ಲೋಕಸಭೆಯಲ್ಲಿ ‘G Ram G’ ಮಸೂದೆ ಅಂಗೀಕಾರ, ಮಸೂದೆ ಪ್ರತಿಯನ್ನು ಹರಿದು ಸ್ಪೀಕರ್ ಕಡೆ ಎಸೆದ ವಿಪಕ್ಷ ನಾಯಕರು

G Ram G Bill Passed: ಲೋಕಸಭೆಯು ವಿರೋಧ ಪಕ್ಷದ ಭಾರೀ ಗದ್ದಲದ ನಡುವೆಯೂ ಜಿ ರಾಮ್ ಜಿ ಮಸೂದೆ 2025ಯನ್ನು ಅಂಗೀಕರಿಸಿತು . ' ಉದ್ಯೋಗ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ಅಭಿವೃದ್ಧಿ ಹೊಂದಿದ ಭಾರತ-ಜಿ ರಾಮ್ ಜಿ) ಮಸೂದೆ, 2025 ' ಕುರಿತ ಚರ್ಚೆ ಬುಧವಾರ ಮಧ್ಯರಾತ್ರಿಯ ನಂತರ ಕೊನೆಗೊಂಡಿತು. ಚರ್ಚೆಯಲ್ಲಿ 99 ಸದಸ್ಯರು ಭಾಗವಹಿಸಿದ್ದರು. ಈ ಪ್ರಸ್ತಾವಿತ ಕಾನೂನು 20 ವರ್ಷ ಹಳೆಯದಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ( MGNREGA ) ಅನ್ನು ಬದಲಾಯಿಸುತ್ತದೆ .

ಲೋಕಸಭೆಯಲ್ಲಿ ‘G Ram G’ ಮಸೂದೆ ಅಂಗೀಕಾರ, ಮಸೂದೆ ಪ್ರತಿಯನ್ನು ಹರಿದು ಸ್ಪೀಕರ್ ಕಡೆ ಎಸೆದ ವಿಪಕ್ಷ ನಾಯಕರು
ಸಂಸತ್ತು

Updated on: Dec 18, 2025 | 2:16 PM

ನವದೆಹಲಿ, ಡಿಸೆಂಬರ್ 18: ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಇಂದು ಲೋಕಸಭೆ(Lok Sabha)ಯಲ್ಲಿ ವಿಬಿ ಜಿ ರಾಮ್ ಜಿ( VB G Ram G Bill)  ಮಸೂದೆಯನ್ನು ಅಂಗೀಕರಿಸಲಾಯಿತು.ಕಳೆದ 20 ವರ್ಷಗಳಿಂದ ಗ್ರಾಮೀಣ ಭಾಗದ ಬಡವರ ಜೀವನಾಡಿಯಾಗಿದ್ದ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ (MGNREGA) ಬದಲಾಗಿದೆ. ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ) ಅಂದರೆ VB-G RAM G ಮಸೂದೆ-2025ಯನ್ನು ಅಂಗೀಕರಿಸಲಾಗಿದೆ.

ವಿರೋಧ ಪಕ್ಷದ ಸಂಸದರು ಭಾರಿ ಗದ್ದಲ ಎಬ್ಬಿಸಿದರು. ಸರ್ಕಾರವು ಮಹಾತ್ಮ ಗಾಂಧಿಯವರನ್ನು ಅವಮಾನಿಸಿದೆ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ (MGNREGA) ನಿಬಂಧನೆಗಳನ್ನು ದುರ್ಬಲಗೊಳಿಸಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದವು.

2009 ರ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಮಹಾತ್ಮಾ ಗಾಂಧಿಯವರ ಹೆಸರನ್ನು NREGA ಯೋಜನೆಗೆ ಸೇರಿಸಲಾಗಿತ್ತು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಈ ಕ್ರಮವನ್ನು ಸಮರ್ಥಿಸಿಕೊಂಡರು.

ಮತ್ತಷ್ಟು ಓದಿ: Video: ಸಂಸತ್ತಿನ ಒಳಗೆ ಸಿಗರೇಟ್ ಸೇದಿದ್ರಾ ಟಿಎಂಸಿ ಸಂಸದ? ಬಿಜೆಪಿ ಹಂಚಿಕೊಂಡ ವಿಡಿಯೋದಲ್ಲೇನಿದೆ?

