ದೆಹಲಿ:26 ದಿನಗಳ ಕಾಲ ನಡೆಯೋ ಸಂಸತ್ ಚಳಿಗಾಲದ ಅಧಿವೇಶನ ಇಂದಿನಿಂದ ಪ್ರಾರಂಭವಾಗಲಿದೆ. ಅಧಿವೇಶನದಲ್ಲಿ ಹಲವು ಮಸೂದೆಗಳಿಗೆ ಅಂಗೀಕಾರ ಪಡೆಯೋ ಲೆಕ್ಕಾಚಾರದಲ್ಲಿ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಆರ್ಥಿಕ ಹಿಂಜರಿತ, ನಿರುದ್ಯೋಗದಂಥ ಸಮಸ್ಯೆಗಳನ್ನ ಮುಂದಿಟ್ಟುಕೊಂಡು ಸರ್ಕಾರವನ್ನ ಟೀಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ.
ಕೇಂದ್ರ ಸರ್ಕಾರಕ್ಕೆ ‘ಬಿಸಿ’ ಮುಟ್ಟಿಸಲು ವಿಪಕ್ಷಗಳ ಸಿದ್ಧತೆ:
ಅಧಿವೇಶನ ಹಿನ್ನೆಲೆ ನಿನ್ನೆ ಸರ್ವಪಕ್ಷ ಸಭೆ ಕರೆಯಲಾಗಿತ್ತು. ಸಭೆಯಲ್ಲಿ 27 ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ರು. ಅಧಿವೇಶನ ಸುಗಮವಾಗಿ ನಡೆಯಲು ಎಲ್ಲರೂ ಸಹಕರಿಸುವಂತೆ ಲೋಕಸಭೆ ಸ್ಪೀಕರ್ ಮನವಿ ಮಾಡಿದ್ದಾರೆ. ಸದನದ ನಿಯಮಗಳಿಗೆ ಅನುಗುಣವಾಗಿ ಎಲ್ಲಾ ವಿಚಾರಗಳ ಚರ್ಚೆಗೆ ಸರ್ಕಾರ ಸಿದ್ಧವಿದೆ ಅಂತ ಪ್ರಧಾನಿ ಮೋದಿ ಹೇಳಿದ್ದಾರೆ.
‘ಚಿದಂಬರಂ, ಫಾರೂಕ್ ಅಬ್ದುಲ್ಲಾ ಸಂಸತ್ತಿಗೆ ಬರಲಿ’
ಇನ್ನು ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಜೈಲು ಪಾಲಾಗಿರೋ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂಗೆ ಅಧಿವೇಶನದಲ್ಲಿ ಭಾಗಿಯಾಗಲು ಅವಕಾಶ ನೀಡುವಂತೆ ಕಾಂಗ್ರೆಸ್ ಒತ್ತಾಯಿಸಿದೆ. ಅದೇ ರೀತಿ ಆರ್ಟಿಕಲ್ 370 ರದ್ದು ಮಾಡಿದ ಬಳಿಕ ಗೃಹ ಬಂಧನದಲ್ಲಿರೋ ಫಾರೂಕ್ ಅಬ್ದುಲ್ಲಾಗೂ ಸಂಸತ್ ಕಲಾಪದಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಡುವಂತೆ ನ್ಯಾಷನಲ್ ಕಾನ್ಫರೆನ್ಸ್ ಆಗ್ರಹಿಸಿದೆ. ಆದ್ರೆ, ವಿಪಕ್ಷಗಳ ಬೇಡಿಕೆಗೆ ಕೇಂದ್ರ ಸರ್ಕಾರದಿಂದ ಯಾವುದೇ ಭರವಸೆ ಸಿಕ್ಕಿಲ್ಲ.
ವಿಪಕ್ಷಗಳ ಸಾಲಿನಲ್ಲಿ ಕೂರಲಿದ್ದಾರೆ ಶಿವಸೇನೆ ಸಂಸದರು:
ಎನ್ಡಿಎ ಮೈತ್ರಿಕೂಟದಿಂದ ಹೊರಬಂದ ಹಿನ್ನೆಲೆ ಇಂದಿನಿಂದ ಶಿವಸೇನೆ ಸಂಸದರು ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಪ್ರತಿಪಕ್ಷಗಳ ಸಾಲಿನಲ್ಲಿ ಕೂರಲಿದ್ದಾರೆ. ಅದ್ರಲ್ಲೂ, ಇತ್ತೀಚೆಗಷ್ಟೇ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಅರವಿಂದ್ ಸಾವಂತ್, ಮೊದಲ ಸಾಲಿನಿಂದ ಮೂರನೇ ಸಾಲಿಗೆ ಶಿಫ್ಟ್ ಆಗುತ್ತಿದ್ದಾರೆ.
Published On - 7:48 am, Mon, 18 November 19