ದೆಹಲಿ ಆಗಸ್ಟ್ 10: ಕೇಂದ್ರದ ವಿರುದ್ಧದ ಅವಿಶ್ವಾಸ ನಿರ್ಣಯದ (No-Confidence Motion) ಮೇಲಿನ ಚರ್ಚೆಯ ಮೂರನೇ ದಿನದ ಚರ್ಚೆಗೆ ಚಾಲನೆ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman), ವಿಪಕ್ಷಗಳುವಂಶಾಡಳಿತ ರಾಜಕೀಯ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ(BJP) ಸರ್ಕಾರದ ಅಡಿಯಲ್ಲಿ ಆರ್ಥಿಕ ಬೆಳವಣಿಗೆ ಮತ್ತು “ಆಡಳಿತದ ರೂಪಾಂತರ” ವನ್ನು ಹೈಲೈಟ್ ಮಾಡಿದ ನಿರ್ಮಲಾ, ಪರಿವರ್ತನೆ ಎಂಬುದು ಜನರಿಗೆ ತಲುಪಿಸುವ ಮೂಲಕ ಬರುತ್ತದೆ. ಮಾತಿನ ಮೂಲಕ ಅಲ್ಲ. ನೀವು ಜನರಿಗೆ ಕನಸುಗಳನ್ನು ತೋರಿಸುತ್ತೀರಿ. ಅವರ ಕನಸುಗಳನ್ನು ನಾವು ನನಸು ಮಾಡುತ್ತೇವೆ.ನಾವು ಎಲ್ಲರನ್ನೂ ಸಬಲೀಕರಣಗೊಳಿಸುವುದರಲ್ಲಿ ನಂಬಿಕೆ ಇರಿಸಿದ್ದೇವೆ, ಮೆಚ್ಚಿಸುವ ಕಾರ್ಯದಲ್ಲಿ ಅಲ್ಲ ಎಂದು ಹೇಳಿದ್ದಾರೆ.
ಗುರುವಾರ ಬೆಳಗ್ಗೆ ಕಲಾಪ ಆರಂಭಗೊಂಡಿದ್ದು, ವಿರೋಧ ಪಕ್ಷದ ಸಂಸದರ ಘೋಷಣೆಗಳು ಉಭಯ ಸದನಗಳನ್ನು ಮುಂದೂಡಲು ಕಾರಣವಾಯಿತು. ಮಣಿಪುರದ ಹಿಂಸಾಚಾರದ ಕುರಿತು ಚರ್ಚೆ ನಡೆಸುವ ನಿಯಮದ ಕುರಿತು ರಾಜ್ಯಸಭೆಯಲ್ಲಿ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ ತರ್ಕವುಂಟಾಗಿದೆ. ಗದ್ದಲದ ನಡುವೆಯೇ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿಗೆ ಬರಲು ಸಾಧ್ಯವಿಲ್ಲದ ದೇವರೇ?ಎಂದು ಪ್ರಶ್ನಿಸಿದರು. ಮೇಲ್ಮನೆಯನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.
ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, “ಜನರು 2014 ಮತ್ತು 2019 ರಲ್ಲಿ ಯುಪಿಎ ವಿರುದ್ಧ ಅವಿಶ್ವಾಸ ಮಂಡಿಸಿ ಅವರನ್ನು ಸೋಲಿಸಿದರು. 2024 ರಲ್ಲೂ ಇದೇ ಪರಿಸ್ಥಿತಿ ಇರುತ್ತದೆ. ಯುಪಿಎಯ ಹೆಸರು ಬದಲಾಯಿಸುವ ಅಗತ್ಯ ಏನಿತ್ತು?ಅವರು ಅದ್ಭುತವಾದ ಒಗ್ಗಟ್ಟನ್ನು ಹೊಂದಿದ್ದಾರೆ. ಅವರು ಪರಸ್ಪರರ ವಿರುದ್ಧ ಅಥವಾ ಒಟ್ಟಿಗೆ ಹೋರಾಡುತ್ತಿದ್ದಾರೆಯೇ ಎಂದು ಅರ್ಥಮಾಡಿಕೊಳ್ಳುವುದು ಕಷ್ಟ ಎಂದು ಗೇಲಿ ಮಾಡಿದ್ದಾರೆ,
