ಉಗ್ರರು ಪಹಲ್ಗಾಮ್ ತಲುಪಿದ್ದು ಹೇಗೆ? ಕದನವಿರಾಮಕ್ಕೆ ಒಪ್ಪಿದ್ದೇಕೆ?; ಸದನದಲ್ಲಿ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಪ್ರಶ್ನೆಗಳ ಸುರಿಮಳೆ
ಇಂದು ಲೋಕಸಭಾ ಅಧಿವೇಶನದಲ್ಲಿ ಆಪರೇಷನ್ ಸಿಂಧೂರದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೆಳಗ್ಗೆ ಆಪರೇಷನ್ ಸಿಂಧೂರದ ಬಗ್ಗೆ ಸದನದಲ್ಲಿ ಮಾಹಿತಿ ನೀಡಿದ್ದರು. ಮಧ್ಯಾಹ್ನದ ನಂತರ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದೆ. ಕಾಂಗ್ರೆಸ್ ಒರವಾಗಿ ಚರ್ಚೆಯನ್ನು ಮುನ್ನಡೆಸಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮದ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ಆಪರೇಷನ್ ಸಿಂಧೂರ್ ಬಗ್ಗೆ ಪಾರದರ್ಶಕತೆ ಇರಬೇಕೆಂದು ಒತ್ತಾಯಿಸಿದ್ದಾರೆ.

ನವದೆಹಲಿ, ಜುಲೈ 28: ಆಪರೇಷನ್ ಸಿಂಧೂರ್ (Operation Sindoor) ಕುರಿತ ಲೋಕಸಭೆಯ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ (Gaurav Gogoi) ಹಲವಾರು ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. ಪ್ರಮುಖ ರಾಷ್ಟ್ರೀಯ ಭದ್ರತಾ ಸಮಸ್ಯೆಗಳನ್ನು ನಿರ್ವಹಿಸುವ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಪಹಲ್ಗಾಮ್ವರೆಗೆ (Pahalgam Attack) ಉಗ್ರರು ಹೇಗೆ ತಲುಪಿದರು? ಆಪರೇಷನ್ ಸಿಂಧೂರ್ ವೇಳೆ ನಮ್ಮ ಎಷ್ಟು ಜೆಟ್ಗಳನ್ನು ಹೊಡೆದುರುಳಿಸಲಾಯಿತು? ಕದನವಿರಾಮಕ್ಕೆ ಭಾರತ ಒಪ್ಪಿದ್ದೇಕೆ? ಎಂದು ಗೌರವ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸಂಸದರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಎಷ್ಟು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಪ್ರಶ್ನಿಸಿದ್ದಾರೆ, ಸತ್ಯವನ್ನು ಸಾರ್ವಜನಿಕರೊಂದಿಗೆ ಮಾತ್ರವಲ್ಲದೆ ಸಶಸ್ತ್ರ ಪಡೆಗಳೊಂದಿಗೆ ಕೂಡ ಹಂಚಿಕೊಳ್ಳಬೇಕು ಎಂದು ಒತ್ತಿ ಹೇಳಿದ್ದಾರೆ. “ಪಹಲ್ಗಾಮ್ ದಾಳಿ ನಡೆದು 100 ದಿನಗಳು ಕಳೆದಿವೆ, ಆದರೆ ಈ ಸರ್ಕಾರ ಆ 5 ಭಯೋತ್ಪಾದಕರನ್ನು ಹಿಡಿಯಲು ಸಾಧ್ಯವಾಗಿಲ್ಲ” ಎಂದು ಗೊಗೊಯ್ ಹೇಳಿದ್ದಾರೆ. ಅವರ ಈ ಹೇಳಿಕೆ ಎನ್ಕೌಂಟರ್ನಲ್ಲಿ ಇಂದು ಸಂಜೆ ಹಾಶಿಮ್ ಮೂಸಾನನ್ನು ಹತ್ಯೆ ಮಾಡುವುದಕ್ಕೂ ಮೊದಲಿನದ್ದಾಗಿದೆ.
