ಎಲ್ಲವನ್ನೂ ಸಾರ್ವಜನಿಕವಾಗಿ ಹೇಳಲು ಆಗುವುದಿಲ್ಲ: ಶರದ್ ಪವಾರ್ ಭೇಟಿ ಬಗ್ಗೆ ಅಮಿತ್​ ಶಾ

Maharashtra Politics: ಎನ್​ಸಿಪಿ-ಶಿವಸೇನೆ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿರುವ ಮುನ್ಸೂಚನೆಯ ಬೆನ್ನಲ್ಲೇ ಅಮಿತ್ ಶಾ ಅವರನ್ನು ಶರದ್​ ಪವಾರ್ ಭೇಟಿಯಾಗಿರುವುದು ಹಲವು ಹೊಸ ಲೆಕ್ಕಾಚಾರಗಳನ್ನು ಹುಟ್ಟುಹಾಕಿದೆ.

ಎಲ್ಲವನ್ನೂ ಸಾರ್ವಜನಿಕವಾಗಿ ಹೇಳಲು ಆಗುವುದಿಲ್ಲ: ಶರದ್ ಪವಾರ್ ಭೇಟಿ ಬಗ್ಗೆ ಅಮಿತ್​ ಶಾ
ಶರದ್ ಪವಾರ್ ಮತ್ತು ಅಮಿತ್ ಶಾ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on: Mar 28, 2021 | 5:25 PM

ದೆಹಲಿ: ಮಹಾರಾಷ್ಟ್ರದ ಪ್ರಭಾವಿ ನಾಯಕ, ಮಹಾ ವಿಕಾಸ್ ಅಘಾಡಿ ಸರ್ಕಾರದ ರೂವಾರಿ ಶರದ್​ ಪವಾರ್ ಶನಿವಾರ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ. ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್​ಮುಖ್​ ಭ್ರಷ್ಟಾಚಾರದ ಬಗ್ಗೆ ಮುಂಬೈನ ಹಿಂದಿನ ಪೊಲೀಸ್ ಕಮಿಷನರ್ ಬರೆದಿದ್ದ ಪತ್ರದ ಹಿನ್ನೆಲೆಯಲ್ಲಿ ಈ ಭೇಟಿಗೆ ಮಹತ್ವ ಬಂದಿದೆ. ಹಲವು ರೀತಿಯ ವಿಶ್ಲೇಷಣೆಗಳಿಗೂ ಈ ಬೆಳವಣಿಗೆ ಕಾರಣವಾಗಿವೆ. ಈ ಕುರಿತು ಪ್ರಶ್ನಿಸಿದಾಗ ಅಹಮದಾಬಾದ್​ನಲ್ಲಿ ಮಹಾರಾಷ್ಟ್ರದ ‘ಚಾಣಕ್ಯ’ನ ಭೇಟಿಯ ವಿಚಾರವನ್ನು ಒಪ್ಪಿಕೊಳ್ಳಲೂ ಇಲ್ಲ, ನಿರಾಕರಿಸಲೂ ಇಲ್ಲ. ಬದಲಾಗಿ ‘ಸಾರ್ವಜನಿಕವಾಗಿ ಎಲ್ಲವನ್ನೂ ಹೇಳಬೇಕಿಲ್ಲ’ ಎಂದಷ್ಟೇ ಅಮಿತ್​ ಶಾ ಮುಗುಮ್ಮಾಗಿ ಪ್ರತಿಕ್ರಿಯಿಸಿದರು.

ಶರದ್​ ಪವಾರ್ ಅವರ ಎನ್​ಸಿಪಿ ಮಹಾ ವಿಕಾಸ್ ಅಘಾಡಿ ಮೈತ್ರಿ ಸರ್ಕಾರದ ಪ್ರಮುಖ ಪಾಲುದಾರ ಪಕ್ಷವಾಗಿದೆ. ಗೃಹ ಸಚಿವ ಅನಿಲ್ ದೇಶ್​ಮುಖ್ ಸಹ ಎನ್​ಸಿಪಿಗೆ ಸೇರಿದವರೇ ಆಗಿದ್ದಾರೆ. ಹಿಂದಿನ ಮುಂಬೈ ಪೊಲೀಸ್ ಆಯುಕ್ತ ಪರಮ್​ಬೀರ್ ಸಿಂಗ್ ಭ್ರಷ್ಟಾಚಾರದ ಆರೋಪ ಮಾಡಿ ಪತ್ರ ಬರೆದ ನಂತರ ಎನ್​ಸಿಪಿಗೆ ಮುಜುಗರವಾಗಿತ್ತು.

