ಕಾಂಗ್ರೆಸ್ ಸಂಸದರ ಪತ್ನಿಗೆ ಪಾಕಿಸ್ತಾನದ ನಂಟು ದೃಢ; ಅಸ್ಸಾಂ ಸಿಎಂ ಹಿಮಂತ ಶರ್ಮಾಗೆ ಎಸ್‌ಐಟಿ ವರದಿ ಸಲ್ಲಿಕೆ

ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರಿಗೆ ಪಾಕಿಸ್ತಾನದ ಜೊತೆಗಿನ ಸಂಬಂಧದ ಬಗ್ಗೆ ತನಿಖೆ ನಡೆಸಲು ಅಸ್ಸಾಂ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) ಬುಧವಾರ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ತನ್ನ ವರದಿಯನ್ನು ಸಲ್ಲಿಸಿದೆ. ಈ ವರದಿಯನ್ನು ವಿವರವಾಗಿ ಪರಿಶೀಲಿಸಲಾಗುವುದು ಮತ್ತು ರಾಜ್ಯ ಸಚಿವ ಸಂಪುಟದ ಮುಂದೆ ಇಡಲಾಗುವುದು. ನಂತರ ಅದರ ವಿವರಗಳನ್ನು ಬಹಿರಂಗಪಡಿಸಲಾಗುವುದು ಎಂದು ಸಿಎಂ ಹೇಳಿದರು.

ಕಾಂಗ್ರೆಸ್ ಸಂಸದರ ಪತ್ನಿಗೆ ಪಾಕಿಸ್ತಾನದ ನಂಟು ದೃಢ; ಅಸ್ಸಾಂ ಸಿಎಂ ಹಿಮಂತ ಶರ್ಮಾಗೆ ಎಸ್‌ಐಟಿ ವರದಿ ಸಲ್ಲಿಕೆ
Himanta Biswa Sharma

Updated on: Sep 11, 2025 | 7:51 PM

ಗುವಾಹಟಿ, ಸೆಪ್ಟೆಂಬರ್ 11: ಅಸ್ಸಾಂ ಸಂಸದ ಹಾಗೂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ (Gaurav Gogoi) ಅವರ ಪತ್ನಿ ಎಲಿಜಬೆತ್ ಕೋಲ್ಬರ್ನ್ ಅವರೊಂದಿಗಿನ ಪಾಕಿಸ್ತಾನಿ ಪ್ರಜೆಯ ಸಂಬಂಧದ ಬಗ್ಗೆ ತನಿಖೆ ನಡೆಸುತ್ತಿದ್ದ ಎಸ್​ಐಟಿ ಬುಧವಾರ ಸಂಜೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ವರದಿಯನ್ನು ಸಲ್ಲಿಸಿದೆ. ಈ ವರದಿಯು ಹಲವು ಆಶ್ಚರ್ಯಕರ ಸಂಗತಿಯನ್ನು ಬಹಿರಂಗಪಡಿಸಿದೆ. “ಈ ಸಮಗ್ರ ತನಿಖೆಯ ಸಮಯದಲ್ಲಿ ನಮ್ಮ ರಾಷ್ಟ್ರದ ಸಾರ್ವಭೌಮತ್ವವನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿರುವ ದೊಡ್ಡ ಪಿತೂರಿಯ ಆಶ್ಚರ್ಯಕರ ಸಂಗತಿಗಳನ್ನು ಎಸ್‌ಐಟಿ ಬಹಿರಂಗಪಡಿಸಿದೆ” ಎಂದು ಸಿಎಂ ಹಿಮಂತ ಬಿಸ್ವ ಶರ್ಮ ಎಕ್ಸ್‌ನಲ್ಲಿ ಬರೆದಿದ್ದಾರೆ.

