Vijay Mallya: ನನ್ನ ಖುಷಿಗೆ ಪಾರವೇ ಇಲ್ಲ: ತನ್ನ ಪಾಡ್ಕ್ಯಾಸ್ಟ್ಗೆ ಸಿಕ್ಕ ಭರ್ಜರಿ ಸ್ಪಂದನೆಗೆ ವಿಜಯ್ ಮಲ್ಯ ಸಂತಸ
Vijay Mallya express joy over his podcast with Raj Shamani: 2016ರಲ್ಲಿ ದೇಶದಿಂದ ಹೊರಹೋದ ಬಳಿಕ ವಿಜಯ್ ಮಲ್ಯ ಮೊದಲ ಬಾರಿಗೆ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದಾರೆ. ಜೂನ್ 5ರಂದು ರಾಜ್ ಶಮಾನಿ ಅವರ ಯೂಟ್ಯೂಬ್ ವಾಹಿನಿಗೆ ನೀಡಿದ ಪಾಡ್ಕ್ಯಾಸ್ಟ್ನಲ್ಲಿ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ವಿರುದ್ಧದ ಆರೋಪಗಳ ಬಗ್ಗೆ ಅವರು ಬಿಡಿಬಿಡಿಯಾಗಿ ವಿವರಣೆ ನೀಡಿದ್ದಾರೆ.

ನವದೆಹಲಿ, ಜೂನ್ 10: ವಿಜಯ್ ಮಲ್ಯ ಕಳೆದ ವಾರ ನಾಲ್ಕು ಗಂಟೆಯಷ್ಟು ಸುದೀರ್ಘ ಕಾಲ ನೀಡಿದ್ದ ಪಾಡ್ಕ್ಯಾಸ್ಟ್ ಭರ್ಜರಿ ವೀಕ್ಷಣೆ ಪಡೆದಿದೆ. ಎರಡು ಕೋಟಿಗೂ ಅಧಿಕ ವೀಕ್ಷಣೆ ಕಂಡು ವಿಜಯ್ ಮಲ್ಯ (Vijay Mallya) ಖುದ್ದು ಸಂತಸ ಪಟ್ಟಿದ್ದಾರೆ. ತಮ್ಮ ಎಕ್ಸ್ ಪೋಸ್ಟ್ವೊಂದರಲ್ಲಿ ಅವರು ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ. ತಾನು ವಿವರಿಸಿದ ನಿಜ ವಿಚಾರಗಳು ಸಾಕಷ್ಟು ಜನರನ್ನು ತಲುಪಿರುವುದು ತನಗೆ ಬಹಳ ಖುಷಿ ಕೊಟ್ಟಿದೆ ಎಂದು ಮಲ್ಯ ಹೇಳಿದ್ದಾರೆ.
‘ನನಗೆಷ್ಟು ಖುಷಿ ಆಗುತ್ತಿದೆ ಎಂಬುದನ್ನು ಹೇಗೆ ವರ್ಣಿಸುವುದು ಗೊತ್ತಾಗುತ್ತಿಲ್ಲ. ರಾಜ್ ಶಮಾನಿ ಜೊತೆಗಿನ ನನ್ನ ಪಾಡ್ಕ್ಯಾಸ್ಟ್ ನಾಲ್ಕು ದಿನದಲ್ಲಿ 20 ಮಿಲಿಯನ್ ವೀಕ್ಷಣೆ ಪಡೆದಿದೆ. ನಾಲ್ಕು ಗಂಟೆಗೂ ಹೆಚ್ಚು ಅವಧಿಯ ಈ ಪಾಡ್ಕ್ಯಾಸ್ಟ್ ವೀಕ್ಷಿಸಲು ಸಮಯ ನೀಡಿದ ಎಲ್ಲರಿಗೂ ಧನ್ಯವಾದ ಹೇಳಲು ಬಯಸುತ್ತೇನೆ. ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ನಲ್ಲಿ ಅದೆಷ್ಟು ರೀಪೋಸ್ಟ್ಗಳಾಗಿವೆಯೋ ಬಹಳ ಸಂತಸ ಆಗುತ್ತಿದೆ. ನಿಮಗೆಲ್ಲಾ ಆ ದೇವರು ಆಶೀರ್ವದಿಸಲಿ’ ಎಂದು ವಿಜಯ್ ಮಲ್ಯ ತಮ್ಮ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
To say that I am humbled and overwhelmed is well short of what I truly feel. A big heartfelt thank you to all those who took the time to watch my 4 hour plus podcast with @rajshamani 20 million views on YouTube alone in 4 days and god knows how many more reposts on Instagram and…
— Vijay Mallya (@TheVijayMallya) June 9, 2025
ಇದನ್ನೂ ಓದಿ: ಆರ್ಸಿಬಿ ಮಾರಾಟ, 17,000 ಕೋಟಿ ರೂಗೆ? ಫ್ರಾಂಚೈಸಿ ಮಾರುವ ಯೋಚನೆಯಲ್ಲಿದ್ದಾರಾ ಮಾಲೀಕರು?
