ನವದೆಹಲಿ: ದೇಶದೆಲ್ಲೆಡೆ ಫೋನ್ ಕದ್ದಾಲಿಕೆಯ (Phone Tapping) ವಿಚಾರ ಭಾರೀ ಚರ್ಚೆಗೊಳಗಾಗುತ್ತಿದೆ. ಇಸ್ರೇಲ್ ಮೂಲಕ ಪೆಗಾಸಸ್ (Pegasus) ಎಂಬ ತಂತ್ರಜ್ಞಾನವನ್ನು ಬಳಸಿ ರಾಜಕೀಯ ನಾಯಕರ, ಗಣ್ಯರ, ಪತ್ರಕರ್ತರ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಕಾರಣವೆಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಉಭಯ ಸದನಗಳ ಮುಂಗಾರು ಅಧಿವೇಶನದಲ್ಲೂ (Parliament Monsoon Session) ಈ ಕುರಿತು ಗದ್ದಲ ನಡೆದಿದ್ದು, ಪೆಗಾಸಸ್ ಹಗರಣದ ವಿರುದ್ಧ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಯಬೇಕೆಂದು ಪ್ರತಿಭಟನೆಯನ್ನೂ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದಿನ ಲೋಕಸಭಾ ಕಲಾಪವನ್ನು (Lok Sabha Session) ಸೋಮವಾರಕ್ಕೆ (ಜುಲೈ 26) ಮುಂದೂಡಲಾಗಿದೆ.
ಪೆಗಾಸಸ್ ಫೋನ್ ಕದ್ದಾಲಿಕೆ ಹಗರಣವನ್ನು ಖಂಡಿಸಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮುಂತಾದವರು ಸಂಸತ್ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಈ ಹಗರಣದ ನೈತಿಕ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು. ವಿರೋಧ ಪಕ್ಷದ ನಾಯಕರ ವಿರುದ್ಧ ಬಿಜೆಪಿ ನಾಯಕರು ಪೆಗಾಸಸ್ ಅಸ್ತ್ರವನ್ನು ಬಳಸಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.
Lok Sabha Adjourned to meet again on 26 July (Monday) 2021 at 11 A.M.
— LOK SABHA (@LokSabhaSectt) July 23, 2021
ಇಸ್ರೇಲ್ನ ಪೆಗಾಸಸ್ ಸಾಫ್ಟ್ವೇರ್ ಬಳಸಿ ಫೋನ್ ಕದ್ದಾಲಿಕೆ ಮಾಡಿರುವುದನ್ನು ವಿರೋಧಿಸಿ ಕಲಾಪದಲ್ಲಿ ಗದ್ದಲ ಎದ್ದ ಹಿನ್ನೆಲೆಯಲ್ಲಿ ಅಧಿವೇಶನವನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಇದಕ್ಕೂ ಮೊದಲು ನಿನ್ನೆ ರಾಜ್ಯಸಭಾ ಕಲಾಪದಲ್ಲಿ ಪೆಗಾಸಸ್ ವಿವಾದದ ಬಗ್ಗೆ ಮಾತನಾಡಲು ಮುಂದಾದ ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರ ಭಾಷಣದ ಪ್ರತಿಯನ್ನು ಟಿಎಂಸಿ ಸಂಸದ ಶಂತನು ಸೇನ್ ಕಸಿದುಕೊಂಡು ಹರಿದುಹಾಕಿದ್ದರು. ಈ ಹಿನ್ನೆಲೆಯಲ್ಲಿ ಇಂದು ಅವರನ್ನು ಸಂಸತ್ ಮುಂಗಾರು ಅಧಿವೇಶನದಿಂದ ಅಮಾನತು ಮಾಡಲಾಯಿತು. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕರು ಪ್ರತಿಭಟನೆ ಶುರು ಮಾಡಿದರು.
ನಿನ್ನೆ ರಾಜ್ಯಸಭಾ ಕಲಾಪದಲ್ಲಿ ಪೆಗಾಸಸ್ ಹಗರಣದ ಬಗ್ಗೆ ಹೇಳಿಕೆ ನೀಡಲು ಎದ್ದುನಿಂತ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರ ಕೈಯಿಂದ ಹೇಳಿಕೆಯ ಪ್ರತಿಯನ್ನು ಕಸಿದುಕೊಂಡಿದ್ದ ಟಿಎಂಸಿ ಸಂಸದ ಶಂತನು ಸೇನ್ ಆ ಕಾಗದವನ್ನು ಹರಿದು ಹಾಕಿದ್ದರು. ಈ ಘಟನೆಯ ಹಿನ್ನೆಲೆಯಲ್ಲಿ ಇಂದು ತೃಣಮೂಲ ಕಾಂಗ್ರೆಸ್ ಸಂಸದ ಶಂತನು ಸೇನ್ ಅವರನ್ನು ಮುಂಗಾರು ಅಧಿವೇಶನದಿಂದ ಅಮಾನತು ಮಾಡಲಾಗಿದೆ.
