ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ: ರೋಗ ಇಲ್ಲದಿದ್ದರೂ ಲಸಿಕೆ ಪಡೆಯಲು ಅವಕಾಶ
ಏಪ್ರಿಲ್ 1 ರಿಂದ 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದ್ದು ರೋಗ ಇಲ್ಲದಿದ್ದರೂ ಲಸಿಕೆ ಪಡೆಯಲು ಅವಕಾಶ ನೀಡಲಾಗಿದೆ. ಕೋವಿನ್ ಪೋರ್ಟಲ್ನಲ್ಲಿ ಹೆಸರು ನೋಂದಾಯಿಸಬಹುದಾಗಿದೆ.
ದೆಹಲಿ: ದೇಶದಲ್ಲಿ ನಾಳೆಯಿಂದ (ಏಪ್ರಿಲ್ 1 ರಿಂದ ) 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ಲಸಿಕೆ ನೀಡಿಕೆ ಅಭಿಯಾನ ಶುರುವಾಗಲಿದೆ. ಭಾರತ ಹಾಗೂ ಜಗತ್ತಿನಲ್ಲಿ ಕೊರೊನಾ ವೈರಸ್ನ ಎರಡನೇ ಅಲೆ ಶುರುವಾಗುತ್ತಿದೆ. ಹೀಗಾಗಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಲಸಿಕೆ ಪಡೆಯ ಬಯಸುವವರು ಕೋವಿನ್ ಪೋರ್ಟಲ್ನಲ್ಲಿ ತಮ್ಮ ಹೆಸರು ರಿಜಿಸ್ಟರ್ ಮಾಡಿಕೊಳ್ಳಬೇಕು.
ರೋಗ ಇಲ್ಲದಿದ್ದರೂ ಲಸಿಕೆ ಪಡೆಯಲು ಅವಕಾಶ ಭಾರತದಲ್ಲಿ ಈಗ ಕೊರೊನಾದ ಎರಡನೇ ಅಲೆಯ ಅಬ್ಬರ ಶುರುವಾಗಿದೆ. ಕೊರೊನಾದ ಹೊಡೆತದಿಂದ ತಪ್ಪಿಸಿಕೊಳ್ಳಲು ಕೊರೊನಾ ಲಸಿಕೆಯೇ ರಾಮಬಾಣ. ಆದರೆ, ಲಸಿಕೆ ಲಭ್ಯವಿದ್ದರೂ, ಜನರು ಲಸಿಕೆ ಪಡೆಯಲು ಸ್ವಪ್ರೇರಣೆಯಿಂದ ಮುಂದೆ ಬರುತ್ತಿಲ್ಲ. ಇದುವರೆಗೂ ದೇಶದಲ್ಲಿ 45 ವರ್ಷ ಮೇಲ್ಪಟ್ಟ ಬೇರೆ ಬೇರೆ ರೋಗದಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲಾಗುತ್ತಿದೆ. ಜೊತೆಗೆ ಮೊದಲನೇ ಹಂತದಲ್ಲಿ, ದೇಶದಲ್ಲಿ ಜನವರಿ 16 ರಿಂದ, ಆರೋಗ್ಯ ಕಾರ್ಯಕರ್ತರು, ಫ್ರಂಟ್ ಲೈನ್ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ. ಬಳಿಕ ಮಾರ್ಚ್ 1 ರಿಂದ 60 ವರ್ಷ ಮೇಲ್ಪಟ್ಟವರು, ರೋಗದಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಆದರೂ ಕೂಡ ದೇಶದಲ್ಲಿ ಮಾರ್ಚ್ 30ರ ಸಂಜೆ 7 ಗಂಟೆಯವರೆಗೂ 6.24 ಕೋಟಿ ಜನರು ಮಾತ್ರ ಕೊರೊನಾ ಲಸಿಕೆ ಪಡೆದಿದ್ದಾರೆ.