ಪರಿವರ್ತನೆಯು ಜನರಿಗೆ ತಲುಪಿಸುವ ಮೂಲಕ ಬರುತ್ತದೆ, ಮಾತಿನ ಮೂಲಕ ಅಲ್ಲ. ನೀವು ಜನರಿಗೆ ಕನಸುಗಳನ್ನು ತೋರಿಸುತ್ತೀರಿ. ನಾವು ಅವರ ಕನಸುಗಳನ್ನು ನನಸಾಗಿಸುತ್ತೇವೆ. ನಾವು ಎಲ್ಲರನ್ನೂ ಸಬಲೀಕರಣ ಮಾಡಲು ನೋಡುತ್ತೇವೆ, ಮೆಚ್ಚಿಸುವ ಕಾರ್ಯ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚುನಾವಣಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯಿಂದ ಮುಖ್ಯ ನ್ಯಾಯಮೂರ್ತಿಗಳನ್ನು ಹೊರಗಿಡಲು ಹೊಸ ವಿಧೇಯಕ ಮಂಡಿಸಲಿರುವ ಕೇಂದ್ರ
ನಮ್ಮ ಡಿಬಿಟಿ ಕಥೆಯು ಪ್ರಪಂಚದ ಇತರ ಭಾಗಗಳಿಗೆ ಮಾದರಿಯಾಗಿದೆ. ಯುಪಿಎಯಿಂದ ಡಿಬಿಟಿಯ (ಬ್ಯಾಂಕ್ ಖಾತೆಗೆ ನೇರ ಹಣ) ಕಾರ್ಯಾಚರಣೆಯನ್ನು ನಾನು ಗುರುತಿಸುತ್ತೇನೆ ಅದರಲ್ಲಿ 2013-14 ರಲ್ಲಿ ಕೇವಲ 7,367 ಕೋಟಿ ರೂ.ಗಳನ್ನು ವರ್ಗಾಯಿಸಲಾಗಿದೆ. ಆ ಮೊತ್ತದಿಂದ, ಡಿಬಿಟಿ ವರ್ಗಾವಣೆಗಳು 5 ಪಟ್ಟು ಹೆಚ್ಚಾಗಿದೆ. 2014-15ರ ವೇಳೆಗೆ ಕಳೆದ ಹಣಕಾಸು ವರ್ಷದಲ್ಲಿ 7.16 ಲಕ್ಷ ಕೋಟಿ ರೂ.ಗಳನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗಿದೆ.
ಅವಿಶ್ವಾಸದ ಚರ್ಚೆಯ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಷಣದ ವೇಳೆ ಕಾಂಗ್ರೆಸ್, ಎನ್‌ಸಿಪಿ ಮತ್ತು ಡಿಎಂಕೆ ಸಂಸದರು ಸಭಾತ್ಯಾಗ ಮಾಡಿದ್ದಾರೆ.
ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಮತ್ತು ಕರ್ನಾಟಕದ ಟೊಮೆಟೊ ಬೆಳೆಯುವ ಪ್ರದೇಶಗಳಿಂದ ಟೊಮೆಟೊಗಳನ್ನು ಖರೀದಿಸುವುದು ಮತ್ತು ಎನ್‌ಸಿಸಿಎಫ್, ಎನ್‌ಎಎಫ್‌ಇಡಿ ಮುಂತಾದ ಸಹಕಾರ ಸಂಘಗಳ ಮೂಲಕ ಇವುಗಳ ವಿತರಣೆ ಎಲ್ಲವೂ ನಡೆಯುತ್ತಿದೆ. ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ದೆಹಲಿ ಮತ್ತು ರಾಜಸ್ಥಾನಗಳಿಗೆ ತಲುಪಿಸುವ ಕಾರ್ಯ ಜುಲೈ 14 ರಿಂದ ಈಗಾಗಲೇ ಪ್ರಾರಂಭವಾಗಿದ್ದು ಅದು ಈಗಲೂ ಮುಂದುವರಿಯುತ್ತದೆ. ದೆಹಲಿಯಲ್ಲಿ, ಮೊಬೈಲ್ ವ್ಯಾನ್‌ಗಳು NCCF ಮತ್ತು NAFED ಮತ್ತು ಕೇಂದ್ರೀಯ ಭಂಡಾರ್‌ನ ಔಟ್‌ಲೆಟ್‌ಗಳಾಗಿ ವಿತರಿಸುತ್ತಿವೆ.