ನಿನ್ನೆ ಕೇಂದ್ರ ಸಚಿವರ ಕೈಯಲ್ಲಿದ್ದ ಹೇಳಿಕೆಯ ಪ್ರತಿಯನ್ನು ಕಿತ್ತುಕೊಂಡಿದ್ದ ಶಂತನು ಸೇನ್ ಮೇಲ್ಮನೆಯ ಸದನದ ಬಾವಿಗಿಳಿದು ಅದನ್ನು ಹರಿದು ಬಿಸಾಡಿದ್ದರು. ಇದು ಭಾರೀ ಟೀಕೆಗೆ ಕಾರಣವಾಗಿತ್ತು. ಆಡಳಿತ ಪಕ್ಷದ ಸಂಸದರು ಈ ವರ್ತನೆಯ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಬಳಿಕ ಕಲಾಪವನ್ನು ಇಂದಿಗೆ ಮುಂದೂಡಲಾಗಿತ್ತು.
My phone was tapped. It’s not a matter of Rahul Gandhi’s privacy. I’m an Oppn leader, I raise the voices of people. This is an attack on voices of the people. Home Minister should resign & there should be a Supreme Court inquiry against Narendra Modi: Rahul Gandhi on ‘Pegasus’ pic.twitter.com/qDFO36t9W7
— ANI (@ANI) July 23, 2021
ಇಂದು ರಾಜ್ಯಸಭಾ ಕಲಾಪದಲ್ಲಿ ಮಾತನಾಡಿರುವ ರಾಜ್ಯಸಭಾ ಚೇರ್ಮನ್ ವೆಂಕಯ್ಯ ನಾಯ್ಡು, ಅಧಿವೇಶನದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳಿಂದ ನನಗೆ ಬಹಳ ನೋವುಂಟಾಗಿದೆ. ಕಲಾಫ ನಡೆಯುವ ವೇಳೆ ಸಚಿವರು ತಮ್ಮ ಹೇಳಿಕೆಯನ್ನು ಓದುತ್ತಿರುವಾಗಲೇ ಅವರ ಕೈಯಿಂದ ಪತ್ರಗಳನ್ನು ಕಸಿದುಕೊಂಡು ಹರಿದು ಹಾಕುವಷ್ಟು ಕೆಳಮಟ್ಟದ ಯೋಚನೆಯನ್ನು ಕೆಲವು ಸಂಸದರು ಮಾಡುತ್ತಿರುವುದು ಬೇಸರದ ಸಂಗತಿ. ಈ ರೀತಿಯ ನಡವಳಿಕೆಯಿಂದ ಸದನದ ಗೌರವಕ್ಕೆ ಧಕ್ಕೆಯಾಗುತ್ತದೆ. ಇದು ಸಂಸದೀಯ ಪ್ರಜಾಪ್ರಭುತ್ವದ ಮೇಲೆ ನಡೆದ ದಾಳಿ ಎಂದು ನಾನು ಪರಿಗಣಿಸುತ್ತೇನೆ ಎಂದು ತಿಳಿಸಿದ್ದಾರೆ.
ಜುಲೈ 19ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿದ್ದು, 3 ದಿನಗಳ ಅಧಿವೇಶನವೂ ವಿಪಕ್ಷ ನಾಯಕರ ಗದ್ದಲದಿಂದ ಮುಂದೂಡಲ್ಪಟ್ಟಿದೆ. ಈ ಮುಂಗಾರು ಅಧಿವೇಶನ ಆಗಸ್ಟ್ 13ರವರೆಗೂ ನಡೆಯಲಿದೆ.
ಇದನ್ನೂ ಓದಿ: Monsoon Session 2021: ಕೇಂದ್ರ ಸಚಿವರ ಭಾಷಣದ ಪ್ರತಿಯನ್ನು ಹರಿದುಹಾಕಿದ್ದ ಟಿಎಂಸಿ ಸಂಸದ ರಾಜ್ಯಸಭೆಯಿಂದ ಅಮಾನತು
(Parliament Monsoon Session Live Updates Lok Sabha adjourned till Monday amid protests by Opposition over Pegasus)