ಆರ್ಸಿಬಿ ಮಾರಾಟ, 17,000 ಕೋಟಿ ರೂಗೆ? ಫ್ರಾಂಚೈಸಿ ಮಾರುವ ಯೋಚನೆಯಲ್ಲಿದ್ದಾರಾ ಮಾಲೀಕರು?
RCB Stake Sale: ಐಪಿಎಲ್ 2025 ಸೀಸನ್ನ ಚಾಂಪಿಯನ್ ಆರ್ಸಿಬಿ (Royal Challengers Bengaluru)ತಂಡವನ್ನು ಮಾರಲು ಯೋಜಿಸಲಾಗುತ್ತಿದೆ ಎನ್ನುವ ಸುದ್ದಿ ಕೇಳಿಬಂದಿದೆ. ಆರ್ಸಿಬಿ ಮಾಲೀಕರಾಗಿರುವ ಬ್ರಿಟನ್ ಮೂಲದ ಡಿಯಾಜಿಯೋ ಕಂಪನಿ ವಿವಿಧ ಸಲಹೆಗಾರರೊಂದಿಗೆ ಈ ಸಂಬಂಧ ಸಮಾಲೋಚನೆ ನಡೆಸುತ್ತಿದೆ ಎಂದು ವರದಿಯೊಂದು ಹೇಳಿದೆ. ಆರ್ಸಿಬಿಗೆ 2 ಬಿಲಿಯನ್ ಡಾಲರ್ ವ್ಯಾಲ್ಯುಯೇಶನ್ಗೆ ನಿರೀಕ್ಷಿಸಲಾಗಿದೆ. ಆದರೆ, ಮಾರಾಟ ನಿರ್ಧಾರ ಖಚಿತ ಎಂದು ಹೇಳಲು ಸಾಧ್ಯವಿಲ್ಲ.

ಬೆಂಗಳೂರು, ಜೂನ್ 10: ಐಪಿಎಲ್ನ ನೂತನ ಚಾಂಪಿಯನ್ ಎನಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB- Royal Challengers Bangalore) ತಂಡವನ್ನು ಮಾರುವ ಸಾಧ್ಯತೆ ಇದೆ. ಬ್ರಿಟನ್ ಮೂಲದ ಡಿಯಾಜಿಯೋ ಕಂಪನಿ ಸದ್ಯ ಆರ್ಸಿಬಿಯ ಮಾಲಿಕತ್ವ ಹೊಂದಿದೆ. ಇದೀಗ ಫ್ರಾಂಚೈಸಿಯನ್ನು ಮಾರುವ ಬಗ್ಗೆ ಡಿಯಾಜಿಯೋ (Diageo) ಆಲೋಚಿಸುತ್ತಿದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ. ಸಂಪೂರ್ಣವಾಗಿ ಮಾರುವುದೋ ಅಥವಾ ಭಾಗಶಃ ಮಾರುವುದೋ ಎಂಬುದನ್ನು ಯೋಚಿಸಲಾಗುತ್ತಿದೆ. ಈ ಬಗ್ಗೆ ಸಲಹೆಗಾರರ ಜೊತೆ ಡಿಯಾಜಿಯೋ ಸಮಾಲೋಚನೆ ನಡೆಸುತ್ತಿರುವುದು ಈ ವರದಿಯಲ್ಲಿ ತಿಳಿಸಲಾಗಿದೆ.
17,000 ಕೋಟಿ ರೂ ಮೊತ್ತಕ್ಕೆ ಆರ್ಸಿಬಿ ಮಾರಾಟ?
ವರದಿ ಪ್ರಕಾರ, ಆರ್ಸಿಬಿ ಫ್ರಾಂಚೈಸಿ ಎರಡು ಬಿಲಿಯನ್ ಡಾಲರ್ ವ್ಯಾಲ್ಯುಯೇಶನ್ ಇರಬಹುದೆಂದು ನಿರೀಕ್ಷಿಸಲಾಗುತ್ತಿದೆ. ಅಂದರೆ ಬರೋಬ್ಬರಿ 17,000 ಕೋಟಿ ರೂ ಮೊತ್ತಕ್ಕೆ ಯಾರಾದರೂ ಖರೀದಿಸಲು ಮುಂದಾದರೆ ಆರ್ಸಿಬಿಯನ್ನು ಸೇಲ್ ಮಾಡುವ ಸಾಧ್ಯತೆ ಇದೆ.
