AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: ಡೆಲ್ಲಿ ವಿರುದ್ಧ ಗೆದ್ದ ಗುಜರಾತ್; ಪ್ಲೇಆಫ್‌ಗೆ ಅರ್ಹತೆ ಪಡೆದ ಆರ್​ಸಿಬಿ

IPL 2025 Playoffs: ಶುಭ್ಮನ್ ಗಿಲ್ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 10 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿ ಐಪಿಎಲ್ 2025 ರ ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡಿದೆ. ಸಾಯಿ ಸುದರ್ಶನ್ ಅವರ ಅದ್ಭುತ ಶತಕ ಮತ್ತು ಗಿಲ್ ಅವರ 93 ರನ್‌ಗಳ ಅಜೇಯ ಇನ್ನಿಂಗ್ಸ್ ಈ ಗೆಲುವಿಗೆ ಪ್ರಮುಖ ಕಾರಣ. ಈ ಗೆಲುವಿನೊಂದಿಗೆ ಗುಜರಾತ್ ಮಾತ್ರವಲ್ಲದೆ ಆರ್​ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಕೂಡ ಪ್ಲೇಆಫ್‌ಗೆ ಅಧಿಕೃತವಾಗಿ ಅರ್ಹತೆ ಪಡೆದುಕೊಂಡಿವೆ.

IPL 2025: ಡೆಲ್ಲಿ ವಿರುದ್ಧ ಗೆದ್ದ ಗುಜರಾತ್; ಪ್ಲೇಆಫ್‌ಗೆ ಅರ್ಹತೆ ಪಡೆದ ಆರ್​ಸಿಬಿ
Gujarat
ಪೃಥ್ವಿಶಂಕರ
|

Updated on:May 18, 2025 | 11:33 PM

Share

ಶುಭ್​ಮನ್ ಗಿಲ್ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ತಂಡವು ತನ್ನ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸಿ ಐಪಿಎಲ್ 2025 (IPL 2025) ರ ಪ್ಲೇಆಫ್‌ಗೆ ಅರ್ಹತೆ ಪಡೆದುಕೊಂಡಿದೆ. ಸಾಯಿ ಸುದರ್ಶನ್ ಅವರ ಅದ್ಭುತ ಶತಕ ಮತ್ತು ನಾಯಕ ಶುಭ್​ಮನ್ ಗಿಲ್ ಅವರ ಅಜೇಯ 93 ರನ್‌ಗಳ ಇನ್ನಿಂಗ್ಸ್‌ನ ಬಲದಿಂದ ಗುಜರಾತ್ ತಂಡವು (GT), ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಕನ್ನಡಿಗ ಕೆಎಲ್ ರಾಹುಲ್ ಅವರ ಅಜೇಯ ಶತಕದ ನೆರವಿನಿಂದ 199 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಗುಜರಾತ್ ಇನ್ನೊಂದು ಓವರ್ ಬಾಕಿ ಇರುವಂತೆಯೇ ಗೆಲುವಿನ ದಡ ಮುಟ್ಟಿತು. ಈ ಗೆಲುವಿನೊಂದಿಗೆ ಗುಜರಾತ್ ಮಾತ್ರವಲ್ಲದೆ ಆರ್​ಸಿಬಿ (RCB) ಹಾಗೂ ಪಂಜಾಬ್ ಕಿಂಗ್ಸ್ ಕೂಡ ಪ್ಲೇಆಫ್‌ಗೆ ಅಧಿಕೃತವಾಗಿ ಅರ್ಹತೆ ಪಡೆದುಕೊಂಡಿವೆ.

