Coronavirus India: ದೇಶದಲ್ಲಿ 59 ಸಾವಿರ ದಾಟಿದ ಕೊವಿಡ್ ಹೊಸ ಪ್ರಕರಣಗಳ ಸಂಖ್ಯೆ, ಮಹಾರಾಷ್ಟ್ರದಲ್ಲಿ ದಾಖಲೆ ಏರಿಕೆ

Coronavirus India: ದೇಶದಲ್ಲಿ 59 ಸಾವಿರ ದಾಟಿದ ಕೊವಿಡ್ ಹೊಸ ಪ್ರಕರಣಗಳ ಸಂಖ್ಯೆ, ಮಹಾರಾಷ್ಟ್ರದಲ್ಲಿ ದಾಖಲೆ ಏರಿಕೆ
ಕೊರೊನಾ ವೈರಾಣು ಪತ್ತೆ

Covid 19 Cases: ಕಳೆದ 16 ದಿನಗಳಿಂದ ಕೊರೊನಾ ಸಕ್ರಿಯ ಪ್ರಕರಣಗಳು ಏರಿಕೆಯಾಗುತ್ತಲೇ ಇದ್ದು ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4.21ಲಕ್ಷಕ್ಕೇರಿದೆ. ಮಹಾರಾಷ್ಟ್ರದಲ್ಲಿ ಒಂದೇ ದಿನ 35,952 ಪ್ರಕರಣಗಳು ವರದಿಯಾಗಿವೆ.

Rashmi Kallakatta

|

Mar 26, 2021 | 2:15 PM

ದೆಹಲಿ: ದೇಶದಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಶುಕ್ರವಾರ ಬೆಳಗ್ಗೆ 59,118 ಹೊಸ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1.18 ಕೋಟಿಗೆ (1,18,46,652) ತಲುಪಿದೆ. ಗುರುವಾರ 257 ಮಂದಿ ಸಾವಿಗೀಡಾಗಿದ್ದು, ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 1,60,949ಕ್ಕೆ ತಲುಪಿದೆ. ಕಳೆದ 16 ದಿನಗಳಿಂದ ಕೊರೊನಾ ಸಕ್ರಿಯ ಪ್ರಕರಣಗಳು ಏರಿಕೆಯಾಗುತ್ತಲೇ ಇದ್ದು ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4.21ಲಕ್ಷಕ್ಕೇರಿದೆ. ಮಹಾರಾಷ್ಟ್ರದಲ್ಲಿ ಒಂದೇ ದಿನ 35,952 ಪ್ರಕರಣಗಳು ವರದಿಯಾಗಿವೆ.ಇದು ದೇಶದಲ್ಲಿನ ಒಟ್ಟು ಪ್ರಕರಣಗಳ ಸಂಖ್ಯೆಯ ಶೇ 62ರಷ್ಟಾಗಿದೆ.

ಪಂಜಾಬ್, ಕರ್ನಾಟಕ ಮತ್ತು ಛತ್ತೀಸ್​ಗಢದಲ್ಲಿ ಪ್ರತಿದಿನ 2,500 ಕ್ಕಿಂತಲೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಗುರುವಾರ ಮಹಾರಾಷ್ಟ್ರದಲ್ಲಿ 111, ಪಂಜಾಬ್​ನಲ್ಲಿ 43, ಛತ್ತೀಸ್​ಗಢದಲ್ಲಿ 15, ಕೇರಳದಲ್ಲಿ 12 , ತಮಿಳುನಾಡಿನಲ್ಲಿ 11 ಮತ್ತು ಕರ್ನಾಟಕದಲ್ಲಿ 10 ಮಂದಿ ಕೊವಿಡ್ ನಿಂದ ಮೃತಪಟ್ಟಿದ್ದಾರೆ.

ಆಗಸ್ಟ್ ತಿಂಗಳಲ್ಲಿ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 20 ಲಕ್ಷ ದಾಟಿತ್ತು. ಆಗಸ್ಟ್ 23ರಂದು 30 ಲಕ್ಷ , ಸೆಪ್ಟೆಂಬರ್ 5ರಂದು 40 ಲಕ್ಷ, ಸೆಪ್ಟೆಂಬರ್ 16ರಂದು 50 ಲಕ್ಷ ದಾಟಿತ್ತು. ಸೆಪ್ಟೆಂಬರ್ 28ರಂದು 60 ಲಕ್ಷ, ಅಕ್ಟೋಬರ್ 11ರಂದು 70 ಲಕ್ಷ, ಅಕ್ಟೋಬರ್ 29ರಂದು 80 ಲಕ್ಷ, ನವೆಂಬರ್ 20ರಂದು 90ಲಕ್ಷ ದಾಟಿ ಡಿಸೆಂಬರ್ 19ಕ್ಕೆ 1ಕೋಟಿ ಗಡಿ ತಲುಪಿತ್ತು.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮಾಹಿತಿ ಪ್ರಕಾರ ಮಾರ್ಚ್ 25ರ ವರೆಗೆ 23,86,04,638 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಗುರುವಾರ 11,00,756 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಮಹಾರಾಷ್ಟ್ರ ಪಂಜಾಬ್, ಕೇರಳ, ಕರ್ನಾಟಕ, ಛತ್ತೀಸ್ ಗಢ್, ಗುಜರಾತ್- ಈ ಆರು ರಾಜ್ಯಗಳಲ್ಲಿ ಕೊವಿಡ್ ಎರಡನೇ ಅಲೆ ತಲುಪಿರುವ ಸಾಧ್ಯತೆ ಇದೆ ಎಂದು ಅಧಿಕೃತ ದಾಖಲೆಗಳು ತೋರಿಸುತ್ತಿವೆ.

ಛತ್ತೀಸ್ ಗಢದಲ್ಲಿ ಮಾಸ್ಕ್ ಧರಿಸದಿದ್ದರೆ ₹500 ದಂಡ ಕೊರೊನಾವೈರಸ್ ಮಾರ್ಗಸೂಚಿಗಳನ್ನು ಪಾಲಿಸದಿದ್ದರೆ, ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ₹100 ರಿಂದ ₹500ರವರೆಗೆ ದಂಡ ವಿಧಿಸುವುದಾಗಿ ಛತ್ತೀಸ್​ಗಢ ಸರ್ಕಾರ ಹೇಳಿದೆ.

ಕೊರೊನಾ ಲಸಿಕೆ ವಿತರಣೆಯ ವ್ಯಾಪ್ತಿ ಹೆಚ್ಚಿಸಲು ಚಿಂತನೆ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಕೊರೊನಾ ಲಸಿಕೆ ನೀಡುವ ಬದಲು ಮುಂಬರುವ ದಿನಗಳಲ್ಲಿ ಹೆಚ್ಚಿನ ಜನರಿಗೆ ಕೊರೊನಾ ಲಸಿಕೆ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಹೇಳಿದ್ದಾರೆ. ಏಪ್ರಿಲ್ 1ರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ಕೊರೊನಾ ಲಸಿಕೆ ನೀಡುವುದಾಗಿ ಸರ್ಕಾರ ಘೋಷಿಸಿತ್ತು.

ಇದನ್ನೂ ಓದಿ:  ಕೊರೊನಾ ಲಸಿಕೆ ವಿತರಣೆಯಲ್ಲಿ ಸ್ಲಂ ನಿವಾಸಿಗಳಿಗೆ ಆದ್ಯತೆ ಸಿಗಲಿ: ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

Follow us on

Related Stories

Most Read Stories

Click on your DTH Provider to Add TV9 Kannada