ದೇಶಭ್ರಷ್ಟರಿಬ್ಬರ ಸಂಭ್ರಮ; ವಿಜಯ್ ಮಲ್ಯ 70ನೇ ಹುಟ್ಟುಹಬ್ಬಕ್ಕೆ ಪಾರ್ಟಿ ಕೊಟ್ಟ ಲಲಿತ್ ಮೋದಿ
ಬಹುಕೋಟಿ ವಂಚನೆ ಪ್ರಕರಣದಲ್ಲಿ ಸಿಲುಕಿರುವ ಉದ್ಯಮಿ ವಿಜಯ್ ಮಲ್ಯ ಹಾಗೂ ಲಲಿತ್ ಮೋದಿ ಭಾರತ ಬಿಟ್ಟು ಪರಾರಿಯಾಗಿದ್ದಾರೆ. ವಿಜಯ್ ಮಲ್ಯ ಮತ್ತು ಲಲಿತ್ ಮೋದಿ ಇಬ್ಬರೂ ಲಂಡನ್ನಲ್ಲೇ ವಾಸವಾಗಿದ್ದಾರೆ. ಲಂಡನ್‌ನಲ್ಲಿ ವಿಜಯ್ ಮಲ್ಯ ಅವರ 70ನೇ ಹುಟ್ಟುಹಬ್ಬಕ್ಕೆ ಲಲಿತ್ ಮೋದಿ "ಗ್ಲೋರಿಯಸ್ ಈವ್ನಿಂಗ್" ಪಾರ್ಟಿ ಏರ್ಪಡಿಸಿದ್ದಾರೆ. ಈ ಅದ್ದೂರಿ ಹುಟ್ಟುಹಬ್ಬದ ಪಾರ್ಟಿಯ ಫೋಟೋಗಳು ವೈರಲ್ ಆಗಿವೆ.

ನವದೆಹಲಿ, ಡಿಸೆಂಬರ್ 18: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮಾಜಿ ಅಧ್ಯಕ್ಷ ಲಲಿತ್ ಮೋದಿ (Lalit Modi) ಅವರು ದೇಶ ಬಿಟ್ಟು ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ (Vijay Mallya) ಅವರ ಹುಟ್ಟುಹಬ್ಬದ ಆಚರಣೆಯನ್ನು ಲಂಡನ್‌ನಲ್ಲಿ ಆಯೋಜಿಸಿದ್ದು, ಅವರ ಬೆಲ್‌ಗ್ರೇವ್ ಸ್ಕ್ವೇರ್ ನಿವಾಸಕ್ಕೆ ಹಲವಾರು ಗಣ್ಯ ವ್ಯಕ್ತಿಗಳನ್ನು ಆಮಂತ್ರಿಸಿದ್ದರು. ಅತಿಥಿಗಳ ಪಟ್ಟಿಯಲ್ಲಿ ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಮ್ದಾರ್ ಶಾ, ನಟ ಇದ್ರಿಸ್ ಎಲ್ಬಾ ಮತ್ತು ಫ್ಯಾಷನ್ ಡಿಸೈನರ್ ಮನೋವಿರಾಜ್ ಖೋಸ್ಲಾ ಕೂಡ ಇದ್ದರು.
ನಿನ್ನೆ ಸಂಜೆಯ ಫೋಟೋಗಳಲ್ಲಿ ಕಿರಣ್ ಮಜುಮ್ದಾರ್ ಶಾ ಅವರು ಖೋಸ್ಲಾ ಅವರೊಂದಿಗೆ ಪೋಸ್ ನೀಡುತ್ತಿರುವುದನ್ನು ಮತ್ತು ಇನ್ನೊಂದರಲ್ಲಿ ಎಲ್ಬಾ ಅವರೊಂದಿಗೆ ಚಾಟ್ ಮಾಡುತ್ತಿರುವುದನ್ನು ನೋಡಬಹುದು. ಫೋಟೋಗ್ರಾಫರ್ ಜಿಮ್ ರೈಡೆಲ್ ಎಕ್ಸ್‌ನಲ್ಲಿ ಲಲಿತ್ ಮೋದಿ ಮತ್ತು ವಿಜಯ್ ಮಲ್ಯ ಅವರ ಫೋಟೋವನ್ನು ಹಂಚಿಕೊಂಡಿದ್ದಾರೆ. ಲಂಡನ್‌ನಲ್ಲಿ ವಿಜಯ್ ಮಲ್ಯ ಅವರ 70ನೇ ಪ್ರಿ-ಬರ್ತಡೇ ಪಾರ್ಟಿ ಏರ್ಪಡಿಸಿದ್ದಕ್ಕಾಗಿ ಲಲಿತ್ ಮೋದಿಗೆ ಧನ್ಯವಾದ ಅರ್ಪಿಸಿದ್ದಾರೆ.