ಕಾಂಗ್ರೆಸ್‌ನ “ಗರೀಬಿ ಹಠಾವೋ” ಘೋಷಣೆಯನ್ನು ಲೇವಡಿ ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ನರೇಂದ್ರ ಮೋದಿ ಸರ್ಕಾರವು ಕೇವಲ ಭರವಸೆ ನೀಡುವ ಬದಲು ದೇಶದಲ್ಲಿ ಆಡಳಿತವನ್ನು ಪರಿವರ್ತಿಸಿದೆ. ಜಾಗತಿಕ ಆರ್ಥಿಕತೆ ಕುಸಿತವನ್ನು ವಿಶ್ವಬ್ಯಾಂಕ್ ಮುನ್ಸೂಚನೆ ನೀಡುತ್ತಿದೆ ಆದರೆ ಭಾರತವು ಆಶಾವಾದಿ ಆಗಿದೆ. 2013 ರಲ್ಲಿ ಭಾರತವನ್ನು ದುರ್ಬಲ ಆರ್ಥಿಕತೆ ಎಂದು ಘೋಷಿಸಲಾಯಿತು. ಅದೇ ಏಜೆನ್ಸಿ ಈಗ ಭಾರತದ ಆರ್ಥಿಕತೆಯನ್ನು ನವೀಕರಿಸಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿಯೂ ಆರ್ಥಿಕತೆಯು ಬೆಳವಣಿಗೆಯನ್ನು ಮುಂದುವರೆಸಿದೆ.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ‘ಗರೀಬಿ ಹಠಾವೋ’ ಘೋಷಣೆಗೆ ತಿರುಗೇಟು ನೀಡಿದ ವಿತ್ತ ಸಚಿವೆ ನಾವು “ಗರೀಬಿ ಹಠಾವೋ” – (ಬಡತನವನ್ನು ನಿರ್ಮೂಲನೆ ಮಾಡಿ) ಎಂಬ ಘೋಷಣೆಯನ್ನು ಆರು ದಶಕಗಳಿಂದ ಕೇಳುತ್ತಿದ್ದೇವೆ. ಆದರೆ ನಿರ್ಮೂಲನೆ ಆಗಿದೆಯೇ? ಹಿಂದಿನ ಸರ್ಕಾರಗಳು ಬಡತನ ನಿವಾರಣೆಯಾಗುತ್ತದೆ ಎಂದು ಪೋಸ್ಟ್ ಡೇಟೆಡ್ ಚೆಕ್ ನೀಡಿವೆ.
“ಪ್ರಧಾನಿ ಮೋದಿ ಇದನ್ನು ಬದಲಾಯಿಸಿದ್ದಾರೆ. ನಮ್ಮ ಆಡಳಿತದಲ್ಲಿ ಪರಿವರ್ತನೆಯಾಗಿದೆ. ‘ಬನೇಗಾ, ಮಿಲೇಗಾ’ ಎಂಬ ಪದಗಳು ಹೋಗಿವೆ. ಜನರು ಈಗ ‘ಬನ್ ಗಯಾ, ಮಿಲ್ ಗಯಾ ಎಂದು ‘ಗಯಾ’ ಪದ ಬಳಸುತ್ತಿದ್ದಾರೆ. ಸರ್ಕಾರವು ಭರವಸೆಗಳನ್ನು ಪೂರೈಸುತ್ತಿದೆ. ಯುಪಿಎ ಭ್ರಷ್ಟಾಚಾರದಿಂದಾಗಿ ಒಂದು ಪೀಳಿಗೆಯನ್ನು ವ್ಯರ್ಥ ಮಾಡಿದೆ. ಎನ್‌ಡಿಎ ಅಡಿಯಲ್ಲಿ, ನಾವು ಹೆಚ್ಚಿನ ಬೆಳವಣಿಗೆ ಮತ್ತು ಕಡಿಮೆ ಹಣದುಬ್ಬರವನ್ನು ಕಂಡಿದ್ದೇವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಮಣಿಪುರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ದಾಳಿಗೆ ತಿರುಗೇಟು ನೀಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ಮುಖ್ಯಸ್ಥೆ ಜೆ ಜಯಲಲಿತಾ ಅವರ ವಿಷಯ ಉಲ್ಲೇಖಿಸಿದ್ದಾರೆ. ಭಾರತದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳ ಕುರಿತು ಡಿಎಂಕೆ ನಾಯಕಿ ಕನಿಮೊಳಿ ಅವರ ಟೀಕೆಗೆ ಪ್ರತಿಕ್ರಿಯಿಸಿದ ನಿರ್ಮಲಾ, “ಮಹಿಳೆಯರು ಎಲ್ಲಿಯೇ ದೌರ್ಜನ್ಯಕ್ಕೊಳಗಾದರೆ ಅದು ಮಣಿಪುರ ಅಥವಾ ರಾಜಸ್ಥಾನ ಅಥವಾ ದೆಹಲಿ, ನಾವು ಅದನ್ನು ಗಂಭೀರವಾಗಿ ಪರಿಗಣಿಸಬೇಕು, ಆದರೆ ಅದರಲ್ಲಿ ಯಾವುದೇ ರಾಜಕೀಯ ಇರಬಾರದು” ಎಂದು ಹೇಳಿದರು.
