AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್​-ಇಸ್ರೇಲ್ ಯುದ್ಧ ಪರಿಣಾಮ: ತರಕಾರಿ ಬೆಲೆ ದಿಢೀರ್ ಕುಸಿತ! ಯಾವ ತರಕಾರಿಗೆ ಎಷ್ಟಾಗಿದೆ ನೋಡಿ

ಇರಾನ್-ಇಸ್ರೇಲ್ ಯುದ್ಧದ ಪರಿಣಾಮವಾಗಿ ವಾಣಿಜ್ಯ ಬಳಕೆಯ ಸಿಲಿಂಡರ್ ಲಭ್ಯತೆ ಕುಸಿದಿದ್ದು, ಹೋಟೆಲ್ ಉದ್ಯಮಕ್ಕೆ ಭಾರಿ ನಷ್ಟವಾಗಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಹೋಟೆಲ್‌ಗಳು ಮುಚ್ಚಿರುವುದರಿಂದ ತರಕಾರಿ ಬೇಡಿಕೆ ತೀವ್ರವಾಗಿ ಕುಸಿದಿದೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಬೆಲೆಗಳು ದಿಢೀರ್ ಕುಸಿತ ಕಂಡಿದ್ದು, ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ.

ಇರಾನ್​-ಇಸ್ರೇಲ್ ಯುದ್ಧ ಪರಿಣಾಮ: ತರಕಾರಿ ಬೆಲೆ ದಿಢೀರ್ ಕುಸಿತ! ಯಾವ ತರಕಾರಿಗೆ ಎಷ್ಟಾಗಿದೆ ನೋಡಿ
ತರಕಾರಿ ಬೆಲೆ ದಿಢೀರ್ ಕುಸಿತImage Credit source: tv9
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Edited By: |

Updated on: Mar 16, 2026 | 9:29 AM

Share

ಕೋಲಾರ, ಮಾರ್ಚ್ 16: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧವು ಮಧ್ಯಪ್ರಾಚ್ಯಕ್ಕೆ ಸೀಮಿತವಾಗದೆ, ಅದರ ಆರ್ಥಿಕ ಪರಿಣಾಮಗಳು ಕರ್ನಾಟಕಕ್ಕೂ ತಟ್ಟಿದೆ. ಕರ್ನಾಟಕದ ಹೋಟೆಲ್ ಉದ್ಯಮದ ಬೆನ್ನಲ್ಲೇ ಇದೀಗ ಕೃಷಿ ವಲಯಕ್ಕೂ ಯುದ್ಧದ ಬಿಸಿ ತಟ್ಟಲು ಶುರುವಾಗಿದೆ. ಯುದ್ಧದ ಕಾರಣದಿಂದಾಗಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿ ಉಂಟಾಗಿರುವ ಅಡಚಣೆಗಳು ಹೋಟೆಲ್ ಉದ್ಯಮಕ್ಕೆ ಭಾರಿ ನಷ್ಟವನ್ನುಂಟು ಮಾಡಿವೆ. ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಪ್ರಮುಖ ನಗರಗಳಲ್ಲಿ ಮತ್ತು ಕೋಲಾರದಂತಹ (Kolar) ಜಿಲ್ಲೆಗಳಲ್ಲಿಯೂ ಹೋಟೆಲ್‌ಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟಿವೆ. ಇದು ತರಕಾರಿಗಳ ಬೇಡಿಕೆಯನ್ನು ಗಣನೀಯವಾಗಿ ಕುಸಿಯುವಂತೆ ಮಾಡಿದೆ. ಸಾಮಾನ್ಯವಾಗಿ, ತರಕಾರಿ ಉತ್ಪಾದನೆಯ ಶೇಕಡಾ 60 ರಷ್ಟಕ್ಕೆ ಹೋಟೆಲ್ ಮತ್ತು ಆಹಾರ ಉದ್ಯಮದಿಂದಲೇ ಬೇಡಿಕೆ ಇದೆ. ಆದರೆ, ಹೋಟೆಲ್‌ಗಳು ಮುಚ್ಚಿರುವುದರಿಂದ ಈ ಬೇಡಿಕೆ ಇಲ್ಲವಾಗಿದೆ. ಇದರಿಂದಾಗಿ ತರಕಾರಿ ಬೆಲೆ (Vegetable Prices) ಗಣನೀಯ ಕುಸಿತವಾಗಿದೆ.

ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ, ಹಿಂದೆ 40-50 ರೂ.ನಂತೆ ಮಾರಾಟವಾಗುತ್ತಿದ್ದ ತರಕಾರಿ ಬೆಲೆಗಳು ಈಗ 10-20 ರೂ.ಗೆ ಕುಸಿದಿವೆ. ಕೆಲವು ತರಕಾರಿಗಳಾದ ಕ್ಯಾಬೇಜ್ 2-3 ರೂ, ಹೂಕೋಸು 5-8 ರೂ.ಗೆ ಮಾರಾಟವಾಗುತ್ತಿವೆ. ಕ್ಯಾಪ್ಸಿಕಂ, ಹೀರೆಕಾಯಿ, ಬಜ್ಜಿ ಮೆಣಸಿನಕಾಯಿ, ಸ್ವೀಟ್ ಕಾರ್ನ್, ಕ್ಯಾರೆಟ್, ಬದನೆಕಾಯಿ ಮುಂತಾದ ಎಲ್ಲ ತರಕಾರಿಗಳ ಬೆಲೆಯೂ ತೀವ್ರ ಕುಸಿತ ಕಂಡಿದೆ. ಬಜ್ಜಿ, ಬೋಂಡಾ, ಗೋಬಿ ಮಂಚೂರಿ, ನೂಡಲ್ಸ್, ಫ್ರೈಡ್ ರೈಸ್ ಮಾಡುವ ಸಣ್ಣಪುಟ್ಟ ಹೋಟೆಲ್‌ಗಳು ಮತ್ತು ತಿಂಡಿ ಅಂಗಡಿಗಳು ಸಹ ಅನಿಲ ಸಿಲಿಂಡರ್‌ಗಳ ಕೊರತೆಯಿಂದಾಗಿ ಮುಚ್ಚಿರುವುದೇ ಬೆಲೆ ಕುಸಿತಕ್ಕೆ ಕಾರಣವಾಗಿದೆ. ರೈತರು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ, ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಕಷ್ಟಪಟ್ಟು ತರಕಾರಿ ಬೆಳೆಗಳನ್ನು ಬೆಳೆದಿದ್ದಾರೆ. ಆದರೆ, ಯುದ್ಧದ ಪರಿಣಾಮವಾಗಿ ದಿಢೀರ್ ಬೆಲೆ ಕುಸಿತದಿಂದಾಗಿ ಅವರು ತಮ್ಮ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಕೇವಲ ಕರ್ನಾಟಕ ಮಾತ್ರವಲ್ಲದೆ, ಹೊರ ರಾಜ್ಯಗಳಲ್ಲೂ ಇದೇ ರೀತಿಯ ಪರಿಸ್ಥಿತಿಯಿದೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ. ಬಿಸಿಲಿನ ತಾಪ ಹೆಚ್ಚಾಗಿರುವಾಗ ತರಕಾರಿ ಬೆಲೆಗಳು ಹೆಚ್ಚಿರಬೇಕಿತ್ತು, ಆದರೆ ಯುದ್ಧದ ಕಾರ್ಮೋಡವು ಇಡೀ ದೇಶದ ಕೃಷಿ ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: 200ಕ್ಕೂ ಹೆಚ್ಚು ಹೋಟೆಲ್‌ ಸಿಬ್ಬಂದಿಯ ಕೆಲಸಕ್ಕೂ ಕುತ್ತು: ಸಂಬಳ ಕಡಿತ, ಉದ್ಯೋಗ ಕಳೆದುಕೊಳ್ಳುವ ಆತಂಕ

ಹೋಟೆಲ್ ಉದ್ಯಮವು ಮತ್ತೆ ಚೇತರಿಸಿಕೊಂಡರೆ ಮಾತ್ರ ತರಕಾರಿಗಳಿಗೆ ಸರಿಯಾದ ಬೆಲೆ ಸಿಗುತ್ತದೆ ಎಂಬುದು ತರಕಾರಿ ವ್ಯಾಪಾರಸ್ಥರ ಅಭಿಪ್ರಾಯ. ಪ್ರಸ್ತುತ ಪರಿಸ್ಥಿತಿಯನ್ನು ಸರ್ಕಾರ ಆದಷ್ಟು ಬೇಗ ನಿಭಾಯಿಸಿ, ರೈತರ ನೆರವಿಗೆ ಧಾವಿಸಬೇಕು ಎಂದು ರೈತರು ಮತ್ತು ವ್ಯಾಪಾರಸ್ಥರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us