Pegasus Spyware: ಪೆಗಾಸಸ್ ಬೇಹುಗಾರಿಕೆ ಪ್ರಕರಣ; ಸುಪ್ರೀಂ ಕೋರ್ಟ್​ನಿಂದ ನಾಳೆ ತೀರ್ಪು ಪ್ರಕಟ

| Updated By: ಸುಷ್ಮಾ ಚಕ್ರೆ

Updated on: Oct 26, 2021 | 2:24 PM

Pegasus Spyware Judgement: ಪೆಗಾಸಸ್ ಎಂಬ ಬೇಹುಗಾರಿಕೆ ತಂತ್ರಜ್ಞಾನವನ್ನು ಬಳಸಿ ಭಾರತದ ಪ್ರಮುಖರ ಫೋನ್‌ಗಳನ್ನು ಹ್ಯಾಕ್ ಮಾಡಿದ ಆರೋಪಗಳ ಕುರಿತು ತನಿಖೆ ನಡೆಸಲು ಸಮಿತಿಯನ್ನು ಸ್ಥಾಪಿಸಲು ಅನುಮತಿ ನೀಡುವಂತೆ ಕೇಂದ್ರವು ಈ ಹಿಂದೆ ನ್ಯಾಯಾಲಯವನ್ನು ಕೋರಿತ್ತು.

Pegasus Spyware: ಪೆಗಾಸಸ್ ಬೇಹುಗಾರಿಕೆ ಪ್ರಕರಣ; ಸುಪ್ರೀಂ ಕೋರ್ಟ್​ನಿಂದ ನಾಳೆ ತೀರ್ಪು ಪ್ರಕಟ
ಸುಪ್ರೀಂಕೋರ್ಟ್​
Follow us on

ನವದೆಹಲಿ: ದೇಶಾದ್ಯಂತ ಭಾರೀ ಸದ್ದು ಮಾಡಿದ್ದ ಪೆಗಾಸಸ್ ಬೇಹುಗಾರಿಕೆ (Pegasus Case) (ಫೋನ್ ಕದ್ದಾಲಿಕೆ) ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಂತ್ರ ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆಯನ್ನು ಕೋರಿ ಸಲ್ಲಿಸಲಾದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ (Spreme Court) ನಾಳೆ (ಬುಧವಾರ) ತೀರ್ಪು ಪ್ರಕಟಿಸಲಿದೆ. ಸರ್ಕಾರಿ ಏಜೆನ್ಸಿಗಳಿಂದ ಅನಧಿಕೃತವಾಗಿ ಫೋನ್ ಕದ್ದಾಲಿಕೆ ಮಾಡಲು ಪೆಗಾಸಸ್ ಬೇಹುಗಾರಿಕೆ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಆರೋಪ ಮಾಡಿದ್ದವು. ಈ ಹಿನ್ನೆಲೆಯಲ್ಲಿ ತನಿಖೆ ಮಾಡಲು ತಾಂತ್ರಿಕ ತಜ್ಞರ ಸಮಿತಿಯನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್ ಸೆ. 23ರಂದು ಹೇಳಿತ್ತು. ಆ ಸಮಿತಿಯ ರಚನೆ ಕುರಿತು ಶೀಘ್ರದಲ್ಲೇ ಆದೇಶ ಹೊರಡಿಸುವುದಾಗಿಯೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ತಿಳಿಸಿದ್ದರು.

ಇಸ್ರೇಲಿ ಸಂಸ್ಥೆ ಎನ್‌ಎಸ್‌ಒ ಗ್ರೂಪ್ ಅಭಿವೃದ್ಧಿಪಡಿಸಿದ ಪೆಗಾಸಸ್ ಎಂಬ ಬೇಹುಗಾರಿಕೆ ತಂತ್ರಜ್ಞಾನವನ್ನು ಬಳಸಿ ಭಾರತದ ಹಲವಾರು ಪ್ರಮುಖರ ಫೋನ್‌ಗಳನ್ನು ಹ್ಯಾಕ್ ಮಾಡಿದ ಆರೋಪಗಳ ಕುರಿತು ತನಿಖೆ ನಡೆಸಲು ಸಮಿತಿಯನ್ನು ಸ್ಥಾಪಿಸಲು ಅನುಮತಿ ನೀಡುವಂತೆ ಕೇಂದ್ರವು ಈ ಹಿಂದೆ ನ್ಯಾಯಾಲಯವನ್ನು ಕೋರಿತ್ತು.

