ಪಾಟ್ನಾ: ಪಾಟ್ನಾದಲ್ಲಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಂಭ್ರಮಾಚರಣೆಯ ವೇಳೆ ಫೈರಿಂಗ್ ಮಾಡುವಾಗ ಗಾಯಗೊಂಡಿದ್ದ 16 ವರ್ಷದ ಹುಡುಗ ಸಾವನ್ನಪ್ಪಿದ್ದಾನೆ. ಸೋಮವಾರ (ಡಿಸೆಂಬರ್ 23) ಶ್ರೀಕೃಷ್ಣಪುರಿ ಪೊಲೀಸ್ ಠಾಣೆ ವ್ಯಾಪ್ತಿಯ ಲಾಡ್ಜ್‌ನಲ್ಲಿ ಫೈರಿಂಗ್ ನಡೆದಿದೆ. ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಮಂಗಳವಾರ ಮೃತಪಟ್ಟಿದ್ದಾನೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಮೃತ ರಿಶು ಕುಮಾರ್ನನ್ನು ಆಸ್ಪತ್ರೆಗೆ ದಾಖಲಿಸಿದ ನಂತರ ಆತನ ಸ್ನೇಹಿತರು ಪರಾರಿಯಾಗಿದ್ದಾರೆ.
“ನಮಗೆ ಮಧ್ಯರಾತ್ರಿಯ ಹೊತ್ತಿಗೆ ಗಾಂಧಿನಗರ ಪ್ರದೇಶದಲ್ಲಿ ಗುಂಡಿನ ದಾಳಿಯ ಬಗ್ಗೆ ಮಾಹಿತಿ ಬಂದಿತ್ತು. ಹುಟ್ಟುಹಬ್ಬದ ಪಾರ್ಟಿಯಲ್ಲಿ ಗುಂಡು ಹಾರಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿ ನಡೆದಾಗ ತಡರಾತ್ರಿ ಸುಮಾರು 5ರಿಂದ 6 ಯುವಕರು ಲಾಡ್ಜ್‌ನ ಟೆರೇಸ್‌ನಲ್ಲಿ ಪಾರ್ಟಿ ಮಾಡುತ್ತಿದ್ದರು. ಗುಂಡು ಹಾರಿಸಿದ ಪಿಸ್ತೂಲ್ಗೆ ಲೈಸೆನ್ಸ್ ಇರಲಿಲ್ಲ ಎಂದು ವರದಿಯಾಗಿದೆ.
ಇದನ್ನೂ ಓದಿ: ಉತ್ತರಾಖಂಡದ ನೈನಿತಾಲ್‌ನಲ್ಲಿ ಆಳವಾದ ಕಂದಕಕ್ಕೆ ಬಸ್ ಬಿದ್ದು 4 ಜನ ಸಾವು, 24 ಮಂದಿಗೆ ಗಾಯ
ಪಾರ್ಟಿಯಲ್ಲಿದ್ದ ಓರ್ವ ಬಾಲಕ ಗುಂಡು ಹಾರಿಸಿದ್ದು, ಈ ವೇಳೆ ರಿಶು ಕುಮಾರ್ ಕುತ್ತಿಗೆಗೆ ಗುಂಡು ತಗುಲಿದೆ. ಆತನ ಸ್ನೇಹಿತರು ಆತನನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಪರಾರಿಯಾಗಿದ್ದಾರೆ. ಎಲ್ಲರೂ ತಲೆಮರೆಸಿಕೊಂಡಿದ್ದಾರೆ. ಈ ಘಟನೆಯ ಕುರಿತು ಮೃತ ಬಾಲಕನ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಕುಟುಂಬದವರ ಹೇಳಿಕೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