ಫೋನ್ ಕದ್ದಾಲಿಕೆಯ ನೈತಿಕ ಹೊಣೆ ಹೊತ್ತು ನರೇಂದ್ರ ಮೋದಿ ರಾಜೀನಾಮೆ ನೀಡಲಿ; ಸಿದ್ದರಾಮಯ್ಯ ಒತ್ತಾಯ

ಫೋನ್ ಕದ್ದಾಲಿಕೆ ಮೂಲಕ ಬೇರೆಯವರ ವೈಯಕ್ತಿಕ ಬದುಕಿನಲ್ಲಿ ಇಣುಕಿ ನೋಡುವ ಕೀಳು ಮಟ್ಟಕ್ಕೆ ಬಿಜೆಪಿ ನಾಯಕರು ಇಳಿಯಬಾರದಿತ್ತು. ಈ ಬಗ್ಗೆ ತನಿಖೆ ನಡೆದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಫೋನ್ ಕದ್ದಾಲಿಕೆಯ ನೈತಿಕ ಹೊಣೆ ಹೊತ್ತು ನರೇಂದ್ರ ಮೋದಿ ರಾಜೀನಾಮೆ ನೀಡಲಿ; ಸಿದ್ದರಾಮಯ್ಯ ಒತ್ತಾಯ
ರಾಜಭವನ ಚಲೋ ವೇಳೆ ಸಿದ್ದರಾಮಯ್ಯ

ಬೆಂಗಳೂರು: ರಾಜಕೀಯ ನಾಯಕರು ಮತ್ತು ಗಣ್ಯರ ಫೋನ್ ಕದ್ದಾಲಿಕೆ (Pegasus Phone Tapping) ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಬೇಕು. ಸುಪ್ರೀಂಕೋರ್ಟ್ ಹಾಲಿ ನ್ಯಾಯಮೂರ್ತಿಗಳು ತನಿಖೆಯ ನೇತೃತ್ವ ವಹಿಸಬೇಕು. ಈ ಪ್ರಕರಣದ ನೈತಿಕ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ (Siddaramaiah) ಒತ್ತಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ಭಾಗಿಯಾಗಿದೆ. ಇದು ಪ್ರಜಾಪ್ರಭುತ್ವದ ಮೇಲಿನ ಅಪರಾಧ ಎಂದು ಅವರು ಹೇಳಿದ್ದಾರೆ. 