ಸದ್ಯ ಯಾವ ವಿಚಾರವೂ ಅಂತಿಮವಾಗಿಲ್ಲ. ಆರ್ಸಿಬಿಯನ್ನು ಮಾರಾಟ ಮಾಡಬಹುದು, ಅಥವಾ ಮಾಡದೇ ಹೋಗಬಹುದು. ಈಗಲೇ ಏನೂ ಹೇಳಲು ಆಗದು ಎಂದು ಈ ವರದಿಯಲ್ಲಿ ಮೂಲಗಳು ಹೇಳಿವೆ ಎನ್ನಲಾಗಿದೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡಕ್ಕೆ ಯುನೈಟೆಡ್ ಸ್ಪಿರಿಟ್ಸ್ ಮಾಲಕ ಕಂಪನಿ. ಆದರೆ, ವಿಜಯ್ ಮಲ್ಯ ಅವರ ಬಳಿ ಇದ್ದ ಯುನೈಟೆಡ್ ಸ್ಪಿರಿಟ್ಸ್ ಅನ್ನು ಡಿಯಾಜಿಯೋ ಕಂಪನಿ ಖರೀದಿ ಮಾಡಿತ್ತು. ಈ ಮೂಲಕ ಆರ್ಸಿಬಿ ಮಾಲಕತ್ವ ಡಿಯಾಜಿಯೋದ್ದಾಗಿದೆ. ಈ ತಂಡದ ಮಾರಾಟ ಸಂಬಂಧ ಡಿಯಾಜಿಯೋ ಆಗಲೀ, ಯುನೈಟೆಡ್ ಸ್ಪಿರಿಟ್ಸ್ ಆಗಲೀ ತಮಗೆ ಹೇಳಿಕೆ ನೀಡಿಲ್ಲವೆಂದು ವರದಿಯಲ್ಲಿ ಹೇಳಲಾಗಿದೆ. ಈ ಕುರಿತು ಬ್ಲೂಮ್ಬರ್ಗ್ ವರದಿ ಮಾಡಿದೆ.
ಇದನ್ನೂ ಓದಿ: ಕಾಲ್ತುಳಿತದ ಎಫೆಕ್ಟ್… ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪಂದ್ಯಗಳು ಶಿಫ್ಟ್
ಆರ್ಸಿಬಿ ಮಾರಾಟದ ಅಲೋಚನೆ ಯಾಕಿರಬಹುದು?
ಆರ್ಸಿಬಿ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಕಪ್ ಗೆದ್ದಿದೆ. ಅದರ ಬೆನ್ನಲ್ಲೇ ವಿಕ್ಟರಿ ಸೆಲಬ್ರೇಶನ್ ಕಾರ್ಯಕ್ರಮ ಯಡವಟ್ಟಾಗಿ 11 ಮಂದಿ ದುರ್ಮರಣ ಅಪ್ಪಿರುವುದು ಐಪಿಎಲ್ ಜಯದ ಖುಷಿಯನ್ನು ಇಲ್ಲವಾಗಿಸಿದೆ. ಈ ಕಾರಣಕ್ಕೆ ಫ್ರಾಂಚೈಸಿಯನ್ನು ಮಾರಲು ಮುಂದಾಗಿದೆಯಾ? ಇದು ಕಾರಣವಿರುವ ಸಾಧ್ಯತೆ ಇಲ್ಲ. ಐಪಿಎಲ್ನಲ್ಲಿ ತಂಬಾಕು ಮತ್ತು ಮದ್ಯದ ಬ್ರ್ಯಾಂಡ್ಗಳ ಪ್ರಚಾರವನ್ನು ನಿಷೇಧಿಸುವ ಬಗ್ಗೆ ಸರ್ಕಾರ ಆಲೋಚಿಸುತ್ತಿದೆ. ಒಂದೊಮ್ಮೆ ಸರಕಾರ ಈ ವಿಚಾರದಲ್ಲಿ ಗಟ್ಟಿಯಾಗಿ ನಿಂತುಕೊಂಡರೆ, ಡಿಯಾಜಿಯೋಗೆ ಆರ್ ಸಿ ಬಿ ಯನ್ನು ತನ್ನ ಕೈಯಲ್ಲಿ ಇಟ್ಟುಕೊಳ್ಳುವುದು ಕಷ್ಟವಾಗಬಹುದು. ಆ ಕಾರಣಕ್ಕೆ ಡಿಯಾಜಿಯೋ ಐಪಿಎಲ್ನಿಂದ ಹಿಂದಕ್ಕೆ ಸರಿಯಲು ನಿರ್ಧರಿಸುವ ಸಾಧ್ಯತೆ ಇಲ್ಲದಿಲ್ಲ.