ಮುಕೇಶ್ ಅಂಬಾನಿ ಮನೆ ಎದುರು ಸ್ಫೋಟಕ ತುಂಬಿದ್ದ ಕಾರು ಪತ್ತೆಯಾದ ಪ್ರಕರಣದ ಅಸಮರ್ಪಕ ನಿರ್ವಹಣೆ ಆರೋಪದ ಮೇಲೆ ಮುಂಬೈ ಪೊಲೀಸ್​ ಆಯುಕ್ತರಾಗಿದ್ದ ಪರಮ್​ಬೀರ್ ಸಿಂಗ್ ಅವರನ್ನು ಸರ್ಕಾರ ಬೇರೆಡೆಗೆ ವರ್ಗಾಯಿಸಿತ್ತು. ಇದನ್ನು ಪ್ರಶ್ನಿಸಿದ್ದ ಪರಮ್​ಬೀರ್ ಸಿಂಗ್, ಗೃಹ ಸಚಿವ ಅನಿಲ್ ದೇಶ್​ಮುಖ್ ತಿಂಗಳಿಗೆ ₹ 100 ಕೋಟಿ ವಸೂಲಿ ಮಾಡಿಕೊಡುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು.

ಶರದ್​ ಪವಾರ್ ಮತ್ತು ಪ್ರಫುಲ್ ಪಟೇಲ್​ ಅಹಮದಾಬಾದ್ ಹೊರವಲಯದ ತೋಟದ ಮನೆಯೊಂದರಲ್ಲಿ ಶನಿವಾರ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು ಎಂದು ಗುಜರಾತ್​ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಅಂಬಾನಿ ಮನೆ ಎದುರು ಸ್ಫೋಟಕ ಪತ್ತೆ ಮತ್ತು ಅನಿಲ್ ದೇಶ್​ಮುಖ್ ವಿರುದ್ಧ ಆರೋಪ ಕೇಳಿಬಂದ ನಂತರ ಕೇಂದ್ರದ ಬಿಜೆಪಿ ಸರ್ಕಾರವು ಮಹಾರಾಷ್ಟ್ರದ ಮೈತ್ರಿ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಿತ್ತು. ಈ ಹಿನ್ನೆಲೆಯಲ್ಲಿಯೂ ಈ ಭೇಟಿಯೂ ಮಹತ್ವ ಪಡೆದಿದೆ.

ಶಿವಸೇನೆಯ ಮುಖವಾಣಿ ಸಾಮ್ನಾ ಸಹ ಭಾನುವಾರ ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ಹರಿಹಾಯ್ದು, ಸರ್ಕಾರದ ಕೆಲ ಕ್ರಮಗಳನ್ನು ಕಟುವಾಗಿ ಟೀಕಿಸಿದೆ. ಗೃಹ ಸಚಿವರು ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಲು ಅಥವಾ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ತಡ ಮಾಡುತ್ತಿರುವುದನ್ನು ಖಂಡಿಸಿತ್ತು. ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿರುವ ಮುನ್ಸೂಚನೆಯ ಬೆನ್ನಲ್ಲೇ ಅಮಿತ್ ಶಾ ಅವರನ್ನು ಶರದ್​ ಪವಾರ್ ಭೇಟಿಯಾಗಿರುವುದು ಹಲವು ಹೊಸ ಲೆಕ್ಕಾಚಾರಗಳನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: ಭ್ರಷ್ಟಾಚಾರ ಆರೋಪಗಳ ಬಗ್ಗೆ ಹೈಕೋರ್ಟ್​ ನ್ಯಾಯಮೂರ್ತಿಯಿಂದ ತನಿಖೆ: ಮಹಾರಾಷ್ಟ್ರ ಗೃಹಸಚಿವ ಅನಿಲ್ ದೇಶ್​ಮುಖ್

ಇದನ್ನೂ ಓದಿ: Coronavirus India: ದೇಶದಲ್ಲಿ 59 ಸಾವಿರ ದಾಟಿದ ಕೊವಿಡ್ ಹೊಸ ಪ್ರಕರಣಗಳ ಸಂಖ್ಯೆ, ಮಹಾರಾಷ್ಟ್ರದಲ್ಲಿ ದಾಖಲೆ ಏರಿಕೆ