ಕೋಲ್ಕತ್ತಾ: ಕೊರೊನಾ ಕಾರಣದಿಂದಾಗಿ ಭಾರತದಲ್ಲಿ ಡಿಜಿಟಲ್ ಪಾವತಿ ಪ್ರಮಾಣ ಹೆಚ್ಚಿದೆ ಎಂದು ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಹೇಳಿದೆ. ಸರ್ಕಾರದ ಮತ್ತು ಆರ್ಬಿಐನ ನೀತಿಗಳು ಕೂಡ ಇದಕ್ಕೆ ಕಾರಣ ಎಂದು NPCIನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ ರೈ ಅಭಿಪ್ರಾಯಪಟ್ಟಿದ್ದಾರೆ.
XLRI ಸಂಸ್ಥೆ ಆಯೋಜಿಸಿದ್ದ ಸೆಮಿನಾರ್ನಲ್ಲಿ ಮಾತನಾಡಿದ ಪ್ರವೀಣ ರೈ, ಡಿಜಿಟಲೀಕರಣವು ನಮ್ಮ ಬದುಕಿನ ಸಣ್ಣ ವಿಚಾರಗಳನ್ನೂ ಪ್ರಭಾವಿಸಿದೆ. ಜನರು ನಿಧಾನವಾಗಿ ಡಿಜಿಟಲ್ ಪಾವತಿಯತ್ತ ಒಲವು ತೋರುತ್ತಿದ್ದಾರೆ ಎಂದು ಹೇಳಿದ್ದಾರೆ. ಗ್ರಾಹಕರು ಮತ್ತು ವ್ಯಾಪಾರಿಗಳು ಇಬ್ಬರೂ ಡಿಜಿಟಲ್ ವಿಧದ ಪಾವತಿ ಬಯಸುತ್ತಿದ್ದಾರೆ. ಯುಪಿಐ, ಕ್ಯೂಆರ್ ಕೋಡ್ಗಳ ಮೂಲಕ ನಡೆಸುವ ವ್ಯವಹಾರದಲ್ಲಿ ದೊಡ್ಡಮಟ್ಟಿನ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಉಡುಗೊರೆಗಳನ್ನು ನೀಡುವ ಮೂಲಕ ಬಳಕೆದಾರರು ಡಿಜಿಟಲ್ ವಿಧಾನದ ಹಣಪಾವತಿಯನ್ನು ನೆಚ್ಚಿಕೊಳ್ಳುವಂತೆ ಮಾಡಲಾಗುತ್ತಿದೆ. ಇದರಲ್ಲಿದ್ದ ಸಮಸ್ಯೆಗಳನ್ನು ಆರ್ಟಿಫಿಷಿಯಲ್ ಇಂಟಲಿಜೆನ್ಸ್ (AI) ಮೂಲಕ ಪರಿಹರಿಸಲಾಗುತ್ತಿದೆ. ಈ ವಿಧಾನವು ಬಳಕೆದಾರರಲ್ಲಿ ಹಣ ಉಳಿತಾಯದ ಅಭ್ಯಾಸವನ್ನೂ ಹೆಚ್ಚಿಸುತ್ತಿದೆ ಎಂದು ಪ್ರವೀಣ ರೈ ಅಭಿಪ್ರಾಯಪಟ್ಟಿದ್ದಾರೆ.
Published On - 5:28 pm, Sat, 12 December 20