital on the 31st of March 2021 and an Endoscopy and Surgery will be conducted.
Hence all his programmes stand cancelled until further notice.@PTI_News @ANI— Nawab Malik نواب ملک नवाब मलिक (@nawabmalikncp) March 29, 2021
ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಶರದ್ ಪವಾರ್ ಅವರು ಗುಜರಾತಿನ ಅಹಮದಾಬಾದ್ ನಲ್ಲಿ ಸಭೆ ನಡೆಸಿದ್ದಾರೆ ಎಂಬ ವದಂತಿ ಶನಿವಾರ ಹಬ್ಬಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಅಮಿತ್ ಶಾ, ಎಲ್ಲವನ್ನೂ ಸಾರ್ವಜನಿಕವಾಗಿ ಹೇಳಲಾಗುವುದಿಲ್ಲ ಎಂದು ಹೇಳಿದ್ದರು. ಆದಾಗ್ಯೂ , ಅಮಿತ್ ಶಾ ಜತೆ ಯಾವುದೇ ಸಭೆ ನಡೆದಿಲ್ಲ ಎಂದು ಎನ್ಸಿಪಿ ಹೇಳಿದೆ.
80ರ ಹರೆಯದ ಶರದ್ ಪವಾರ್ 2004ರಲ್ಲಿ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆದಿದ್ದರು. ಶರದ್ ಪವಾರ್ ಅವರ ಎನ್ಸಿಪಿ ಪಕ್ಷ ಮಹಾರಾಷ್ಟ್ರದಲ್ಲಿ ಉದ್ದವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರದ ಮೈತ್ರಿ ಪಕ್ಷವಾಗಿದೆ. ಈ ಮೈತ್ರಿಕೂಟದಲ್ಲಿ ಶಿವಸೇನೆ ಮತ್ತು ಕಾಂಗ್ರೆಸ್ ಪಕ್ಷ ಕೂಡಾ ಇದೆ. ಉದ್ದವ್ ಠಾಕ್ರೆ ಸರ್ಕಾರ ಅಧಿಕಾರಕ್ಕೆ ಬಂದು 14 ತಿಂಗಳು ಆಗಿದೆ. ಈ ನಡುವೆ ಮುಕೇಶ್ ಅಂಬಾನಿ ಮನೆ ಬಳಿ ಸಿಕ್ಕಿದ ಬಾಂಬ್ ಪ್ರಕರಣ ತದ ನಂತರದ ರಾಜಕೀಯ ಬೆಳವಣಿಗೆಗಳಿಂದ ಮಹಾರಾಷ್ಟ್ರ ಸರ್ಕಾರದ ಸಂಕಷ್ಟಕ್ಕೆ ಸಿಲುಕಿದೆ. ಈ ನಡುವೆಯೇ ಶರದ್ ಪವಾರ್ ಅವರ ಅನಾರೋಗ್ಯ ಮಹಾರಾಷ್ಟ್ರ ಸರ್ಕಾರವನ್ನು ಮತ್ತಷ್ಟು ಚಿಂತೆಗೆ ದೂಡಿದೆ.
ಇದನ್ನೂ ಓದಿ: ಎಲ್ಲವನ್ನೂ ಸಾರ್ವಜನಿಕವಾಗಿ ಹೇಳಲು ಆಗುವುದಿಲ್ಲ: ಶರದ್ ಪವಾರ್ ಭೇಟಿ ಬಗ್ಗೆ ಅಮಿತ್ ಶಾ
Published On - 11:35 am, Mon, 29 March 21