India vs Pakistan: ಭಾರತದ ಗಡಿ ಔಟ್​ಪೋಸ್ಟ್ ನಿರ್ಮಾಣಕ್ಕೆ ಪಾಕಿಸ್ತಾನ ತಕರಾರು

|

Updated on: Feb 14, 2023 | 7:52 AM

Pakistan Objects To India's Border Outpost: ಗುಜರಾತ್​ನ ಪಾಕ್ ಗಡಿಭಾಗದ ಬಳಿ ಆಯಕಟ್ಟಿನ ಜಾಗದಲ್ಲಿ ಭಾರತ ಮೂರು ಬಾರ್ಡರ್ ಔಟ್​ಪೋಸ್ಟ್​ಗಳನ್ನು ನಿರ್ಮಿಸುತ್ತಿದೆ. ಅದರಲ್ಲಿ ಸಮುದ್ರ ಬೆಟ್ ಜಾಗದಲ್ಲಿನ ಔಟ್​ಪೋಸ್ಟ್ ನಿರ್ಮಾಣಕ್ಕೆ ಪಾಕಿಸ್ತಾನ ಆಕ್ಷೇಪ ಸಲ್ಲಿಸಿದೆ. ಈ ಜಾಗ ತನಗೆ ಸೇರಿದ್ದೆಂಬುದು ಅದರ ವಾದ.

India vs Pakistan: ಭಾರತದ ಗಡಿ ಔಟ್​ಪೋಸ್ಟ್ ನಿರ್ಮಾಣಕ್ಕೆ ಪಾಕಿಸ್ತಾನ ತಕರಾರು
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಪಾಕಿಸ್ತಾನದ ಗಡಿಭಾಗಕ್ಕೆ ಹೊಂದಿಕೊಂಡಿರುವ ಗುಜರಾತ್​ನ ಸರ್ ಕ್ರೀಕ್ (Sir Creek) ಎಂಬಲ್ಲಿ ಭಾರತ ಬಾರ್ಡರ್ ಔಟ್​ಪೋಸ್ಟ್​ಗಳನ್ನು (BOP- Border Outpost) ನಿರ್ಮಿಸಿದೆ. ಇದು ವಿವಾದಿತ ಜಾಗವಾಗಿದ್ದು, ಇಲ್ಲಿ ಔಟ್​ಪೋಸ್ಟ್ ನಿರ್ಮಿಸಬಾರದು ಎಂದು ಪಾಕಿಸ್ತಾನ ತಕರಾರು ತೆಗೆದಿದೆ. ಔಟ್​ಪೋಸ್ಟ್​​ಗಳನ್ನು ಭಾರತದ ಗಡಿಭಾಗದ ಒಳಗೆಯೇ ನಿರ್ಮಿಸಲಾಗಿದೆ ಎಂದು ಭಾರತ ಉತ್ತರ ನೀಡಿದೆ. ಇದು ಕಳೆದ ತಿಂಗಳು ನಡೆದಿರುವ ವಿದ್ಯಮಾನ.

ಜನವರಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಸ್ಥಳೀಯ ಕಮಾಂಡರ್ ಮಟ್ಟದಲ್ಲಿ ಭೇಟಿ ನಡೆದಿತ್ತು. ಬಿಎಸ್​ಎಫ್ ಜೊತೆ ಪಾಕಿಸ್ತಾನದ ಗಡಿಭದ್ರತಾ ಅಧಿಕಾರಿಗಳು ಮಾತುಕತೆ ನಡೆಸಿ ಸಮುದ್ರ ಬೆಟ್ ಪ್ರದೇಶದಲ್ಲಿ ಭಾರತ ಗಡಿ ಔಟ್​ಪೋಸ್ಟ್​ಗಳನ್ನು ನಿರ್ಮಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು ಎಂದು ಬಿಎಸ್​ಎಫ್ ಅಧಿಕಾರಿಗಳ ಹೇಳಿಕೆಯನ್ನಾಧರಿಸಿ ಸಿಎನ್​ಎನ್ ನ್ಯೂಸ್18 ವರದಿ ಮಾಡಿದೆ.

ಈಗ ಗಡಿ ಔಟ್​ಪೋಸ್ಟ್ ನಿರ್ಮಾಣವಾಗುತ್ತಿರುವ ಜಾಗದ ಬಳಿ ಇರುವ ಜಲಮಾರ್ಗದಲ್ಲಿ ಭಾರತ ಮೊದಲಿಂದಲೂ ಪಹರೆ ನಡೆಸುತ್ತಾ ಬಂದಿದೆ. ಈಗ ಪಾಕಿಸ್ತಾನ ಈ ಜಾಗ ಭಾರತಕ್ಕೆ ಸೇರಿದ್ದಲ್ಲ ಎಂದು ಹೇಳುತ್ತಿದೆ ಎಂಬುದು ಭಾರತೀಯ ಅಧಿಕಾರಿಗಳ ಹೇಳಿಕೆ.