ದೇಶದಲ್ಲಿ ಹೆಚ್ಚಿನ ಜನರಿಗೆ ಲಸಿಕೆ ನೀಡಿ, ಕೊರೊನಾದಿಂದ ರಕ್ಷಣೆ ನೀಡಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ದೇಶದಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ನಿರ್ಧರಿಸಿದೆ. ಈ ಬಗ್ಗೆ ಕೇಂದ್ರದ ಕ್ಯಾಬಿನೆಟ್ ಸಭೆಯಲ್ಲಿ ಹದಿನೈದು ದಿನದ ಹಿಂದೆಯೇ ಒಪ್ಪಿಗೆ ನೀಡಲಾಗಿದೆ. ನಾಳೆಯಿಂದ ದೇಶಾದ್ಯಂತ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೊರೊನಾ ವೈರಸ್ ವಿರುದ್ಧದ ಲಸಿಕೆ ನೀಡಲಾಗುತ್ತದೆ. 45 ವರ್ಷ ಮೇಲ್ಪಟ್ಟಿದ್ದು, ರೋಗಗಳಿಂದ ಬಳಲದೇ ಇದ್ದರೂ ಲಸಿಕೆ ನೀಡಲಾಗುತ್ತೆ. ಜನವರಿ 1, 1977ಕ್ಕಿಂತ ಮುಂಚೆ ಹುಟ್ಟಿದ ಎಲ್ಲರಿಗೂ ಕೊರೊನಾ ಲಸಿಕೆ ನೀಡಲಾಗುತ್ತದೆ.
ಕೋವಿನ್ ಪೋರ್ಟಲ್ನಲ್ಲಿ ಹೆಸರು ನೋಂದಾಯಿಸಿ ಕೊರೊನಾ ಲಸಿಕೆ ಪಡೆಯಲು 45 ವರ್ಷ ಮೇಲ್ಪಟ್ಟವರು ಕೋವಿನ್ ಪೋರ್ಟಲ್ನಲ್ಲಿ ತಮ್ಮ ಹೆಸರು, ವಿವರ ರಿಜಿಸ್ಟರ್ ಮಾಡಿಕೊಳ್ಳಬೇಕು. ಕೋವಿನ್ ಪೋರ್ಟಲ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ತಮ್ಮ ಹತ್ತಿರದ ಕೊರೊನಾ ಲಸಿಕೆ ನೀಡಿಕೆ ಕೇಂದ್ರಕ್ಕೆ ಮಧ್ಯಾಹ್ನ 3 ಗಂಟೆಯ ನಂತರ ಹೋಗಿ ಸ್ಥಳದಲ್ಲೇ ರಿಜಿಸ್ಟರ್ ಮಾಡಿಸಿಕೊಳ್ಳಬಹುದು ಎಂದು ಕೇಂದ್ರದ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಡಾ. ರಾಜೇಶ್ ಭೂಷಣ್ ಹೇಳಿದ್ದಾರೆ. ಹೆಚ್ಚಿನ ಜನರಿಗೆ ಲಸಿಕೆ ನೀಡುವ ಮೂಲಕ ಕೊರೊನಾ ವೈರಸ್ ವಿರುದ್ಧದ ಸಮರದಲ್ಲಿ ಭಾರತ ಮೇಲುಗೈ ಸಾಧಿಸಬೇಕೆಂಬ ಉದ್ದೇಶದಿಂದ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ಹಣ ನೀಡಬೇಕಾಗಿಲ್ಲ. 10 ಸಾವಿರಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಲ್ಲೂ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆಯಲು ಪ್ರತಿ ಡೋಸ್ ಗೆ 250 ರೂಪಾಯಿ ನೀಡಬೇಕು. ದೇಶದಲ್ಲಿ ಈಗ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಹೆಸರಿನ ಎರಡು ಲಸಿಕೆಗಳನ್ನು ಜನರಿಗೆ ನೀಡಲಾಗುತ್ತಿದೆ. ಎರಡು ಲಸಿಕೆಗಳು ಸುರಕ್ಷಿತ ಹಾಗೂ ಕೊರೊನಾ ವೈರಸ್ ವಿರುದ್ಧ ಪರಿಣಾಮಕಾರಿ ಎಂದು ಕೇಂದ್ರ ಸರ್ಕಾರ ಹೇಳಿದೆ.
ದೇಶದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಸಕ್ರಿಯ ಪ್ರಕರಣ ಭಾರತದಲ್ಲಿ ಕೆಲ ದಿನಗಳ ಹಿಂದೆ ಶೇ.97 ರಿಂದ 98 ರಷ್ಟು ಜನ ಕೊರೊನಾದಿಂದ ಗುಣಮುಖರಾಗಿದ್ದರು. ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಒಂದೂವರೆ ಲಕ್ಷದಷ್ಟಿತ್ತು. ಆದರೆ ಈಗ ದೇಶದಲ್ಲಿ 5,52,566 ಕೊರೊನಾ ಸಕ್ರಿಯ ಪ್ರಕರಣಗಳಿವೆ. ಶೇ. 4.55 ರಷ್ಟು ಕೊರೊನಾ ಸಕ್ರಿಯ ಕೇಸ್ಗಳಿವೆ. ಕೊರೊನಾದ ಸಕ್ರಿಯ ಪ್ರಕರಣಗಳ ಸಂಖ್ಯೆ ಏರಿಕೆಯಾದಂತೆ, ಕೊರೊನಾದಿಂದ ಗುಣಮುಖರಾದವರ ಪ್ರಮಾಣ ಕುಸಿಯುತ್ತಿದೆ. ಕೊರೊನಾದಿಂದ ಶೇ.97 ರಷ್ಟು ಗುಣಮುಖರಾಗಿದ್ದ ಭಾರತದಲ್ಲಿ ಈಗ ಗುಣಮುಖರಾದವರ ಪ್ರಮಾಣ ಶೇ.94.11 ರಷ್ಟಿಗೆ ಕುಸಿದಿದೆ.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಕೊರೊನಾ ರೋಗಿಗಳಿಗೆ ಆಸ್ಪತ್ರೆಯಲ್ಲಿ ಬೆಡ್ಗಳು ಸಿಗದ ಸ್ಥಿತಿ ನಿರ್ಮಾಣವಾಗಿದೆ. ಒಂದೇ ಬೆಡ್ನಲ್ಲಿ ಇಬ್ಬರು ರೋಗಿಗಳು ಚಿಕಿತ್ಸೆ ಪಡೆಯುತ್ತಿರೋದು ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಕಳೆದ ವರ್ಷ ಕೂಡ ಮಹಾರಾಷ್ಟ್ರದಲ್ಲಿ ಇದೇ ರೀತಿಯಾದ ಪರಿಸ್ಥಿತಿ ಇತ್ತು. ಈಗಲೂ ದೇಶದಲ್ಲಿ ಅತಿ ಹೆಚ್ಚು ಹೊಸ ಕೊರೊನಾ ಕೇಸ್ ಪತ್ತೆಯಾಗುತ್ತಿರುವುದು ಕೂಡ ಮಹಾರಾಷ್ಟ್ರ ರಾಜ್ಯದಲ್ಲೇ ಎನ್ನುವುದು ವಿಶೇಷ. ದೇಶದಲ್ಲಿ ಈಗ ಅತಿ ಹೆಚ್ಚು ಕೊರೊನಾ ಸಕ್ರಿಯ ಕೇಸ್ಗಳಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ ಕೇರಳವನ್ನು ಹಿಂದಿಕ್ಕಿ ಎರಡನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಮಾರ್ಚ್ 30ರ ಸಂಜೆಯವರೆಗೂ 25,541 ಕೊರೊನಾ ಸಕ್ರಿಯ ಕೇಸ್ ಗಳಿವೆ. ಕರ್ನಾಟಕದಲ್ಲಿ ನಿತ್ಯ ಸರಾಸರಿ 2 ರಿಂದ 3ಸಾವಿರ ಹೊಸ ಕೇಸ್ ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಮಾಜಿ ಪ್ರಧಾನಿ ದೇವೇಗೌಡರಿಗೆ ಕೊರೊನಾ: ನಿಮ್ಮ ಆಯ್ಕೆಯ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿರಿ ಎಂದ ಪ್ರಧಾನಿ ಮೋದಿ
ಹೆಚ್ಚಿದ ಕೊರೊನಾ ಪ್ರಕರಣ; ಅಹಮದಾಬಾದ್ನಲ್ಲಿ ಮಾಲ್, ಚಿತ್ರಮಂದಿರಗಳು ಬಂದ್