IPL 2025: ಕೊಹ್ಲಿಯ ಟಿ20 ದಾಖಲೆಯನ್ನು ಧ್ವಂಸಗೊಳಿಸಿದ ಕೆಎಲ್ ರಾಹುಲ್
KL Rahul Achieves 8000 T20 Runs: ಐಪಿಎಲ್ 2025ರ 50ನೇ ಪಂದ್ಯದಲ್ಲಿ, ಕೆಎಲ್ ರಾಹುಲ್ ಅವರು ಅದ್ಭುತ ಶತಕದೊಂದಿಗೆ 8000 ಟಿ20 ರನ್ ಪೂರ್ಣಗೊಳಿಸಿದರು. ಇದು ಟಿ20 ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಆರನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಯನ್ನು ತಂದುಕೊಟ್ಟಿದೆ. ಅಲ್ಲದೆ, ಈ ಸಾಧನೆಯನ್ನು ಅತಿ ವೇಗವಾಗಿ ಪೂರ್ಣಗೊಳಿಸಿದ್ದು, ವಿರಾಟ್ ಕೊಹ್ಲಿ ಅವರ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.
ಐಪಿಎಲ್ 2025 ರ 50ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಪರ ಕೆಎಲ್ ರಾಹುಲ್ ಆರಂಭಿಕನಾಗಿ ಬಂದು ಅದ್ಭುತ ಶತಕದ ಇನ್ನಿಂಗ್ಸ್ ಆಡಿದರು. 65 ಎಸೆತಗಳಲ್ಲಿ 112 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದ್ದ ರಾಹುಲ್, 33 ರನ್ ಬಾರಿಸಿದ ತಕ್ಷಣ ಇತಿಹಾಸ ಸೃಷ್ಟಿಸಿದರು. ವಾಸ್ತವವಾಗಿ ಈ 33 ರನ್ಗಳೊಂದಿಗೆ ರಾಹುಲ್, ಟಿ20 ಕ್ರಿಕೆಟ್‌ನಲ್ಲಿ 8000 ರನ್ ಪೂರ್ಣಗೊಳಿಸಿದರು. ಈ ಮೂಲಕ ಟಿ20ಯಲ್ಲಿ ಈ ದಾಖಲೆ ಬರೆದ ಆರನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ರಾಹುಲ್ಗೂ ಮುನ್ನ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಸುರೇಶ್ ರೈನಾ ಮತ್ತು ಸೂರ್ಯಕುಮಾರ್ ಯಾದವ್ ಈ ಸಾಧನೆ ಮಾಡಿದ್ದಾರೆ. ಅಲ್ಲದೆ ರಾಹುಲ್ 8000 ಟಿ20 ರನ್ ಪೂರೈಸಿದಲ್ಲದೆ, ವಿರಾಟ್ ಕೊಹ್ಲಿ ಅವರ ದೊಡ್ಡ ದಾಖಲೆಯನ್ನೂ ಮುರಿದರು.
ಕೊಹ್ಲಿ ದಾಖಲೆ ಮುರಿದ ರಾಹುಲ್
ವಾಸ್ತವವಾಗಿ ಟಿ20 ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 8000 ರನ್ ಪೂರೈಸಿದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ದಾಖಲೆ ಮೊದಲು ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಕೊಹ್ಲಿ 243 ಇನ್ನಿಂಗ್ಸ್‌ಗಳಲ್ಲಿ ಈ ದಾಖಲೆ ಸೃಷ್ಟಿಸಿದ್ದರು. ಆದರೆ ರಾಹುಲ್ ಅವರನ್ನು ಹಿಂದಿಕ್ಕಿ ಕೇವಲ 224 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಆದಾಗ್ಯೂ ರಾಹುಲ್ಗೆ ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಆಝಂ ಅವರನ್ನು ಹಿಂದಿಕ್ಕಲು ಸಾಧ್ಯವಾಗಲಿಲ್ಲ. ಬಾಬರ್ 218 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದು, ಟಿ20 ಇತಿಹಾಸದಲ್ಲಿ ಅತಿ ವೇಗವಾಗಿ 8000 ರನ್ ಪೂರೈಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ವಿಷಯದಲ್ಲಿ ಕೆಎಲ್ ರಾಹುಲ್ ಎರಡನೇ ಸ್ಥಾನದಲ್ಲಿದ್ದಾರೆ.