ಮೋದಿ ಸರ್ಕಾರವು ಯೋಜನೆಗಳನ್ನು ನಿರಂಕುಶವಾಗಿ ಮರುನಾಮಕರಣ ಮಾಡುತ್ತದೆ ಎಂಬ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರ ಟೀಕೆಗೆ ಪ್ರತಿಕ್ರಿಯಿಸಿದ ಹಿರಿಯ ಬಿಜೆಪಿ ನಾಯಕರು, ನೆಹರು-ಗಾಂಧಿ ಅವರ ಹೆಸರಿನ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ಪಟ್ಟಿ ಮಾಡಿದ್ದಾರೆ.

ಗ್ರಾಮೀಣ ಉದ್ಯೋಗ ಯೋಜನೆಯಿಂದ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕಿದ್ದಕ್ಕಾಗಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ವಿರೋಧ ಪಕ್ಷದ ಸದಸ್ಯರು ಸದನದ ಬಾವಿಯಲ್ಲಿ ಗದ್ದಲ ಎಬ್ಬಿಸಿದರು, ಮಸೂದೆಯ ಪ್ರತಿಗಳನ್ನು ಹರಿದು ಸ್ಪೀಕರ್ ಕುರ್ಚಿಯ ಕಡೆಗೆ ಎಸೆದರು.

ಹಾಗಾದರೆ ಹಳೆಯ ಯೋಜನೆಗಿಂತ ಈ ಹೊಸ ಮಸೂದೆಯಲ್ಲಿ ಏನಿದೆ? ಜನಸಾಮಾನ್ಯರಿಗೆ ಇದರಿಂದ ಲಾಭವೇ ಅಥವಾ ನಷ್ಟವೇ? ವಿರೋಧ ಪಕ್ಷಗಳು ಇದನ್ನು ಏಕೆ ವಿರೋಧಿಸುತ್ತಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಏನಿದು  MGNREGA?
ಹೊಸ ಮಸೂದೆಯ ಬಗ್ಗೆ ತಿಳಿಯುವ ಮುನ್ನ, ಇಷ್ಟು ವರ್ಷ ನಮ್ಮ ಹಳ್ಳಿಗಳಲ್ಲಿ ಚಾಲ್ತಿಯಲ್ಲಿದ್ದ ಯೋಜನೆಯ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ’ (MGNREGA) ಎನ್ನುವುದು ಭಾರತದ ಗ್ರಾಮೀಣ ಭಾಗದ ಜನರ ಜೀವನೋಪಾಯ ಭದ್ರತೆಯನ್ನು ಹೆಚ್ಚಿಸುವ ಉದ್ದೇಶದಿಂದ ಜಾರಿಗೆ ಬಂದಿರುವ ಒಂದು ಕ್ರಾಂತಿಕಾರಿ ಯೋಜನೆಯಾಗಿದೆ.
ಇದು ದೇಶದ ಪ್ರತಿ ಗ್ರಾಮೀಣ ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 100 ದಿನಗಳ ಖಾತರಿಪಡಿಸಿದ ಕೂಲಿ ಉದ್ಯೋಗವನ್ನು ನೀಡುವ ಗುರಿ ಹೊಂದಿದೆ.

ಏನಿದು ಹೊಸ ಮಸೂದೆ?
ಈಗ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಲೋಕಸಭೆಯಲ್ಲಿ ಹೊಸ ಮಸೂದೆಯನ್ನು ಮಂಡಿಸಿದ್ದಾರೆ. ಇದರ ಪ್ರಮುಖ ಉದ್ದೇಶ ಮೇಲೆ ವಿವರಿಸಿದ 2005ರ ಹಳೆಯ MGNREGA ಕಾಯ್ದೆಯನ್ನು ರದ್ದುಗೊಳಿಸಿ, ಹೊಸ ನಿಯಮಗಳೊಂದಿಗೆ ‘VB-G RAM G’ ಕಾಯ್ದೆಯನ್ನು ಜಾರಿಗೆ ತರುವುದಾಗಿದೆ.

125 ದಿನಗಳ ಉದ್ಯೋಗ ಗ್ಯಾರಂಟಿ: ಪ್ರಸ್ತುತ MGNREGA ಅಡಿಯಲ್ಲಿ ವಾರ್ಷಿಕ 100 ದಿನಗಳ ಕೆಲಸ ನೀಡಲಾಗುತ್ತಿದೆ. ಹೊಸ ಮಸೂದೆಯ ಪ್ರಕಾರ ಇದನ್ನು 125 ದಿನಗಳಿಗೆ ಹೆಚ್ಚಿಸಲಾಗುವುದು.
ಕೆಲಸದ ಸ್ವರೂಪ: ಕೇವಲ ಗುಂಡಿ ತೆಗೆಯುವುದಲ್ಲದೆ ನಾಲ್ಕು ಭಾಗಗಳಿರುತ್ತವೆ
ಜಲ ಭದ್ರತೆ
ಗ್ರಾಮೀಣ ಮೂಲಸೌಕರ್ಯ
ಜೀವನೋಪಾಯ ಸಂಬಂಧಿತ ಮೂಲಸೌಕರ್ಯ
ಹವಾಮಾನ ವೈಪರೀತ್ಯ ತಡೆಗಟ್ಟುವ ಕಾಮಗಾರಿಗಳು