ಗೌರವ್ ಗೊಗೊಯ್ ಮತ್ತು ಅವರ ಪತ್ನಿಯನ್ನು ಉಲ್ಲೇಖಿಸಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ, “ಪಾಕಿಸ್ತಾನಿ ಪ್ರಜೆ ಅಲಿ ತೌಕೀರ್ ಶೇಖ್ ಅವರ ದೊಡ್ಡ ದುಷ್ಕೃತ್ಯಗಳಲ್ಲಿ ಭಾರತೀಯ ಸಂಸತ್ ಸದಸ್ಯರನ್ನು ಮದುವೆಯಾಗಿರುವ ಬ್ರಿಟಿಷ್ ಪ್ರಜೆ ಭಾಗಿಯಾಗಿದ್ದಾರೆ” ಎಂದು ಎಸ್‌ಐಟಿ ವರದಿ ನೀಡಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: ಕಾಂಗ್ರೆಸ್​ ಸಂಸದ ಗೌರವ್ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಅಸ್ಸಾಂ ಸಿಎಂ ಪತ್ನಿ ರಿನಿಕಿ ಶರ್ಮಾ

ಅಸ್ಸಾಂ ಸಿಐಡಿಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಎಸ್‌ಐಟಿ ತನಿಖೆ ನಡೆಸುತ್ತಿತ್ತು. ಅವರು ಗೌರವ್ ಗೊಗೊಯ್ ಪತ್ನಿಯಾದ ಬ್ರಿಟಿಷ್ ಪ್ರಜೆಯಾದ ಶ್ರೀಮತಿ ಕೋಲ್ಬರ್ನ್ ಅವರೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಆರೋಪಿಸಲಾಗಿದೆ. ಎಸ್‌ಐಟಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಾದ ಮುನ್ನಾ ಪ್ರಸಾದ್ ಗುಪ್ತಾ, ರೋಸಿ ಕಲಿತಾ, ಪ್ರಣಬ್‌ಜ್ಯೋತಿ ಗೋಸ್ವಾಮಿ ಮತ್ತು ಮೈತ್ರಯೀ ದೇಕಾ ಇದ್ದರು. ಪಾಕಿಸ್ತಾನಿ ಪ್ರಜೆ ಅಲಿ ತೌಕೀರ್ ಶೇಖ್ ಮತ್ತು ಅವರ ಸಹಚರರ ಚಟುವಟಿಕೆಗಳನ್ನು ತನಿಖೆ ಮಾಡಲು ರಾಜ್ಯ ಸಚಿವ ಸಂಪುಟದ ನಿರ್ಧಾರದ ನಂತರ ಫೆಬ್ರವರಿ 17ರಂದು ಈ ತಂಡವನ್ನು ರಚಿಸಲಾಯಿತು.

ಇದನ್ನೂ ಓದಿ: ಉಗ್ರರು ಪಹಲ್ಗಾಮ್​ ತಲುಪಿದ್ದು ಹೇಗೆ? ಕದನವಿರಾಮಕ್ಕೆ ಒಪ್ಪಿದ್ದೇಕೆ?; ಸದನದಲ್ಲಿ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಪ್ರಶ್ನೆಗಳ ಸುರಿಮಳೆ

ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರು ಗೌರವ್ ಗೊಗೊಯ್ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದಾರೆ ಎಂದು ಪದೇ ಪದೇ ಆರೋಪಿಸಿದ್ದರು. ಹಾಗೇ, ಅವರ ಕುಟುಂಬದ ಪೌರತ್ವವನ್ನು ಪ್ರಶ್ನಿಸಿದ್ದರು. ಅಸ್ಸಾಂ ಕಾಂಗ್ರೆಸ್ ಮುಖ್ಯಸ್ಥರಾಗಿರುವ ಗೌರವ್ ಗೊಗೊಯ್, ರಾಜಕೀಯ ಕಾರಣಗಳಿಗಾಗಿ ತಮ್ಮನ್ನು ಗುರಿಯಾಗಿಸಿಕೊಳ್ಳಲಾಗುತ್ತಿದೆ ಎಂದು ಹೇಳುತ್ತಾ ಆ ಆರೋಪಗಳನ್ನು ನಿರಾಕರಿಸಿದ್ದರು. 2013ರಲ್ಲಿ ಅವರ ಪತ್ನಿ ಎಲಿಜಬೆತ್ ಕೋಲ್ಬರ್ನ್ ಗೊಗೊಯ್ ಹವಾಮಾನ ಬದಲಾವಣೆ ಯೋಜನೆಯಲ್ಲಿ ಪಾಕಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದಾಗ ತಾವು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾಗಿ ಅವರು ಒಪ್ಪಿಕೊಂಡಿದ್ದರು. ಆದರೆ, ಪಾಕಿಸ್ತಾನಿ ಅಧಿಕಾರಿಗಳೊಂದಿಗೆ ತಮಗೆ ಯಾವುದೇ ಸಂಪರ್ಕವಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:51 pm, Thu, 11 September 25