ಇದನ್ನೂ ಓದಿ: ಬ್ಯಾಂಕ್ ಸಾಲ ಜಟಾಪಟಿ: ಲೆಕ್ಕಪತ್ರಕ್ಕಾಗಿ ಹೈಕೋರ್ಟ್ ಮೊರೆ ಹೋದ ವಿಜಯ್ ಮಲ್ಯ
ಲಲಿತ್ ಮೋದಿ ಅವರು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ನನ್ನ ಮನೆಯಲ್ಲಿ ನನ್ನ ಸ್ನೇಹಿತ ವಿಜಯ್ ಮಲ್ಯ ಅವರ ಹುಟ್ಟುಹಬ್ಬಕ್ಕೂ ಮುನ್ನ ನಡೆದ ಪಾರ್ಟಿಗೆ ಬಂದಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು” ಎಂದು ಅವರು ಹೇಳಿದ್ದಾರೆ.
Thank you all for coming and celebrating my friend @TheVijayMallya pre birthday bash at my house 🥰🙏🏽🤗 https://t.co/gXBVRhKy75
— Lalit Kumar Modi (@LalitKModi) December 17, 2025
ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ನೆಟ್ಟಿಗರು ಲಲಿತ್ ಮೋದಿ ಮತ್ತು ವಿಜಯ್ ಮಲ್ಯ ಅವರನ್ನು ಹಲವು ವರ್ಷಗಳ ಕಾಲ ಭಾರತೀಯ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುತ್ತಿದ್ದರೂ ಸಹ ಸಂತೋಷದ ಸಮಯವನ್ನು ಎಂಜಾಯ್ ಮಾಡುತ್ತಿರುವುದಕ್ಕಾಗಿ ಟ್ರೋಲ್ ಮಾಡಿದ್ದಾರೆ.
View this post on Instagram
ಈ ವರ್ಷದ ಆರಂಭದಲ್ಲಿ ಲಲಿತ್ ಮೋದಿ ಆಯೋಜಿಸಿದ್ದ ಖಾಸಗಿ ಕರೋಕೆ ಸಂಜೆಯಲ್ಲಿ ಕೂಡ ಲಲಿತ್ ಮೋದಿ ಹಾಗೂ ವಿಜಯ್ ಮಲ್ಯ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇದರಲ್ಲಿ ಕ್ರಿಕೆಟಿಗ ಕ್ರಿಸ್ ಗೇಲ್ ಸೇರಿದಂತೆ 300ಕ್ಕೂ ಹೆಚ್ಚು ಅತಿಥಿಗಳು ಪಾಲ್ಗೊಂಡಿದ್ದರು.
ಇದನ್ನೂ ಓದಿ: ದೇಶಭ್ರಷ್ಟ ಅನ್ನಿ ಒಪ್ತೀನಿ, ಆದ್ರೆ ಕಳ್ಳ ಅನ್ನೋಕೆ ನಾನೇನು ಕದ್ದಿದ್ದೀನಿ? ಹೊಟ್ಟೆಯೊಳಗಿನ ಸಂಕಟವೆಲ್ಲಾ ಬಿಚ್ಚಿಟ್ಟ ವಿಜಯ್ ಮಲ್ಯ
ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಕುಸಿತಕ್ಕೆ ಸಂಬಂಧಿಸಿದ ಕಾನೂನು ತೊಂದರೆಗಳ ನಡುವೆ ವಿಜಯ್ ಮಲ್ಯ ಮಾರ್ಚ್ 2016ರಲ್ಲಿ ಭಾರತವನ್ನು ತೊರೆದರು. 9,000 ಕೋಟಿ ರೂ.ಗಳಿಗೂ ಹೆಚ್ಚಿನ ಮೌಲ್ಯದ ಬ್ಯಾಂಕ್ ಸಾಲಗಳಿಗೆ ಸಂಬಂಧಿಸಿದಂತೆ ವಂಚನೆ ಮತ್ತು ಹಣ ವರ್ಗಾವಣೆ ಆರೋಪದ ಮೇಲೆ ಭಾರತೀಯ ಅಧಿಕಾರಿಗಳು ಅವರನ್ನು ಇಂಗ್ಲೆಂಡ್ನಿಂದ ಭಾರತಕ್ಕೆ ಹಸ್ತಾಂತರ ಮಾಡಲು ಹೋರಾಡುತ್ತಲೇ ಇದ್ದಾರೆ.
ಐಪಿಎಲ್ ಅನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲಲಿತ್ ಮೋದಿ, ಬಿಡ್ ರಿಗ್ಗಿಂಗ್ ಮತ್ತು ಹಣ ವರ್ಗಾವಣೆ ಸೇರಿದಂತೆ ಹಣಕಾಸಿನ ಅಕ್ರಮಗಳ ಆರೋಪದ ನಂತರ ಅವರನ್ನು ಐಪಿಎಲ್ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಅದಾದ ನಂತರ 2010ರಲ್ಲಿ ಅವರು ಭಾರತವನ್ನು ತೊರೆದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




