Loading video

8 ಎಪಿಸೋಡ್​ಗಳಲ್ಲಿ ಪ್ರಸಾರವಾಗಲಿದೆ ಪರೀಕ್ಷಾ ಪೇ ಚರ್ಚೆ; ಮಿಸ್ ಮಾಡದೆ ನೋಡಿ ಎಂದ ಮೋದಿ

|

Updated on: Feb 11, 2025 | 3:50 PM

ಈ ವರ್ಷ ಪರೀಕ್ಷಾ ಪೇ ಚರ್ಚಾ ಕೇವಲ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಡೆಯುವುದಿಲ್ಲ. ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು ವಿದ್ಯಾರ್ಥಿಗಳಿಗೆ ತಮ್ಮ ಬಾಲ್ಯದ ಅನುಭವಗಳನ್ನು, ಸವಾಲುಗಳನ್ನು ಹೇಳುವ ಮೂಲಕ ಸ್ಫೂರ್ತಿ ತುಂಬಲಿದ್ದಾರೆ. ಈಗಾಗಲೇ ಮೋದಿಯವರ ಸಂಚಿಕೆ ಪ್ರಸಾರವಾಗಿದ್ದು, ನಾಳೆ ಬೆಳಗ್ಗೆ ನಟಿ ದೀಪಿಕಾ ಪಡುಕೋಣೆ ಅವರ ಸಂಚಿಕೆ ಪ್ರಸಾರವಾಗಲಿದೆ. ಒಟ್ಟು 8 ಸಂಚಿಕೆಗಳಲ್ಲಿ ಈ ಬಾರಿಯ ಪರೀಕ್ಷಾ ಪೇ ಚರ್ಚೆ ಪ್ರಸಾರ ಕಾಣಲಿದೆ.

ನವದೆಹಲಿ: ಈ ವರ್ಷದ ಪರೀಕ್ಷಾ ಪೇ ಚರ್ಚಾದಲ್ಲಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಮಾತನಾಡಿರುವ ಸಂಚಿಕೆ ಪ್ರಸಾರವಾಗಿದೆ. ನಾಳೆ (ಫೆಬ್ರವರಿ 12) ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಕುರಿತು ವಿಶೇಷ ಸಂಚಿಕೆ ಪ್ರಸಾರವಾಗಲಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಖಿನ್ನತೆ, ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದ್ದು, ಈಗಾಗಲೇ ಅದರ ಪ್ರೋಮೋ ಬಿಡುಗಡೆಯಾಗಿದೆ. ದೀಪಿಕಾ ಪಡುಕೋಣೆ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನೂ ನಡೆಸಿದ್ದಾರೆ. ಈ ಸಂಚಿಕೆ ಬುಧವಾರ ಬೆಳಗ್ಗೆ 10 ಗಂಟೆಗೆ ಡಿಡಿ ನ್ಯೂಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಯೂಟ್ಯೂಬ್ ಚಾನೆಲ್​ನಲ್ಲಿ ಪ್ರಸಾರವಾಗಲಿದೆ. ಈ ಬಾರಿ ನಡೆಯುತ್ತಿರುವ 8ನೇ ವರ್ಷದ ಪರೀಕ್ಷಾ ಪೇ ಚರ್ಚಾ 8 ಸಂಚಿಕೆಗಳಲ್ಲಿ ಪ್ರಸಾರವಾಗುತ್ತಿರುವುದು ವಿಶೇಷ.

ಈ 8 ಸಂಚಿಕೆಗಳಲ್ಲಿ ಕ್ರೀಡೆ, ಸಿನಿಮಾ, ತಂತ್ರಜ್ಞಾನ, ಶಿಕ್ಷಣ ಹೀಗೆ ನಾನಾ ಕ್ಷೇತ್ರಗಳ ಸಾಧಕರು ವಿದ್ಯಾರ್ಥಿಗಳೊಂದಿಗೆ ಮಾತನಾಡಲಿದ್ದಾರೆ. ಈಗಾಗಲೇ ದೀಪಿಕಾ ಪಡುಕೋಣೆಯವರ ಎಪಿಸೋಡ್ ಪೂರ್ಣಗೊಂಡಿದ್ದು, ಮುಂದಿನ ದಿನಗಳಲ್ಲಿ ಮೇರಿ ಕೋಮ್, ಸದ್ಗುರು ಜಗ್ಗಿ ವಾಸುದೇವ್ ಮುಂತಾದ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಈ ಎಪಿಸೋಡ್​ಗಳನ್ನು ಮಿಸ್ ಮಾಡದೆ ನೋಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪರೀಕ್ಷಾ ಪೇ ಚರ್ಚಾದ 8ನೇ ಆವೃತ್ತಿಯನ್ನು ಹೊಸ ಶೈಲಿಯಲ್ಲಿ ಆಯೋಜಿಸಲಾಗುತ್ತಿದೆ ಎಂಬುದು ಗಮನಾರ್ಹ. ಇದರಲ್ಲಿ, ಪ್ರಧಾನಿ ಮೋದಿ ಸೋಮವಾರ ಸುಂದರ್ ನರ್ಸರಿಯಲ್ಲಿ ದೇಶಾದ್ಯಂತದ ವಿದ್ಯಾರ್ಥಿಗಳೊಂದಿಗೆ ಒತ್ತಡ-ಮುಕ್ತ ಪರೀಕ್ಷೆಗಳ ವಿವಿಧ ಅಂಶಗಳ ಕುರಿತು ಮಾತನಾಡಿದ್ದರು. ಈ ವರ್ಷದ ಕಾರ್ಯಕ್ರಮಕ್ಕೆ 5 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಲು ಅರ್ಜಿ ಸಲ್ಲಿಸಿದ್ದಾರೆ. ಕಳೆದ ವರ್ಷ ಈ ಕಾರ್ಯಕ್ರಮಕ್ಕೆ ಸುಮಾರು 2.26 ಕೋಟಿ ಜನರು ಹೆಸರು ನೋಂದಣಿ ಮಾಡಿಕೊಂಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