ನವದೆಹಲಿ: ಪಂಜಾಬ್ನ ಮಾಜಿ ಮುಖ್ಯಮಂತ್ರಿ, ಶಿರೋಮಣಿ ಅಕಾಲಿದಳದ (Shiromani Akali Dal) ಸಂಸ್ಥಾಪಕ ಪ್ರಕಾಶ್ ಸಿಂಗ್ ಬಾದಲ್ (Parkash Singh Badal) ಮಂಗಳವಾರ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಏಪ್ರಿಲ್ 21 ರಂದು ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಐದು ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಪ್ರಕಾಶ್ ಸಿಂಗ್ ಬಾದಲ್ ಅವರು ಕಳೆದ ವರ್ಷ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಹಿರಿಯ ಅಭ್ಯರ್ಥಿಯಾಗಿದ್ದರು. ಕಳೆದ ವರ್ಷ ಜೂನ್ನಲ್ಲಿಯೂ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ವರ್ಷ ಅವರಿಗೆ ಕೋವಿಡ್-19 ಸೋಂಕು ಸಹ ತಗುಲಿತ್ತು.
ಬಾದಲ್ ನೇತೃತ್ವದ ಶಿರೋಮಣಿ ಅಕಾಲಿದಳ ಪಂಜಾಬ್ನಲ್ಲಿ ಎನ್ಡಿಎ ಮಿತ್ರಪಕ್ಷವಾಗಿತ್ತು. 2020ರಲ್ಲಿ ಕೇಂದ್ರ ಸರ್ಕಾರ ಮೂರು ಕೃಷಿ ಮಸೂದೆಗಳನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದಾಗ ಅದನ್ನು ಪ್ರತಿಭಟಿಸಿ ಎನ್ಡಿಎ ಮೈತ್ರಿಕೂಟದಿಂದ ಹೊರನಡೆದಿತ್ತು.
ಬಾದಲ್ ಅವರು ರಾಜಕೀಯ ಇತಿಹಾಸದಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. 1952ರಲ್ಲಿ ಅವರು ಕಿರಿಯ ಸರಪಂಚ್ ಆಗಿ ಆಯ್ಕೆಯಾಗಿದ್ದರು. ಆಗ ಅವರು ಬಾದಲ್ ಗ್ರಾಮದಿಂದ ಚುನಾಯಿತರಾಗಿದ್ದರು. 1970ರಲ್ಲಿ ಅವರು ರಾಜ್ಯದ ಅತ್ಯಂತ ಕಿರಿಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆಗ ಅವರಿಗೆ 43 ವರ್ಷ ವಯಸ್ಸಾಗಿತ್ತು. 2012ರಲ್ಲಿ ಮುಖ್ಯಮಂತ್ರಿಯಾದಾಗ ಪಂಜಾಬ್ನ ಅತ್ಯಂತ ಹಿರಿಯ ಮುಖ್ಯಮಂತ್ರಿ ಎಂಬ ದಾಖಲೆಯನ್ನೂ ನಿರ್ಮಿಸಿದ್ದರು. ಆಗ ಅವರ ವಯಸ್ಸು 85 ವರ್ಷ ಆಗಿತ್ತು.
ಇದನ್ನೂ ಓದಿ: ಏಪ್ರಿಲ್ 27ರಂದು ಚೀನಾ- ಭಾರತ ರಕ್ಷಣಾ ಸಚಿವರ ಭೇಟಿ; ಗಾಲ್ವಾನ್ ಸಂಘರ್ಷ ನಂತರ ಇದು ಮೊದಲನೇ ಸಭೆ
ಪಂಜಾಬ್ ಪ್ರಾಂತ್ಯದ ಅಬುಲ್ ಖುರಾನಾದಲ್ಲಿ 1927 ರ ಡಿಸೆಂಬರ್ 8 ರಂದು ಬಾದಲ್ ಅವರು ಜನಿಸಿದ್ದರು. ಅವರು 1970 ರಿಂದ 71, 1977 ರಿಂದ 80, 1997 ರಿಂದ 2002 ಹಾಗೂ 2007 ರಿಂದ 2012 ಮತ್ತು 2012 ರಿಂದ 2017 ರವರೆಗೆ 5 ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿದ್ದರು. ಒಂದು ಬಾರಿ ಲೋಕಸಭೆಯ ಸದಸ್ಯರೂ ಆಗಿದ್ದರು. 1997ರಲ್ಲಿ ಕೆಲವು ತಿಂಗಳು ಕೇಂದ್ರ ಕೃಷಿ ಸಚಿವರೂ ಆಗಿದ್ದರು.
20 ನೇ ವಯಸ್ಸಿನಲ್ಲೇ ರಾಜಕೀಯ ಜೀವನ ಆರಂಭಿಸಿದ್ದ ಅವರು 1957ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 1972, 1980 ಮತ್ತು 2002ರಲ್ಲಿ ವಿರೋಧ ಪಕ್ಷದ ನಾಯಕರೂ ಆಗಿದ್ದರು. 10 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. 1995ರಿಂದ 2008ರವರೆಗೆ ಶಿರೋಮಣಿ ಅಕಾಲಿದಳದ ಅಧ್ಯಕ್ಷರೂ ಆಗಿದ್ದರು. ಇದಾದ ನಂತರ ಅವರ ಪುತ್ರ ಸುಖಬೀರ್ ಸಿಂಗ್ ಬಾದಲ್ ಪಕ್ಷದ ಮುಖ್ಯಸ್ಥರಾಗಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:19 pm, Tue, 25 April 23