ಇದನ್ನೂ ಓದಿ: New Zealand: ಗೇಬ್ರಿಯೆಲ್ ಚಂಡಮಾರುತ; ರಾಷ್ಟ್ರೀಯ ತುರ್ತುಸ್ಥಿತಿ ಘೋಷಣೆ; ಕತ್ತಲಲ್ಲಿ ಮುಳುಗಿದ ನ್ಯೂಜಿಲೆಂಡ್

ಸರ್ ಕ್ರೀಕ್ ಜಾಗದಲ್ಲಿ ಎಂಟು ಅಂತಸ್ತಿನ ಬಂಕರುಗಳು ಮತ್ತು ವೀಕ್ಷಣಾ ಗೋಪುರವನ್ನು ನಿರ್ಮಿಸಲು ಕೇಂದ್ರ ಗೃಹ ಸಚಿವಾಲಯ 50 ಕೋಟಿ ರೂ ನೀಡಿದೆ. ಈ ಜಾಗದಲ್ಲಿ ಪಾಕಿಸ್ತಾನೀ ಮೀನುಗಾರಿಕಾ ದೋಣಿಗಳು ಭಾರತದ ಭಾಗದೊಳಗೆ ಆಗಾಗ್ಗೆ ನುಸುಳಿ ಬರುವುದು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಔಟ್ ಪೋಸ್ಟ್ ಅನ್ನು ನಿರ್ಮಿಸಲು ಭಾರತ ಹೊರಟಿರುವುದು ತಿಳಿದುಬಂದಿದೆ.

ಗುಜರಾತ್​ನ ಪಾಕಿಸ್ತಾನದ ಗಡಿಭಾಗದ ಬಳಿ ಆಯಕಟ್ಟಿನ ಜಾಗದಲ್ಲಿ ಮೂರು ಬಾರ್ಡರ್ ಔಟ್​ಪೋಸ್ಟ್​ಗಳನ್ನು ನಿರ್ಮಿಸುತ್ತಿದೆ. ಲಾಖಪತ್ ವಾರಿ ಬೆಟ್, ಡಫಾ ಬೆಟ್ ಮತ್ತು ಸಮುದ್ರ ಬೆಟ್, ಇವು ಪಾಕಿಸ್ತಾನದ ಗಡಿಭಾಗವನ್ನು ಬಹಳ ನಿಕಟವಾಗಿ ಗಮನಿಸಲು ಅನುಕೂಲ ಮಾಡಿಕೊಡುತ್ತದೆ.

ಇದನ್ನೂ ಓದಿ: Pulwama Terror Attack: ಪುಲ್ವಾಮಾ ದಾಳಿ ಕರಾಳ ಘಟನೆಗೆ 4 ವರ್ಷ; ಎಂದೂ ಮರೆಯದ ಭಯಾನಕ ಘಟನೆಯ ಕುರಿತ 10 ಸಂಗತಿಗಳು

ಸಮುದ್ರ ಬೆಟ್ ಜಾಗವು ಒಂದು ದ್ವೀಪ ಪ್ರದೇಶದಲ್ಲಿದೆ. ಇದು ತನಗೆ ಸೇರಿದ ಜಾಗ ಎಂಬುದು ಪಾಕಿಸ್ತಾನದ ವಾದ. ಆದರೆ, ಈ ಮೂರು ಬಾರ್ಡರ್ ಔಟ್​ಪೋಸ್ಟ್​ಗಳು ಭಾರತಕ್ಕೆ ಬಹಳ ಅಗತ್ಯ ಇದೆ. ಕಳೆದ ವರ್ಷ ಭಾರತದ ಭಾಗದೊಳಗೆ 22 ಪಾಕಿಸ್ತಾನೀ ಮೀನುಗಾರರು, 79 ಮೀನುಗಾರಿಕೆ ದೋಣಿಗಳು ನುಸುಳಿದ್ದವು. 250 ಕೋಟಿ ರೂ ಮೌಲ್ಯದ ಹೆರಾಯಿನ್ ಮಾದಕವಸ್ತುಗಳನ್ನು ಬಿಎಸ್​ಎಫ್ ಅಧಿಕಾರಿಗಳು ಜಫ್ತಿ ಮಾಡಿದ್ದಾರೆ. ಮೀನುಗಾರಿಕೆಯ ಸೋಗಿನಲ್ಲಿ ಉಗ್ರರು ನುಸುಳಿ ಬರುವ ಸಾಧ್ಯತೆ ಹೆಚ್ಚು. ಹೀಗಾಗಿ, ಇವರ ಮೇಲೆ ಸರಿಯಾದ ಕಣ್ಣಿಡಲು ಆ ಮೂರು ಬಾರ್ಡರ್ ಔಟ್​ಪೋಸ್ಟ್​ಗಳು ಅವಶ್ಯಕ ಎನ್ನುತ್ತಾರೆ ಗಡಿ ಭದ್ರತಾ ಅಧಿಕಾರಿಗಳು.

Published On - 7:52 am, Tue, 14 February 23