ಜೂನ್ 5ರಂದು ವಿಜಯ್ ಮಲ್ಯ ಜೊತೆಗಿನ ಪಾಡ್ಕ್ಯಾಸ್ಟ್ ಅನ್ನು ರಾಜ್ ಶಮಾನಿ ಪ್ರಕಟಿಸಿದ್ದರು. ಈ ವರದಿ ಬರೆಯುವಾಗ ಆ ವಿಡಿಯೋ ಪಡೆದ ವೀಕ್ಷಣೆ 2.12 ಕೋಟಿ. ರಾಜ್ ಶಮಾನಿ ಅವರ ಯೂಟ್ಯೂಬ್ ವಿಡಿಯೋಗಳ ಪೈಕಿ ಇದು ಎರಡನೇ ಅತಿಹೆಚ್ಚು ವೀಕ್ಷಣೆ ಹೊಂದಿದೆ. ವರ್ಷದ ಹಿಂದೆ ಇಂಡಿಯನ್ ಸ್ಪೈ ಬಗ್ಗೆ ಅವರು ಮಾಡಿದ ವಿಡಿಯೋ 2.4 ಕೋಟಿ ವೀಕ್ಷಣೆ ಪಡೆದಿತ್ತು. ವಿಜಯ್ ಮಲ್ಯ ವಿಡಿಯೋ ಅದನ್ನೂ ಹಿಂದಿಕ್ಕುವ ಸಾಧ್ಯತೆ ಇದೆ.
ಪಾಡ್ಕ್ಯಾಸ್ಟ್ನಲ್ಲಿ ವಿಜಯ್ ಮಲ್ಯ ಹೇಳಿದ್ದೇನು?
ಬಹಳ ಸುದೀರ್ಘ ಎನಿಸುವ ಪಾಡ್ಕ್ಯಾಸ್ಟ್ನಲ್ಲಿ ವಿಜಯ್ ಮಲ್ಯ ನಾನಾ ಪ್ರಶ್ನೆಗಳಿಗೆ ಉತ್ತರ ಕೊಡಲು ಯತ್ನಿಸಿದ್ದಾರೆ. ತಾನು ವೈಯಕ್ತಿಕವಾಗಿ ಯಾವ ಸಾಲ ಮಾಡಿಲ್ಲ. ಕಿಂಗ್ಫಿಶರ್ ಸಂಸ್ಥೆ ಮಾಡಿದ ಸಾಲ ಅದು. ತಾನು ಸಾಲ ತೀರಿಸುತ್ತೇನೆ ಎಂದು ಬಾರಿ ಬಾರಿ ಹೇಳಿದರೂ ಬ್ಯಾಂಕುಗಳು ಕೇಳಲಿಲ್ಲ. ತಾನೆಷ್ಟು ಸಾಲ ಕೊಡಬೇಕು ಎಂದು ಲೆಕ್ಕವನ್ನೂ ಕೊಡುತ್ತಿಲ್ಲ. ತಾನು ಬಾಕಿ ಉಳಿಸಿಕೊಂಡಿರುವ ಸಾಲಕ್ಕಿಂತ ಹಲವು ಪಟ್ಟು ಹೆಚ್ಚು ಹಣವನ್ನು ಬ್ಯಾಂಕುಗಳು ಜಫ್ತಿ ಮಾಡಿಕೊಂಡಿವೆ. ಆದರೂ ಕೂಡ ನನ್ನನ್ನು ಕಳ್ಳ ಎಂದು ಕರೆಯಲಾಗುತ್ತಿದೆ ಎಂದು ವಿಜಯ್ ಮಲ್ಯ ಈ ಪಾಡ್ಕ್ಯಾಸ್ಟ್ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ದೇಶಭ್ರಷ್ಟ ಅನ್ನಿ ಒಪ್ತೀನಿ, ಆದ್ರೆ ಕಳ್ಳ ಅನ್ನೋಕೆ ನಾನೇನು ಕದ್ದಿದ್ದೀನಿ? ಹೊಟ್ಟೆಯೊಳಗಿನ ಸಂಕಟವೆಲ್ಲಾ ಬಿಚ್ಚಿಟ್ಟ ವಿಜಯ್ ಮಲ್ಯ
ತಾನು ಪ್ರಕರಣಗಳಿಂದ ತಪ್ಪಿಸಿಕೊಳ್ಳಲು ದೇಶಬಿಟ್ಟು ಹೋಗಲಿಲ್ಲ. ಜಿನಿವಾದಲ್ಲಿ ಮೂರು ತಿಂಗಳ ಹಿಂದೆಯೇ ಪೂರ್ವನಿಗದಿಯಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗಿದ್ದೆ. ಸಂಸತ್ನಲ್ಲಿ ಹಣಕಾಸು ಸಚಿವರಿಗೆ ತಿಳಿಸಿಯೇ ಏರ್ಪೋರ್ಟ್ಗೆ ಹೋಗಿದ್ದೆ. ಕದ್ದು ಹೋಗುವ ಉದ್ದೇಶ ಇರಲಿಲ್ಲ. ತತ್ಕ್ಷಣವೇ ಮರಳಿ ಬಾರುವ ಸಂದರ್ಭ ಅದಾಗಿರಲಿಲ್ಲ. ಹೀಗಾಗಿ, ಮರಳಿ ಬರಲಿಲ್ಲ ಎಂದು ವಿಜಯ್ ಮಲ್ಯ ವಿವರಣೆ ಕೊಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