ಇದನ್ನೂ ಓದಿ: ಸಂಸತ್ನಲ್ಲಿ ಆಪರೇಷನ್ ಸಿಂಧೂರ್ ಬಗ್ಗೆ ವಿರೋಧಿಸಲ್ಲ ಎಂದ ಶಶಿ ತರೂರ್; ಕಾಂಗ್ರೆಸ್ ಮನವಿಗೆ ಒಪ್ಪದ ಸಂಸದ
“ದಾಳಿ ನಡೆದ ಬೈಸರನ್ ಕಣಿವೆಯನ್ನು ತಲುಪಲು ಆಂಬ್ಯುಲೆನ್ಸ್ ಸುಮಾರು 1 ಗಂಟೆ ತೆಗೆದುಕೊಂಡಿತು. ಸೈನ್ಯವು ಕಾಲ್ನಡಿಗೆಯಲ್ಲಿ ಅಲ್ಲಿಗೆ ತಲುಪಿತು. ಇಂತಹ ಪ್ರದೇಶಕ್ಕೆ ಉಗ್ರರು ಸುಲಭವಾಗಿ ಯಾರಿಗೂ ಅನುಮಾನ ಬಾರದಂತೆ ತಲುಪಿದ್ದು ಹೇಗೆ? ಒಬ್ಬ ತಾಯಿ ಮತ್ತು ಆಕೆಯ ಮಗಳು ಭಾರತೀಯ ಸೈನಿಕನನ್ನು ನೋಡಿದಾಗ ಅವರನ್ನು ಕೂಡ ಉಗ್ರರೆಂದುಕೊಂಡು ಜೋರಾಗಿ ಕಿರುಚಾಡಿದ ದೃಶ್ಯಗಳನ್ನು ನಾನು ಮರೆಯಲು ಸಾಧ್ಯವಿಲ್ಲ. ಬೈಸರನ್‌ನಲ್ಲಿ ಜನರನ್ನು ಕೊಂದ ಸೈನಿಕನ ಸಮವಸ್ತ್ರ ಧರಿಸಿದ ಭಯೋತ್ಪಾದಕ ತಮ್ಮನ್ನು ಕೂಡ ಕೊಲ್ಲುತ್ತಾನೆ ಎಂದು ಅವರು ಭಾವಿಸಿದ್ದರು. ಆ ಸೈನಿಕನು ನಾವು ಭಾರತೀಯ ಸೈನಿರು, ಇಲ್ಲಿ ನೀವು ಸುರಕ್ಷಿತರಾಗಿದ್ದೀರಿ, ನಾವು ನಿಮ್ಮನ್ನು ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿದರೂ ಅವರು ನಂಬುವ ಸ್ಥಿತಿಯಲ್ಲಿರಲಿಲ್ಲ” ಎಂದು ಗೌರವ್ ಸದನದಲ್ಲಿ ಹೇಳಿದ್ದಾರೆ.
#WATCH | Speaking in debate on Operation Sindoor, Congress MP Gaurav Gogoi says, “It has been 100 days since the Pahalgam attack took place, but this Govt has not been able to catch those 5 terrorists… Today, you have drones, Pegasus, satellites, CRPF, BSF, CISF and the Defence… pic.twitter.com/U8olcdW9Pb
— ANI (@ANI) July 28, 2025
ಕದನವಿರಾಮ ನಿರ್ಧಾರದ ಬಗ್ಗೆ ಗೊಗೊಯ್ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ್ದಾರೆ. ಕದನ ವಿರಾಮದ ಹಠಾತ್ ಘೋಷಣೆಯ ಬಗ್ಗೆ ಗೊಗೊಯ್ ಕೂಡ ಪ್ರಶ್ನೆಗಳನ್ನು ಎತ್ತಿದರು. “ಪಹಲ್ಗಾಮ್ ದಾಳಿಯ ಬಗ್ಗೆ ಕೇಂದ್ರ ಸರ್ಕಾರ ತೆಗೆದುಕೊಂಡು ಆಪರೇಷನ್ ಸಿಂಧೂರ ಎಂಬ ದಿಟ್ಟ ನಿಲುವಿನ ಬಗ್ಗೆ ಇಡೀ ದೇಶ ಮತ್ತು ವಿರೋಧ ಪಕ್ಷಗಳು ಪ್ರಧಾನಿ ಮೋದಿ ಅವರನ್ನು ಬೆಂಬಲಿಸುತ್ತಿದ್ದವು. ಆದರೆ, ಮೇ 10ರಂದು ಇದ್ದಕ್ಕಿದ್ದಂತೆ ಕದನ ವಿರಾಮ ಜಾರಿಗೆ ಬಂದಿದೆ ಎಂದು ನಮಗೆ ತಿಳಿಯಿತು. ಏಕೆ? ಪಾಕಿಸ್ತಾನ ಮಂಡಿಯೂರಲು ಸಿದ್ಧವಾಗಿದ್ದರೆ ನೀವು ಏಕೆ ಯುದ್ಧ ನಿಲ್ಲಿಸಿದಿರಿ? ನೀವು ಯಾರಿಗೆ ಶರಣಾಗಿದ್ದೀರಿ ಎಂದು ನಾವು ಪ್ರಧಾನಿ ಮೋದಿಯಿಂದ ತಿಳಿದುಕೊಳ್ಳಲು ಬಯಸುತ್ತಿದ್ದೇವೆ. ಭಾರತ ಮತ್ತು ಪಾಕಿಸ್ತಾನಕ್ಕೆ ಕದನ ವಿರಾಮ ಘೋಷಿಸುವಂತೆ ಒತ್ತಾಯಿಸಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ 26 ಬಾರಿ ಹೇಳಿದ್ದಾರೆ.” ಎಂದು ಗೌರವ್ ವಾಗ್ದಾಳಿ ನಡೆಸಿದ್ದಾರೆ.
#WATCH | Speaking in debate on Operation Sindoor, Congress MP Gaurav Gogoi says, “In the end, who takes the responsibility of the Pahalgam attack? The LG of Jammu and Kashmir. If someone needs to take the responsibility, it is the Union Home Minister. Union HM and the Central… pic.twitter.com/Wk9f3h4y0Y
— ANI (@ANI) July 28, 2025
ಕಾಂಗ್ರೆಸ್ ಸಂಸದ ಗೌರವ್ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಎಷ್ಟು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಪ್ರಶ್ನಿಸಿದರು. ಸತ್ಯವನ್ನು ಸಾರ್ವಜನಿಕರೊಂದಿಗೆ ಮಾತ್ರವಲ್ಲದೆ ಸಶಸ್ತ್ರ ಪಡೆಗಳೊಂದಿಗೆ ಹಂಚಿಕೊಳ್ಳಬೇಕು ಎಂದು ಒತ್ತಿ ಹೇಳಿದರು. “ನಮ್ಮ ಎಷ್ಟು ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಇಂದು ನಾವು ರಾಜನಾಥ್ ಸಿಂಗ್ ಅವರಿಂದ ತಿಳಿದುಕೊಳ್ಳಲು ಬಯಸುತ್ತೇವೆ. ಇದನ್ನು ಸಾರ್ವಜನಿಕರಿಗೆ ಮಾತ್ರವಲ್ಲದೆ ನಮ್ಮ ಸೈನಿಕರಿಗೂ ಹೇಳಬೇಕಾಗಿದೆ, ಏಕೆಂದರೆ ಅವರಿಗೂ ಸುಳ್ಳು ಹೇಳಲಾಗುತ್ತಿದೆ” ಎಂದು ಗೊಗೊಯ್ ಹೇಳಿದ್ದಾರೆ.
ಇದಕ್ಕೆ ಉತ್ತರಿಸಿದ ರಾಜನಾಥ್ ಸಿಂಗ್, ಭಾರತದ ಎಷ್ಟು ಜೆಟ್ಗಳನ್ನು ಹೊಡೆದುರುಳಿಸಲಾಗಿದೆ ಎಂಬ ಪ್ರಶ್ನೆಗಳನ್ನು ಮಾತ್ರ ಕೇಳುತ್ತಿರುವ ಕಾಂಗ್ರೆಸ್ ಒಮ್ಮೆ ಕೂಡ ನಮ್ಮ ಸೈನಿಕರು ಪಾಕಿಸ್ತಾನದ ಎಷ್ಟು ಜೆಟ್ಗಳನ್ನು ಹೊಡೆದುರುಳಿಸಿದ್ದಾರೆ, ಎಷ್ಟು ಉಗ್ರರನ್ನು ಕೊಂದಿದ್ದಾರೆ ಎಂಬುದರ ಬಗ್ಗೆ ಮಾತನಾಡಿಲ್ಲ ಎಂದು ಟೀಕಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