ಮೇ 18 ರ ಭಾನುವಾರದಂದು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟಿಂಗ್ ಮಾಡಿತು. ತಂಡದ ಪರ ಕೆ.ಎಲ್. ರಾಹುಲ್ ಆರಂಭಿಕ ಆಟಗಾರನಾಗಿ ಮತ್ತೊಂದು ಅದ್ಭುತ ಇನ್ನಿಂಗ್ಸ್ ಆಡಿದರು. ಆದಾಗ್ಯೂ, ಪವರ್ ಪ್ಲೇನಲ್ಲಿ ನಿಧಾನಗತಿಯ ಆರಂಭದ ಪರಿಣಾಮಗಳನ್ನು ತಂಡವು ಅಂತಿಮವಾಗಿ ಅನುಭವಿಸಬೇಕಾಯಿತು. ಮೊದಲ 4 ಓವರ್‌ಗಳಲ್ಲಿ ಡೆಲ್ಲಿ ಕೇವಲ 19 ರನ್‌ಗಳನ್ನು ಮಾತ್ರ ಗಳಿಸಿದರೆ, ಇತ್ತ ಗುಜರಾತ್ ಪರ ಸುದರ್ಶನ್ ಮತ್ತು ಗಿಲ್ ತಮ್ಮ 4 ಓವರ್‌ಗಳಲ್ಲಿ 49 ರನ್‌ ಕಲೆಹಾಕಿದರು. ಇದು ಈ ಪಂದ್ಯದಲ್ಲಿ ದೊಡ್ಡ ವ್ಯತ್ಯಾಸವನ್ನುಂಟುಮಾಡಿತು. ಇದರಲ್ಲಿ ಗುಜರಾತ್ ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಅರ್ಷದ್ ಖಾನ್ ಪಾತ್ರ ವಹಿಸಿದ್ದಾರೆ ಎಂಬುದು ಸ್ಪಷ್ಟ.

ರಾಹುಲ್ ಶತಕ ವ್ಯರ್ಥ

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ತಂಡ 20 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 199 ರನ್ ಗಳಿಸಿತು. ದೆಹಲಿ ಪರ ಕೆಎಲ್ ರಾಹುಲ್ ಅಜೇಯ ಶತಕ ಗಳಿಸಿದರು. ರಾಹುಲ್ 65 ಎಸೆತಗಳಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ ಅಜೇಯ 112 ರನ್ ಗಳಿಸಿದರು. ಇವರಲ್ಲದೆ, ಅಭಿಷೇಕ್ ಪೊರೆಲ್ 30 ರನ್​ಗಳ ಇನ್ನಿಂಗ್ಸ್ ಆಡಿದರೆ, ನಾಯಕ ಅಕ್ಷರ್ ಪಟೇಲ್ 25 ರನ್​ಗಳ ಕಾಣಿಕೆ ನೀಡಿದರು. ಟ್ರಿಸ್ಟಾನ್ ಸ್ಟಬ್ಸ್ 21 ರನ್​ಗಳ ಕೊಡುಗೆ ನೀಡಿದರು. ಗುಜರಾತ್ ಪರ ಅರ್ಷದ್ ಖಾನ್, ಪ್ರಸಿದ್ಧ್ ಕೃಷ್ಣ ಮತ್ತು ಸಾಯಿ ಕಿಶೋರ್ ತಲಾ 1 ವಿಕೆಟ್ ಪಡೆದರು.

IPL 2025: ಕೊಹ್ಲಿಯ ಟಿ20 ದಾಖಲೆಯನ್ನು ಧ್ವಂಸಗೊಳಿಸಿದ ಕೆಎಲ್ ರಾಹುಲ್

ಸುದರ್ಶನ್- ಗಿಲ್ ಅಜೇಯ ಆಟ

200 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ತಂಡವು ಸಾಯಿ ಸುದರ್ಶನ್ ಮತ್ತು ಶುಭ್​ಮನ್ ಗಿಲ್ ಅವರ ಅಜೇಯ ಆಟದಿಂದಾಗಿ ಸುಲಭ ಜಯ ಸಾಧಿಸಿತು. ಇವರಿಬ್ಬರ ನಡುವೆ 205 ರನ್‌ಗಳ ಅಜೇಯ ಪಾಲುದಾರಿಕೆ ಇತ್ತು. ಇದು ಯಾವುದೇ ಆರಂಭಿಕ ಜೋಡಿಯ ಮೂರನೇ ಅತ್ಯಧಿಕ ಜೊತೆಯಾಟವಾಗಿದೆ. ಇದಕ್ಕೂ ಮೊದಲು, ಗಿಲ್ ಮತ್ತು ಸುದರ್ಶನ್ ಐಪಿಎಲ್ 2024 ರಲ್ಲಿ 210 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡಿದ್ದರು. ಈ ವೇಳೆ ಸಾಯಿ ಸುದರ್ಶನ್ 61 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 12 ಬೌಂಡರಿಗಳೊಂದಿಗೆ ಅಜೇಯ 108 ರನ್ ಗಳಿಸಿದರೆ, ಶುಭ್​ಮನ್ 53 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 3 ಬೌಂಡರಿಗಳೊಂದಿಗೆ ಅಜೇಯ 93 ರನ್ ಕಲೆಹಾಕಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:13 pm, Sun, 18 May 25