ಮಾರ್ಚ್ 25, 1989 ರಂದು ತಮಿಳುನಾಡು ವಿಧಾನಸಭೆಯಲ್ಲಿ ಶ್ರೀಮತಿ ಜಯಲಲಿತಾ ಅವರ ಸೀರೆಯನ್ನು ಎಳೆದ ಘಟನೆಯನ್ನು ಸಚಿವೆ ಇಲ್ಲಿ ಉಲ್ಲೇಖಿಸಿದ್ದಾರೆ.”ಅವರು ವಿರೋಧ ಪಕ್ಷದ ನಾಯಕಿಯಾಗಿದ್ದರು, ಡಿಎಂಕೆ ಸದಸ್ಯರು ಗಲಾಟೆ ಮಾಡಿದರು, ನಕ್ಕರು. ಮುಖ್ಯಮಂತ್ರಿಯಾದ ನಂತರವೇ ವಿಧಾನಸಭೆಗೆ ಮರಳುತ್ತೇನೆ ಎಂದು ಜಯಲಲಿತಾ ಪ್ರಮಾಣ ವಚನ ಸ್ವೀಕರಿಸಿದರು. ಎರಡು ವರ್ಷಗಳ ನಂತರ ಅವರು ಮತ್ತೆ ಮುಖ್ಯಮಂತ್ರಿಯಾದರು. ಪ್ರತಿಭಟನಾನಿರತ ಡಿಎಂಕೆ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ನಿರ್ಮಲಾ, ನೀವು ಕೌರವ ಸಭೆಯ ಬಗ್ಗೆ ಮಾತನಾಡುತ್ತಿದ್ದೀರಿ, ದ್ರೌಪದಿಯ ಬಗ್ಗೆ ಮಾತನಾಡುತ್ತಿದ್ದೀರಿ, ಡಿಎಂಕೆ ಜಯಲಲಿತಾ ಅವರನ್ನು ಮರೆತಿದೆಯೇ? ನಂಬಲಸಾಧ್ಯ ಎಂದು ಕೇಂದ್ರ ಸಚಿವೆ ಹೇಳಿದ್ದಾರೆ.
ಕೇಂದ್ರ ಸರ್ಕಾರ ಹಿಂದಿಯನ್ನು ಹೇರಲು ಪ್ರಯತ್ನಿಸುತ್ತಿದೆ ಎಂದು ಡಿಎಂಕೆ ಸಂಸದೆ ಕನಿಮೊಳಿ ವಾಗ್ದಾಳಿಗೆ ಪ್ರತಿಕ್ರಿಯಿಸಿದ ವಿತ್ತ ಸಚಿವರು, ಪ್ರಧಾನಮಂತ್ರಿ ಅವರು ಶಿಲಪ್ಪದಿಗಾರಂನ ಸ್ಪೂರ್ತಿಯನ್ನು ಜಾರಿಗೆ ತರುತ್ತಿದ್ದಾರೆ ಎಂದು ಹೇಳಿದರು. ಇದೇ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಸೆಂಗೊಲ್” ನ್ಯಾಯದ ಸಂಕೇತವಾಗಿ ಹೊಸ ಸಂಸತ್ತಿನಲ್ಲಿ ಸ್ಥಾಪಿಸಲಾದ ರಾಜದಂಡ . ಅದನ್ನು ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗಿತ್ತು. ಅದು ತಮಿಳರಿಗೆ ಮಾಡಿದ ಅವಮಾನ ಅಲ್ಲವೇ ಎಂದು ಕೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:44 pm, Thu, 10 August 23