ಡಿಯಾಜಿಯೋ ಆಲ್ಕೋಹಾಲ್ ಉತ್ಪನ್ನಗಳ ಕಂಪನಿ. ಐಪಿಎಲ್ನಲ್ಲಿ ತಂಬಾಕು ಮತ್ತು ಆಲ್ಕೋಹಾಲ್ ಬ್ರ್ಯಾಂಡ್ಗಳ ಜಾಹೀರಾತನ್ನು ಮತ್ತು ಪ್ರಚಾರವನ್ನು ನಿಷೇಧಿಸಲು ಆರೋಗ್ಯ ಸಚಿವಾಲಯ ಚಿಂತಿಸುತ್ತಿದೆ. ಅಷ್ಟೇ ಅಲ್ಲ, ಕ್ರೀಡಾಪಟುಗಳು ಇತರ ಅನಾರೋಗ್ಯಕರ ವಸ್ತುಗಳನ್ನು ನೇರವಾಗಿಯಾಗಲೀ, ಪರೋಕ್ಷವಾಗಿಯಾಗಲೀ ಪ್ರಚಾರ ಮಾಡದಂತೆ ನಿಯಮ ತರುವ ಸಾಧ್ಯತೆ ಇದೆ. ಇದರಿಂದ ಡಿಯಾಜಿಯೋ ಐಪಿಎಲ್ನಿಂದ ಹಿಂದಕ್ಕೆ ಸರಿದರೂ ಸರಿಯಬಹುದು.
ಇದನ್ನೂ ಓದಿ: ದೇಶಭ್ರಷ್ಟ ಅನ್ನಿ ಒಪ್ತೀನಿ, ಆದ್ರೆ ಕಳ್ಳ ಅನ್ನೋಕೆ ನಾನೇನು ಕದ್ದಿದ್ದೀನಿ? ಹೊಟ್ಟೆಯೊಳಗಿನ ಸಂಕಟವೆಲ್ಲಾ ಬಿಚ್ಚಿಟ್ಟ ವಿಜಯ್ ಮಲ್ಯ
ಮಾರುಕಟ್ಟೆ ಸಂಕಷ್ಟದಲ್ಲಿ ಡಿಯಾಜಿಯೋ; ಇದು ಕಾರಣವಾ?
ಡಿಯಾಜಿಯೋ ಕಂಪನಿಯ ಪ್ರೀಮಿಯಮ್ ಉತ್ಪನ್ನಗಳಿಗೆ ಅಮೆರಿಕ ಅತಿ ದೊಡ್ಡ ಮಾರುಕಟ್ಟೆ ಎನಿಸಿದೆ. ಅಲ್ಲಿ ಮಾರಾಟ ಕಡಿಮೆಗೊಂಡಿದೆ. ಜೊತೆಗೆ ಟ್ಯಾರಿಫ್ ಏರಿಕೆ ಇದೆ. ಇದರಿಂದ ಡಿಯಾಜಿಯೋಗೆ ನಿರೀಕ್ಷಿತ ಬ್ಯುಸಿನೆಸ್ ಇಲ್ಲ. ತನ್ನ ಆಪರೇಟಿಂಗ್ ವೆಚ್ಚವನ್ನು ಕಡಿಮೆ ಮಾಡಲು ಅದು ಪ್ರಯತ್ನಿಸುತ್ತಿದೆ. ತನ್ನ ಉದ್ಯಮಕ್ಕೆ ಸಂಬಂಧ ಪಡದ ಎಲ್ಲಾ ಆಸ್ತಿ ಮತ್ತು ಬ್ಯುಸಿನೆಸ್ ಬಗ್ಗೆ ಮರುಅವಲೋಕಿಸುತ್ತಿದೆ. ಈ ನಿಟ್ಟಿನಲ್ಲಿ ಆರ್ಸಿಬಿ ಮಾರುವುದೋ ಬಿಡುವುದೋ ಎನ್ನುವ ಬಗ್ಗೆಯೂ ಅದು ಯೋಚಿಸುತ್ತಿರಬಹುದು. ಲಾಭದ ಕುದುರೆಯಾಗಿರುವ ಆರ್ಸಿಬಿಯನ್ನು ಮಾರುವ ಸಾಧ್ಯತೆ ಕಡಿಮೆ ಇರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:41 pm, Tue, 10 June 25