ಇದಕ್ಕೂ ಮೊದಲು ಸೆಪ್ಟೆಂಬರ್ 13ರಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು ಈ ಪ್ರಕರಣದಲ್ಲಿ ನ್ಯಾಯಾಲಯದ ಮೇಲ್ವಿಚಾರಣೆಯ ತನಿಖೆಯನ್ನು ಕೋರಿ ಸಲ್ಲಿಸಿದ ಅರ್ಜಿಗಳ ಬ್ಯಾಚ್‌ನ ಆದೇಶವನ್ನು ಕಾಯ್ದಿರಿಸಿತ್ತು.

ಇಸ್ರೇಲ್‌ ಮೂಲದ ಬೇಹುಗಾರಿಕೆ ತಂತ್ರಜ್ಞಾನವನ್ನು ಬಳಸಿ 40ಕ್ಕೂ ಹೆಚ್ಚು ಪತ್ರಕರ್ತರ, ರಾಜಕಾರಣಿಗಳ ಮೊಬೈಲ್‌ ಫೋನ್‌ ಗಳನ್ನು ಹ್ಯಾಕ್‌ ಮಾಡಲಾಗಿದೆ ಎಂಬ ವಿಸ್ತೃತ ಸರಣಿ ವರದಿಗಳನ್ನು ‘ದಿ ವೈರ್’ ಪ್ರಕಟಿಸಿತ್ತು. ದಿ ವೈರ್‌ ಜೊತೆಗೆ 16 ಅಂತಾರಾಷ್ಟ್ರೀಯ ಮಾಧ್ಯಮಗಳು ನಡೆಸಿದ ಕಾರ್ಯಾಚರಣೆಯಲ್ಲಿ ಈ ಮಾಹಿತಿಯು ಬಹಿರಂಗವಾಗಿದ್ದು, ಪೆಗಾಸಸ್‌ ಸ್ಪೈ ವೇರ್‌ ಬಳಸಿಕೊಂಡು ಅಪರಿಚಿತ ಏಜೆನ್ಸಿಯೊಂದು ಯಶಸ್ವಿಯಾಗಿ ಹ್ಯಾಕ್ ಮಾಡಿದೆ ಎಂದು ವರದಿ ತಿಳಿಸಿತ್ತು.

ಬಹಿರಂಗಗೊಂಡ ಫೋನ್‌ ಸಂಖ್ಯೆಗಳಲ್ಲಿ ಕೆಲವು ಫೋನ್‌ ಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ಪೆಗಾಸಸ್‌ ಸ್ಪೈ ವೇರ್‌ ಅಳವಡಿಕೆಗೊಂಡಿರುವುದಾಗಿ ತಿಳಿದು ಬಂದಿತ್ತು. ಪರೀಕ್ಷೆಗೆ ಬಳಸಿದ 37 ಫೋನ್‌ ಗಳಲ್ಲಿ 10 ಫೋನ್‌ ಗಳು ಭಾರತದ್ದಾಗಿದ್ದವು ಎಂದು ವರದಿ ತಿಳಿಸಿತ್ತು. ಪೆಗಾಸಸ್‌ ಅನ್ನು ಮಾರಾಟ ಮಾಡುವ ಇಸ್ರೇಲ್‌ ಮೂಲದ ಎನ್‌ಎಸ್‌ಒ ಗ್ರೂಪ್‌ ತನ್ನ ಗ್ರಾಹಕರ ಕುರಿತು ಮಾಹಿತಿ ನೀಡಲು ನಿರಾಕರಿಸಿತ್ತು. ಆ ಡೇಟಾಬೇಸ್‌ನಲ್ಲಿರುವವರ ಸಂಖ್ಯೆಯಲ್ಲಿ 40 ಕ್ಕೂ ಹೆಚ್ಚು ಪತ್ರಕರ್ತರು, ಮೂರು ಪ್ರಮುಖ ಪ್ರತಿಪಕ್ಷಗಳ ನಾಯಕರು, ಒಬ್ಬ ಸಾಂವಿಧಾನಿಕ ಪ್ರಾಧಿಕಾರದ ಹುದ್ದೆಯಲ್ಲಿರುವವರು, ನರೇಂದ್ರ ಮೋದಿ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಮಂತ್ರಿಗಳು, ಭದ್ರತಾ ಸಂಸ್ಥೆಗಳ ಪ್ರಸ್ತುತ ಮತ್ತು ಮಾಜಿ ಮುಖ್ಯಸ್ಥರು ಹಾಗೂ ಅಧಿಕಾರಿಗಳು, ಹಲವಾರು ಉದ್ಯಮಿಗಳು ಸೇರಿದ್ದಾರೆಂದು ಬಹಿರಂಗಗೊಂಡಿತ್ತು.

