ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಇಂದು (ಮಾರ್ಚ್ 31) ಕೊನೇ ದಿನ. ಇನ್ನೂ ನೀವು ಯಾರಾದರೂ ಈ ಕೆಲಸ ಬಾಕಿ ಇಟ್ಟುಕೊಂಡಿದ್ದರೆ ಇಂದೇ ಮುಗಿಸಿಕೊಂಡುಬಿಡಿ. ಇಂದು ಮಧ್ಯರಾತ್ರಿವರೆಗೆ ಅವಕಾಶವಿದ್ದು, ಆದಾಗ್ಯೂ ಯಾರಾದರೂ ಲಿಂಕ್ ಮಾಡಿಕೊಳ್ಳದೆ ಹೋದರೆ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. 1000 ರೂ.ವರೆಗೆ ದಂಡ ತುಂಬಬೇಕಾಗುತ್ತದೆ.. ಅಷ್ಟೇ ಅಲ್ಲ, ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ.
ಆಧಾರ್ ಮತ್ತು ಪಾನ್ಕಾರ್ಡ್ ಲಿಂಕ್ ಮಾಡದವರಿಗೆ, 1961ರ ಆದಾಯ ತೆರಿಗೆ ಕಾಯ್ದೆಯ ಹೊಸ ಸೆಕ್ಷನ್ 234ಎಚ್ನಡಿ ದಂಡ ವಿಧಿಸಲಾಗುವುದು ಎಂದು ಮಾರ್ಚ್ 23ರಂದು ಲೋಕಸಭೆಯಲ್ಲಿ ಫೈನಾನ್ಸ್ ಬಿಲ್ 2021ನ್ನು ಅಂಗೀಕಾರ ಮಾಡುವ ಸಂದರ್ಭದಲ್ಲಿ ಸರ್ಕಾರ ಸೂಚಿಸಿದೆ. ಕೊಟ್ಟ ಅವಧಿಯೊಳಗೆ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡದೆ ಇರುವವರಿಗೆ ದಂಡ ವಿಧಿಸಲಾಗುವುದು. ದಂಡದ ಮೊತ್ತ 1000 ರೂ.ದಿಂದ ಪ್ರಾರಂಭವಾಗುತ್ತದೆ. ಇದು ಹೆಚ್ಚು ಆಗಬಹುದು ಎಂದು 1961ರ ಕಾಯ್ದೆಯ ಸೆಕ್ಷನ್ 234ಎಚ್ನಡಿ ಸ್ಪಷ್ಟವಾಗಿ ಹೇಳಲಾಗಿದೆ. ಹಾಗೇ, ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದ್ದು, ಮುಂದೆ ಕೆಲವು ರೀತಿಯ ಹಣಕಾಸು ವ್ಯವಹಾರಕ್ಕೆ ತೊಂದರೆಯಾಗಲಿದೆ.
ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಈಗಾಗಲೇ ಕೇಂದ್ರ ಸರ್ಕಾರ ಸಾಕಷ್ಟು ಸಮಯ ನೀಡಿತ್ತು. ಡೆಡ್ಲೈನ್ ಅವಧಿಯನ್ನು ವಿಸ್ತರಿಸುತ್ತ ಬಂದಿತ್ತು. ಅದಾದ ಮೇಲೆ 2021ರ ಮಾರ್ಚ್ 31 ಲಾಸ್ಟ್ ಡೇಟ್ ಎಂದು ಖಡಾಖಂಡಿತವಾಗಿ ಹೇಳಿದೆ.
ಪಾನ್ಕಾರ್ಡ್ ನಿಷ್ಕ್ರಿಯ ಆದ್ರೆ ಏನಾಗತ್ತೆ?
ನೀವು ಇಂದು ಆಧಾರ್ ಕಾರ್ಡ್-ಪಾನ್ ಕಾರ್ಡ್ ಲಿಂಕ್ ಮಾಡದೆ ಕೊಳ್ಳದೆ ಇದ್ದರೆ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯ ಆಗುತ್ತದೆ. ಹಾಗೊಮ್ಮೆ ಪಾನ್ ಕಾರ್ಡ್ ನಿಷ್ಕ್ರಿಯ ಆದರೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಬ್ಯಾಂಕಿಂಗ್ ವ್ಯವಹಾರಗಳಿಗೆ ತೊಡಕಾಗುತ್ತದೆ. ಯಾವುದೇ ಬ್ಯಾಂಕ್ಗಳಲ್ಲಿ 50,000 ರೂ.ಗೂ ಮೇಲ್ಪಟ್ಟು ಹಣದ ವ್ಯವಹಾರ ಮಾಡುವಾಗ ಪಾನ್ ನಂಬರ್ ಬೇಕಾಗುತ್ತದೆ. ಒಮ್ಮೆ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯ ಗೊಂಡಿದ್ದರೆ ನಿಮಗೇನಾದರೂ ಎಮರ್ಜನ್ಸಿ ಇದ್ದಾಗ ಹಣ ತೆಗೆಯಲಾಗದೆ, ಅಥವಾ ಬೇರೆಯವರ ಖಾತೆಗೆ ಹಾಕಲಾಗದೆ ಪರದಾಡಬೇಕಾಗುತ್ತದೆ.
ಇನ್ನು ಐಟಿ ರಿಟರ್ನ್ ಮಾಡಲು ಸಾಧ್ಯವಾಗುವುದಿಲ್ಲ. ಹಾಗೇ ಯಾವುದೇ ಬ್ಯಾಂಕ್ ಅಕೌಂಟ್ನಲ್ಲಿ ಹೊಸ ಖಾತೆ ತೆರೆಯಲೂ ಸಾಧ್ಯವಾಗುವುದಿಲ್ಲ. ಹೆಚ್ಚಿನ ಮೊತ್ತದ ಟಿಡಿಎಸ್ ಪಾವತಿಸಬೇಕಾಗುತ್ತದೆ. ಇನ್ನು ಐಟಿ ರಿಟರ್ನ್ ವೇಳೆಯಲ್ಲಿ ಪಾನ್ ನಂಬರ್ ಒದಗಿಸದೆ ಇದ್ದರೆ 10,000 ರೂ.ವರೆಗೂ ದಂಡ ವಿಧಿಸಬಹದು. 1000 ರೂ. ಆಗಲೀ, 10 ಸಾವಿರವೇ ಆಗಲಿ.. ಮೌಲ್ಯ ಇದ್ದೇ ಇದೆ ತಾನೇ? ಯಾಕೆ ಸುಮ್ಮನೆ ದಂಡಕ್ಕಾಗಿ ಅದನ್ನು ಖಾಲಿ ಮಾಡುತ್ತೀರಿ. ಇಂದೇ ಆಧಾರ್ ಪಾನ್ ಲಿಂಕ್ ಮಾಡಿಕೊಳ್ಳಿ.
Published On - 3:57 pm, Wed, 31 March 21