ಟೆಲಿಫೋನ್ ಕದ್ದಾಲಿಕೆ ಪ್ರಕರಣವನ್ನು ಖಂಡಿಸಿ ಇಂದು ಹಮ್ಮಿಕೊಂಡಿದ್ದ ರಾಜಭವನ ಚಲೋ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತನಾಡಿದರು. ಬಿಜೆಪಿಯವರು ಸಮ್ಮಿಶ್ರ ಸರ್ಕಾರ ಪತನಗೊಳಿಸಿದ ವೇಳೆ ನನ್ನ ಆಪ್ತ ಸಹಾಯಕನ ಫೋನ್ ಕರೆಗಳನ್ನು ಕದ್ದಾಲಿಕೆ ಮಾಡಿದೆ. ಫೋನ್ ಕದ್ದಾಲಿಕೆ ಜೊತೆಗೆ ಫೋನ್ ಹ್ಯಾಕ್ ಮಾಡಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಎಐಸಿಸಿ ವರಿಷ್ಠರಾದ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಅವರ ಆಪ್ತ ಸಹಾಯಕ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿವಿಧ ನ್ಯಾಯಾಧೀಶರ ದೂರವಾಣಿಗಳನ್ನು ಕದ್ದಾಲಿಸಲಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಇಡೀ ದೇಶದಲ್ಲಿ ದೂರವಾಣಿ ಕದ್ದಾಲಿಕೆ ಮಾಡಲಾಗಿದೆ. ನನ್ನ ಪ್ರಕಾರ ಇದು ಅಪರಾಧ, ಸಂವಿಧಾನಕ್ಕೆ ವಿರುದ್ಧವಾದದ್ದು. ಸಂವಿಧಾನದಲ್ಲಿ ಕೊಟ್ಟಿರುವ ರಕ್ಷಣೆಯನ್ನು ಬಿಜೆಪಿಯವರು ಹಾಳು ಮಾಡಿದ್ದಾರೆ. ಪೆಗಾಸಿಸ್ ಎಂಬ ಏಜೆನ್ಸಿ ನಿಗಧಿ ಮಾಡಿ ಕದ್ದಾಲಿಕೆಗೆ ಕೋಟ್ಯಂತರ ರೂ. ಖರ್ಚು ಮಾಡಲಾಗಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಸರ್ಕಾರವೇ ಟೆಲಿಫೋನ್ ಕದ್ದಾಲಿಕೆ ಮಾಡಿಸಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಹೀಗಾಗಿ ಪ್ರಧಾನಿ ಹುದ್ದೆಯಲ್ಲಿ ಅವರು ನೈತಿಕವಾಗಿ ಮುಂದುವರಿಯಬಾರದು. ಇದು ವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿ. ಬೇರೆಯವರ ವೈಯಕ್ತಿಕ ಬದುಕಿನಲ್ಲಿ ಇಣುಕಿ ನೋಡುವ ಕೀಳು ಮಟ್ಟಕ್ಕೆ ಬಿಜೆಪಿ ನಾಯಕರು ಇಳಿಯಬಾರದಿತ್ತು. ಈ ಬಗ್ಗೆ ತನಿಖೆ ನಡೆದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಸಂಸತ್ತಿನ ಉಭಯ ಸದನಗಳಲ್ಲಿ ಈ ವಿಚಾರ ಪ್ರಸ್ತಾಪಿಸಲು ಕಾಂಗ್ರೆಸ್ ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ. ನ್ಯಾಯಾಂಗ ತನಿಖೆಗೆ ಎರಡೂ ಕಡೆ ಒತ್ತಡ ಹೇರಲಾಗುವುದು ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.
ದೂರವಾಣಿ ಕದ್ದಾಲಿಕೆ ಡರ್ಟಿ ಗೇಮ್. ಪ್ರಜಾಪ್ರಭುತ್ವದ ಮೇಲಿನ ಅಪರಾಧ ಕೂಡಲೇ ನಿಲ್ಲಿಸಬೇಕು. ಪ್ರಕರಣದ ಹಿಂದೆ ಯಾರು ಇದ್ದಾರೆ ಎಂಬುದು ದೇಶದ ಜನತೆಗೆ ಗೊತ್ತಾಗಬೇಕು. ಕೇಂದ್ರ ಸರ್ಕಾರವೇ ಇದರಲ್ಲಿ ಭಾಗಿಯಾಗಿದೆ ಎಂಬುದರಲ್ಲಿ ಅನುಮಾನ ಇಲ್ಲ. ಕೇಂದ್ರವಲ್ಲದೆ ಮತ್ಯಾರೂ ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ರಾಜಭವನ ಚಲೋ ಮುನ್ನ ಸಿದ್ದರಾಮಯ್ಯ ಅವರು ವಿಧಾನಸೌಧದ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಶಾಸಕರ ಸಭೆ ನಡೆಸಿದರು. ಬಳಿಕ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಲಾಯಿತು. ಇದಾದ ನಂತರ ಪಾದಯಾತ್ರೆಯಲ್ಲಿ ರಾಜಭವನದ ಕಡೆ ಹೊರಟ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹಮದ್, ವಿಧಾನಸಭೆ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಮಾಜಿ ಸಚಿವರಾದ ಕೃಷ್ಣಭೈರೇಗೌಡ, ಕೆ.ಜೆ. ಜಾರ್ಜ್ ಮತ್ತಿತರರು ರಾಜಭವನ ಚಲೋದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: ಸಿದ್ದರಾಮಯ್ಯ, ಕುಮಾರಸ್ವಾಮಿ ಆಪ್ತ ಸಹಾಯಕರು ಮತ್ತು ದೇವೇಗೌಡರ ಗನ್ ಮ್ಯಾನ್ ಫೋನ್ ಕದ್ದಾಲಿಕೆ ಮಾಡಲಾಗಿದೆ: ಕಾಂಗ್ರೆಸ್ ಗಂಭೀರ ಆರೋಪ

Siddaramaiah: ಸಿದ್ದರಾಮಯ್ಯ ಸಮ್ಮುಖದಲ್ಲೇ ‘ಮುಂದಿನ ಮುಖ್ಯಮಂತ್ರಿ’ ಎಂದು ಪುನರುಚ್ಚರಿಸಿದ ಶಾಸಕ ಜಮೀರ್ ಅಹಮದ್!

(Siddaramaiah Urges Prime Minister Narendra Modi to Resign over Pegasus Phone Tapping Controversy in Bengaluru)

Read Full Article

Click on your DTH Provider to Add TV9 Kannada