ಅನಧಿಕೃತವಾಗಿ ಫೋನ್ ಕದ್ದಾಲಿಕೆ ಮಾಡಲು ಕೇಂದ್ರ ಸರ್ಕಾರ ಪೆಗಾಸಸ್ ಅನ್ನು ಬಳಸಿಕೊಳ್ಳುತ್ತಿದೆ ಎಂಬ ವಿಪಕ್ಷಗಳ ಆರೋಪವನ್ನು ಕೇಂದ್ರ ಸರ್ಕಾರ ನಿರಾಕರಿಸಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ವಿದ್ಯುನ್ಮಾನ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ, ‘ನಿರ್ದಿಷ್ಟ ಜನರ ಮೇಲೆ ಸರ್ಕಾರದ ಕಣ್ಗಾವಲು ಕುರಿತ ಆರೋಪಗಳಿಗೆ ಯಾವುದೇ ದೃಢವಾದ ಆಧಾರ ಅಥವಾ ಸತ್ಯವಿಲ್ಲ. ಈ ಹಿಂದೆ, ರಾಜ್ಯಗಳು ವಾಟ್ಸ್‌ಆ್ಯಪ್‌ನಲ್ಲಿ ಪೆಗಾಸಸ್ ಅನ್ನು ಬಳಸುವುದರ ಬಗ್ಗೆ ಇದೇ ರೀತಿಯ ವಾದ ಮಂಡಿಸಿದ್ದವು. ಆ ವರದಿಗಳಿಗೆ ಯಾವುದೇ ವಾಸ್ತವಿಕ ಆಧಾರಗಳಿರಲಿಲ್ಲ ಮತ್ತು ನಿರ್ದಿಷ್ಟವಾಗಿ ಭಾರತೀಯ ಸುಪ್ರೀಂ ಕೋರ್ಟ್‌ನಲ್ಲಿ ವಾಟ್ಸಾಪ್ ಸೇರಿದಂತೆ ಎಲ್ಲಾ ಅರ್ಜಿದಾರರ ಆರೋಪಗಳನ್ನು ನಿರಾಕರಿಸಲಾಗಿತ್ತು. ಈ ವರದಿಯು ಭಾರತೀಯ ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳನ್ನು ಕೆಣಕುವ ಊಹೆಗಳು ಮತ್ತು ಉತ್ಪ್ರೇಕ್ಷೆಗಳ ಆಧಾರದ ಮೇಲೆ ಇದೇ ರೀತಿಯ ಪಿತೂರಿಯಾಗಿದೆ ಎಂದು ಸ್ಪಷ್ಟನೆ ನೀಡಿತ್ತು.

ಇದನ್ನೂ ಓದಿ: Pegasus row: ತಾಂತ್ರಿಕ ತಜ್ಞರ ಸಮಿತಿ ರಚಿಸಲು ಚಿಂತನೆ; ಪೆಗಾಸಸ್ ಪ್ರಕರಣ ಬಗ್ಗೆ ಸುಪ್ರೀಂ ಆದೇಶ ಮುಂದಿನ ವಾರ

Pegasus row ಪೆಗಾಸಸ್ ವಿವಾದ ಬಗ್ಗೆ ವಿವರವಾದ ಅಫಿಡವಿಟ್ ಸಲ್ಲಿಸುವುದಿಲ್ಲ: ಸುಪ್ರೀಂಕೋರ್ಟ್​​ನಲ್ಲಿ ಕೇಂದ್ರ ಹೇಳಿಕೆ

Published On - 2:20 pm, Tue, 26 October 21