ಕೃಷಿ ಕೆಲಸಕ್ಕೆ ಅಡ್ಡಿಯಿಲ್ಲ:  ಬಿತ್ತನೆ ಸಮಯದಲ್ಲಿ ರೈತರಿಗೆ ಕೂಲಿ ಕಾರ್ಮಿಕರ ಕೊರತೆಯಾಗದಂತೆ ನೋಡಿಕೊಳ್ಳಲು, ವರ್ಷದಲ್ಲಿ ಗರಿಷ್ಠ 60 ದಿನಗಳ ಕಾಲ ಈ ಯೋಜನೆಯಡಿ ಕೆಲಸವನ್ನು ಸ್ಥಗಿತಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇರುತ್ತದೆ.

ಈ ಯೋಜನೆಯಿಂದ ಯಾರಿಗೆ ಹೆಚ್ಚು ಲಾಭ?
ಹೊಸ ಮಸೂದೆಯು ಜಾರಿಯಾದರೆ ಗ್ರಾಮೀಣ ಭಾಗದ ಈ ಕೆಳಗಿನ ವರ್ಗಗಳಿಗೆ ನೇರ ಲಾಭವಾಗಲಿದೆ ಎಂದು ಸರ್ಕಾರ ತಿಳಿಸಿದೆ.

ಗ್ರಾಮೀಣ ಕೂಲಿ ಕಾರ್ಮಿಕರು: ವರ್ಷಕ್ಕೆ ಹೆಚ್ಚುವರಿ 25 ದಿನಗಳ ಕೆಲಸ ಸಿಗುವುದರಿಂದ, ಪ್ರತಿ ಕುಟುಂಬದ ವಾರ್ಷಿಕ ಆದಾಯದಲ್ಲಿ ಏರಿಕೆಯಾಗಲಿದೆ.

ರೈತರು: ಸುಗ್ಗಿ ಮತ್ತು ಬಿತ್ತನೆ ಸಮಯದಲ್ಲಿ (Harvest Season) ಈ ಯೋಜನೆಯ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸುವುದರಿಂದ, ರೈತರಿಗೆ ಕೃಷಿ ಚಟುವಟಿಕೆಗಳಿಗೆ ಕೂಲಿ ಕಾರ್ಮಿಕರು ಸುಲಭವಾಗಿ ಸಿಗಲಿದ್ದಾರೆ.

ಗ್ರಾಮ ಪಂಚಾಯಿತಿಗಳು: ಕೇವಲ ಮಣ್ಣಿನ ಕೆಲಸ ಮಾಡುವ ಬದಲು, ರಸ್ತೆ, ಕೆರೆ, ಮತ್ತು ಕಾಲುವೆಗಳಂತಹ ‘ಶಾಶ್ವತ ಆಸ್ತಿ’ಗಳನ್ನು ನಿರ್ಮಿಸುವುದರಿಂದ ಹಳ್ಳಿಗಳ ಮೂಲಸೌಕರ್ಯ ಅಭಿವೃದ್ಧಿಯಾಗಲಿದೆ.

ಮಹಿಳೆಯರು: MGNREGA ದಂತೆಯೇ ಈ ಯೋಜನೆಯಲ್ಲೂ ಮಹಿಳೆಯರಿಗೆ ಆದ್ಯತೆ ಮುಂದುವರೆಯಲಿದ್ದು, ಮನೆಯ ಹತ್ತಿರವೇ ಉದ್ಯೋಗ ದೊರೆಯಲಿದೆ.

ಇದಕ್ಕೂ ಮುನ್ನ ಅವರು ಮಸೂದೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಸಂಸತ್ತಿನ ಸಂಕೀರ್ಣದೊಳಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಈ ಕಾನೂನನ್ನು ಗಾಂಧಿಯವರಿಗೆ ಮಾಡಿದ ಅವಮಾನ ಮತ್ತು ಗ್ರಾಮೀಣ ಭಾರತಕ್ಕೆ ಸಾಮಾಜಿಕ-ಆರ್ಥಿಕ ಪರಿವರ್ತನೆಯನ್ನು ತಂದ ಕೆಲಸ ಮಾಡುವ ಹಕ್ಕಿನ ಮೇಲಿನ ದಾಳಿ ಎಂದು ಕರೆದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